Site icon Vistara News

Rs 2000 Notes: 2 ಸಾವಿರ ರೂ. ನೋಟು ಹಿಂತಿರುಗಿಸುವ ಗಡುವು ವಿಸ್ತರಣೆ; ಇದು ಲಾಸ್ಟ್‌ ಡೇಟ್

2000 rupees notes

ಮುಂಬೈ: ದೇಶದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು (Rs 2000 Notes) ಬ್ಯಾಂಕ್‌ಗಳಿಗೆ ಹಿಂತಿರುಗಿಸುವ ಗಡುವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (Reserve Bank Of India) ಅಕ್ಟೋಬರ್‌ 7ರವರೆಗೆ ವಿಸ್ತರಣೆ ಮಾಡಿದೆ. ಹಾಗಾಗಿ, ಸಾರ್ವಜನಿಕರು ಸೆಪ್ಟೆಂಬರ್‌ 30ರ ಬದಲು ಅಕ್ಟೋಬರ್‌ 7ರವರೆಗೆ ಬ್ಯಾಂಕ್‌ಗಳಿಗೆ ತೆರಳಿ ನೋಟುಗಳನ್ನು ಬದಲಾವಣೆ ಅಥವಾ ಬ್ಯಾಂಕ್‌ ಖಾತೆಗೆ ಠೇವಣಿ ಮಾಡಿಸಿಕೊಳ್ಳಬಹುದಾಗಿದೆ.

ಮೇ 19ರಂದು ಆರ್‌ಬಿಐ ಹೊರಡಿಸಿದ ಆದೇಶದ ಪ್ರಕಾರ ನೋಟುಗಳನ್ನು ಹಿಂತಿರುಗಿಸಲು ಸೆಪ್ಟೆಂಬರ್‌ 30 ಕೊನೆಯ ದಿನವಾಗಿತ್ತು. ಅದರಂತೆ, ಜನರು ಕೂಡ ಬ್ಯಾಂಕ್‌ಗಳಿಗೆ ತೆರಳಿ ನೋಟು ವಾಪಸ್‌ ನೀಡಿದ್ದರು. ಬ್ಯಾಂಕ್ ಖಾತೆಗಳಿಗೆ ಠೇವಣಿ ಮಾಡಿಸಿಕೊಂಡಿದ್ದರು. ಆದರೆ, ಎಲ್ಲ ನೋಟುಗಳು ಹಿಂತಿರುಗದ ಕಾರಣ ಈಗ ನೋಟುಗಳ ವಾಪಸಾತಿಯ ಗಡುವನ್ನು ವಿಸ್ತರಣೆ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅಂದಹಾಗೆ, 2016ರ ನವೆಂಬರ್‌ನಲ್ಲಿ ಐನೂರು ಹಾಗೂ ಸಾವಿರ ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ಬಳಿಕ ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಗಿತ್ತು.

ಗಡುವು ವಿಸ್ತರಣೆ ಏಕೆ?

RBI ಒದಗಿಸಿದ ಮಾಹಿತಿಯ ಪ್ರಕಾರ, ಚಲಾವಣೆಯಲ್ಲಿರುವ ನೋಟುಗಳಲ್ಲಿ ಸರಿಸುಮಾರು 93 ಪ್ರತಿಶತದಷ್ಟು ಬ್ಯಾಂಕ್‌ಗಳಿಗೆ ಮರಳಿದೆ. ಆಗಸ್ಟ್ 31, 2023ರೊಳಗೆ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲಾದ 2,000 ರೂ. ನೋಟುಗಳ ಒಟ್ಟು ಮೌಲ್ಯ 3.32 ಲಕ್ಷ ಕೋಟಿ ರೂ. ಆಗಿದೆ. ಆದರೆ, ಇನ್ನೂ 24 ಸಾವಿರ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳು ಚಲಾವಣೆಯಲ್ಲಿ ಉಳಿದಿವೆ. ಇವುಗಳನ್ನು ಕೂಡ ಸಂಗ್ರಹಿಸುವ ದಿಸೆಯಲ್ಲಿ ಒಂದು ತಿಂಗಳು ಗಡುವು ವಿಸ್ತರಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ‌

ಇದನ್ನೂ ಓದಿ: Financial Rules Change: ನಾಳೆಯಿಂದ 10 ಪ್ರಮುಖ ನಿಯಮಗಳ ಬದಲಾವಣೆ; ತಿಳಿಯದಿದ್ದರೆ ಲಾಸ್‌ ತಪ್ಪಿದ್ದಲ್ಲ!

ಆರ್‌ಬಿಐ ಕಾಯ್ದೆಯ ಸೆಕ್ಷನ್‌ 24 (1)ರ ಪ್ರಕಾರ ದೇಶದಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಈ ಕುರಿತು ಕೇಂದ್ರ ಸರ್ಕಾರವು ಕಳೆದ ಮೇ 19ರಂದು ಆದೇಶ ಹೊರಡಿಸಿದೆ. 2018-19ನೇ ಸಾಲಿನಲ್ಲಿಯೇ 2 ಸಾವಿರ ರೂ. ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ. ಇದುವರೆಗೆ ಬ್ಯಾಂಕುಗಳಿಗೆ ಗ್ರಾಹಕರು ನೀಡಿದ ನೋಟುಗಳನ್ನು ಸಂಗ್ರಹಿಸಲಾಗುತ್ತಿತ್ತು. ಇನ್ನು ಮುಂದೆ ಚಲಾವಣೆಯೂ ರದ್ದಾಗಲಿದೆ. ಕ್ಲೀನ್‌ ನೋಟ್‌ ಪಾಲಿಸಿ (Clean Note Policy) ಅನ್ವಯ, ಅಂದರೆ, ಜನರಿಗೆ ಗುಣಮಟ್ಟದ ನೋಟುಗಳನ್ನು ನೀಡುವ ದೃಷ್ಟಿಯಿಂದ 2 ಸಾವಿರ ರೂ. ನೋಟುಗಳನ್ನು ಹಿಂತೆಗೆಯಲು ತೀರ್ಮಾನಿಸಲಾಗಿದೆ.

Exit mobile version