ನವ ದೆಹಲಿ: 2016ರ ನವೆಂಬರ್ 8 ಅನ್ನು ಯಾವ ಭಾರತೀಯ ತಾನೇ ಮರೆಯಲು ಸಾಧ್ಯ? ದೇಶದ ಪಾಲಿಗೆ ಐತಿಹಾಸಿಕ ದಿನ ಅದು. ದೇಶದ ಎರಡು ಪ್ರಮುಖ ಕರೆನ್ಸಿ ನೋಟುಗಳಾದ 500 ಮತ್ತು 1,000 ರೂ. ನೋಟುಗಳನ್ನು ಅಮಾನ್ಯಗೊಳಿಸಿ ಅಂದು ಪ್ರಧಾನ ಮಂತ್ರಿ ಘೋಷಣೆ ಹೊರಡಿಸಿದ್ದರು. ಇತ್ತ ಹೊಸದಾಗಿ ಚಲಾವಣೆಗೆ ತಂದ 2 ಸಾವಿರದ ನೋಟುಗಳನ್ನು ಇತ್ತೀಚೆಗೆ ಹಂಪಡೆಯಲಾಗಿದೆ. ಈ ಮಧ್ಯೆ 1,000 ರೂ.ಗಳ ನೋಟು ಮತ್ತೆ ಚಲಾವಣೆಗೆ ಬರಲಿದೆ ಎನ್ನುವ ವದಂತಿ ಹರಡಿದೆ. ಈ ಸಾಧ್ಯತೆಯನ್ನು ಆರ್‌ಬಿಐ ತಳ್ಳಿಹಾಕಿದೆ (RBI Clarification).
ಅಪನಗದೀಕರಣದ ಏಳು ವರ್ಷಗಳ ನಂತರ 2,000 ರೂ.ಗಳ ನೋಟುಗಳನ್ನು ಹಿಂಪಡೆಯಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2,000 ರೂ. ನೋಟುಗಳ ಚಲಾವಣೆ ನಿಲ್ಲಿಸಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಸೂಚಿಸಿದೆ. ವರದಿಗಳ ಪ್ರಕಾರ ಸುಮಾರು ಶೇ.87ರಷ್ಟು 2 ಸಾವಿರದ ನೋಟುಗಳು ಠೇವಣಿ ರೂಪದಲ್ಲಿ ಮರಳಿ ಬಂದಿದೆ. ಈ ಮಧ್ಯೆ 10 ಸಾವಿರ ಕೋಟಿ ರೂ. ಮೌಲ್ಯದ 2 ಸಾವಿರ ರೂ. ನೋಟು ಇನ್ನೂ ಜನರ ಬಳಿಯಲ್ಲೇ ಇದೆ ಎಂದು ಆರ್‌ಬಿಐ ತಿಳಿಸಿದೆ.
RBI is not in consideration of the re-introduction of Rs 1000 note: Sources
— ANI (@ANI) October 20, 2023
ಆರ್‌ಬಿಐ ಹೇಳೋದೇನು?
ಮತ್ತೆ 1,000 ರೂ. ಮುಖಬೆಲೆಯ ನೋಟುಗಳನ್ನು ಮತ್ತೆ ಚಲಾವಣೆಗೆ ತರಲು 2,000 ರೂ.ಗಳ ನೋಟುಗಳನ್ನು ಹಿಂಪಡೆಯಲಾಗಿದೆ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ. ಸದ್ಯ ಎಲ್ಲ ಊಹಾಪೋಹಗಳಿಗೆ ವಿರಾಮ ಇಡಲು ಆರ್‌ಬಿಐ ನಿರ್ಧರಿಸಿದೆ. “1,000 ರೂ.ಗಳ ನೋಟನ್ನು ಮತ್ತೆ ಪರಿಚಯಿಸುವ ಬಗ್ಗೆ ಆರ್‌ಬಿಐ ಚಿಂತನೆ ನಡೆಸಿಲ್ಲʼʼ ಎಂದು ಸುದ್ದಿಸಂಸ್ಥೆ ಎಎನ್‌ಐ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತಿಳಿಸಿದೆ.
ದೇಶದಲ್ಲಿ 500 ರೂ.ಗಳ ನೋಟುಗಳ ಚಲಾವಣೆಯು ನಗದು ಅಗತ್ಯಗಳನ್ನು ಪೂರೈಸಲು ಸಾಕಾಗುತ್ತದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಮಾತ್ರವಲ್ಲ ಭಾರತದಲ್ಲಿ ಡಿಜಿಟಲ್ ವಹಿವಾಟು ಹೆಚ್ಚಾಗುತ್ತಿದ್ದು, ಬಹುತೇಕರು ಆ ಕಡೆ ವಾಲುತ್ತಿದ್ದಾರೆ. ಇದು ಕೂಡ ನೋಟುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ. ವದಂತಿ ಬಗ್ಗೆ ಸೆಂಟ್ರಲ್ ಬ್ಯಾಂಕ್ ಕೂಡ ಎಚ್ಚರಿಕೆ ನೀಡಿದೆ.
ಆರಂಭದಲ್ಲಿ 2,000 ಮುಖಬೆಲೆಯ ನೋಟುಗಳನ್ನು ಠೇವಣಿ ಇಡುವ ಗಡುವನ್ನು ಸೆಪ್ಟೆಂಬರ್ 30ಕ್ಕೆ ನಿಗದಿ ಪಡಿಸಲಾಗಿತ್ತು. ಬಳಿಕ ಅದನ್ನು ಅಕ್ಟೋಬರ್ 7ರ ವರೆಗೆ ವಿಸ್ತರಿಸಲಾಯಿಗಿತ್ತು. ಅಕ್ಟೋಬರ್ 8ರಿಂದ 2,000 ನೋಟುಗಳನ್ನು ದೇಶಾದ್ಯಂತ ಇರುವ 19 ಆರ್‌ಬಿಐ ಕಚೇರಿಗಳ ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲು ಅವಕಾಶವಿದೆ. ಇದೀಗ 19 ಆರ್‌ಬಿಐ ಶಾಖೆಗಳಲ್ಲಿ ಒಮ್ಮಲೇ 20,000 ರೂ.ಗಳವರೆಗೆ 2,000 ರೂ.ಗಳ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಇದೇ ವೇಳೆ 2,000 ರೂ.ಗಳ ನೋಟುಗಳನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಎಷ್ಟು ಬೇಕಾರೂ ಠೇವಣಿ ಇಡಬಹುದಾಗಿದೆ.
2023ರ ಮೇ 19ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತ್ವರಿತ ನೋಟು ಅಮಾನ್ಯೀಕರಣ ಪ್ರಯತ್ನದ ಭಾಗವಾಗಿ 2016ರಲ್ಲಿ ಪರಿಚಯಿಸಲಾದ 2,000 ರೂ.ಗಳ ನೋಟನ್ನು ಹಂತ ಹಂತವಾಗಿ ರದ್ದುಗೊಳಿಸುವ ಯೋಜನೆಯನ್ನು ಘೋಷಿಸಿತ್ತು.
ಇದನ್ನೂ ಓದಿ: Cryptocurrency scam: ಬಹುಕೋಟಿ ಕ್ರಿಪ್ಟೋಕರೆನ್ಸಿ ಹಗರಣ, 6 ಮಂದಿ ಭಾರತೀಯರ ವಿರುದ್ಧ ಎಫ್‌ಬಿಐ ಆರೋಪ