ಮುಂಬೈ: ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಕೊಟಕ್ ಮಹೀಂದ್ರಾ ಬ್ಯಾಂಕ್‌ಗೆ (Kotak Bank) ಆರ್‌ಬಿಐ (RBI) ಶಾಕ್ ನೀಡಿದೆ. ನೂತನ ಗ್ರಾಹಕರಿಗೆ ಕ್ರೆಡಿಟ್ ಕಾರ್ಟ್ ವಿತರಣೆ ಮಾಡಬಾರದು. ಹಾಗೆಯೇ, ಹೊಸ ಗ್ರಾಹಕರಿಗೆ ಆನ್‌ಲೈನ್, ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಬಾರದು ಎಂಬುದು ಸೇರಿ ಹಲವು ನಿರ್ಬಂಧಗಳನ್ನು ವಿಧಿಸಿದೆ. ಇದರಿಂದಾಗಿ ಬ್ಯಾಂಕ್‌ಗೆ ಭಾರಿ ನಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈಗಾಗಲೇ ಕೊಟಕ್ ಮಹೀಂದ್ರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು (Kotak Mahindra Bank Credit Cards) ಹೊಂದಿದವರ ಮೇಲೆ ಏನು ಪರಿಣಾಮ ಆಗಲಿದೆ? ಅವರಿಗೆ ಮೊಬೈಲ್ ಬ್ಯಾಂಕಿಂಗ್, ಆನ್‌ಲೈನ್ ಸೇವೆ ಇರಲಿದೆಯೇ? ಈ ಕುರಿತು ಆರ್‌ಬಿಐ ಹೇಳಿದ್ದೇನು? ಇಲ್ಲಿದೆ ಮಾಹಿತಿ.
ನೂತನ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ವಿತರಿಸುವುದು, ಅವರಿಗೆ ಆನ್‌ಲೈನ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವುದಕ್ಕೆ ಆರ್‌ಬಿಐ ನಿರ್ಬಂಧ ಹೇರಿರುವ ಕಾರಣ ಹಳೆಯ ಗ್ರಾಹಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈಗಾಗಲೇ ಕೊಟಕ್ ಮಹೀಂದ್ರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು, ಆನ್‌ಲೈನ್ ಹಾಗೂ ಮೊಬೈಲ್ ಬ್ಯಾಂಕ್ ಸೌಲಭ್ಯ ಹೊಂದಿರುವವರು ಸೇವೆಗಳನ್ನು ಪಡೆಯಬಹುದಾಗಿದೆ. ಹಾಗಾಗಿ, ಹಳೆಯ ಗ್ರಾಹಕರಿಗೆ ಆರ್‌ಬಿಐ ಆದೇಶದಿಂದ ಯಾವುದೇ ತೊಂದರೆ ಆಗುವುದಿಲ್ಲ.
Reserve Bank of India has today directed Kotak Mahindra Bank Limited to cease and desist, with immediate effect, from onboarding new customers through its online and mobile banking channels and issuing fresh credit cards.
— ANI (@ANI) April 24, 2024
These actions are necessitated based on significant… pic.twitter.com/ccMz1EJRlI
ಹೊಸ ಗ್ರಾಹಕರಿಗೆ ಮಾತ್ರ ಆರ್‌ಬಿಐ ನಿರ್ಬಂಧಗಳು ಅನ್ವಯವಾಗುತ್ತವೆ ಎಂದು ಈಗಾಗಲೇ ಕೊಟಕ್ ಮಹೀಂದ್ರಾ ಬ್ಯಾಂಕ್ ತಿಳಿಸಿದೆ. “ಈಗಾಗಲೇ ಆನ್‌ಲೈನ್, ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಹೊಂದಿರುವ ಗ್ರಾಹಕರಿಗೆ ಕೊಟಕ್ ಮಹೀಂದ್ರಾ ಬ್ಯಾಂಕ್ ಸೇವೆಗಳನ್ನು ಮುಂದುವರಿಸಬಹುದು. ಈಗಾಗಲೇ ಕ್ರೆಡಿಟ್ ಕಾರ್ಡ್ ಹೊಂದಿರುವ ಹಳೆಯ ಗ್ರಾಹಕರಿಗೂ ಸೇವೆಗಳನ್ನು ಮುಂದುವರಿಸಲು ಯಾವುದೇ ನಿರ್ಬಂಧವಿಲ್ಲ” ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ. ಈ ಕುರಿತು ಕೊಟಕ್ ಮಹೀಂದ್ರಾ ಬ್ಯಾಂಕ್ ಸ್ಪಷ್ಟನೆ ನೀಡಿದ್ದು, “ಹಳೆಯ ಗ್ರಾಹಕರಿಗೆ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ” ಎಂದು ತಿಳಿಸಿದೆ.
ಆರ್‌ಬಿಐ ನಿರ್ಬಂಧಕ್ಕೆ ಕಾರಣ ಏನು?
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ 35ಎ ಸೆಕ್ಷನ್‌ನ ಅಡಿಯಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧಗಳನ್ನು ವಿಧಿಸಿದೆ. ಆರ್‌ಬಿಐ ನಿಯಮಗಳ ಪಾಲನೆ ಮಾಡದ ಹಿನ್ನೆಲೆಯಲ್ಲಿ ಆರ್‌ಬಿಐ ನಿರ್ಬಂಧಗಳನ್ನು ವಿಧಿಸಿದೆ ಎಂದು ತಿಳಿದುಬಂದಿದೆ. “ನೂತನ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಬಾರದು. ಹಾಗೆಯೇ, ಹೊಸ ಗ್ರಾಹಕರಿಗೆ ಆನ್‌ಲೈನ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಬಾರದು. ತತ್‌ಕ್ಷಣದಿಂದಲೇ ನಿರ್ಬಂಧಗಳು ಜಾರಿಗೆ ಬರಲಿವೆ” ಎಂದು ಆರ್‌ಬಿಐ ಆದೇಶಿಸಿದೆ.
ಕೊಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರು ಆನ್‌ಲೈನ್ ಮೂಲಕ ವಹಿವಾಟು ನಡೆಸಲು ಬ್ಯಾಂಕ್ ಸರಿಯಾದ ಸುರಕ್ಷತೆ ಒದಗಿಸಿಲ್ಲ. 2022 ಹಾಗೂ 2023ರಲ್ಲಿ ಐಟಿ ಪರಿಶೀಲನೆ ಕುರಿತು ಆರ್‌ಬಿಐ ಆತಂಕ ವ್ಯಕ್ತಪಡಿಸಿದರೂ ಸುರಕ್ಷತೆ ನೀಡುವಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ವಿಫಲವಾಗಿದೆ. ಬ್ಯಾಂಕ್‌ನ ಐಟಿ ಮೂಲ ಸೌಕರ್ಯ, ಐಟಿ ನಿರ್ವಹಣೆ, ಪ್ಯಾಚ್ ಮತ್ತು ಚೇಂಜ್ ಮ್ಯಾನೇಜ್‌ಮೆಂಟ್, ಬಳಕೆದಾರರ ಅನುಮತಿ ನಿರ್ವಹಣೆ, ವೆಂಡರ್ ರಿಸ್ಕ್ ಮ್ಯಾನೇಜ್‌ಮೆಂಟ್, ಡೇಟಾ ಸೆಕ್ಯುರಿಟಿ ಸೇರಿ ಹಲವು ಸುರಕ್ಷತೆಗಳನ್ನು ಒದಗಿಸುವಲ್ಲಿ ಬ್ಯಾಂಕ್ ವಿಫಲವಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಇದೇ ಕಾರಣಕ್ಕಾಗಿ ನಿರ್ಬಂಧಗಳನ್ನು ವಿಧಿಸಿದೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ: Kotak Mahindra Bank: ಹೊಸ ಕ್ರೆಡಿಟ್ ಕಾರ್ಡ್ ನೀಡದಂತೆ ಕೊಟಕ್ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ; ಕಾರಣ ಇಲ್ಲಿದೆ