ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (Punjab National Bank) ಭಾರತೀಯ ರಿಸರ್ವ್ ಬ್ಯಾಂಕ್ 1.31 ಕೋಟಿ ರೂಪಾಯಿ ದಂಡ ವಿಧಿಸಿದೆ. ಆರ್‌ಬಿಐ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಕೇಂದ್ರೀಯ ಬ್ಯಾಂಕ್ ಪಿಎನ್‌ಬಿಗೆ (PNB) ದಂಡ ವಿಧಿಸಿದೆ. ಕೆವೈಸಿ (Know Your Customer), ಸಾಲಗಳು ಹಾಗೂ ಅಡ್ವಾನ್ಸಸ್ ಕುರಿತು ನಿಯಮಗಳನ್ನು ಪಾಲಿಸಲು ಪಿಎನ್‌ಬಿ ವಿಫಲವಾದ ಕಾರಣ ಆರ್‌ಬಿಐ ದಂಡದ (RBI Fine) ಬರೆ ಎಳೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿ ಎರಡು ರಾಜ್ಯಗಳಲ್ಲಿರುವ ರಾಜ್ಯ ಸರ್ಕಾರಿ ಒಡೆತನದ ನಿಗಮಗಳಿಗೆ ಸಾಲ ನೀಡಿರುವುದು ಸೇರಿ ಹಲವು ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಪಿಎನ್‌ಬಿಗೆ ಆರ್‌ಬಿಐ ನೋಟಿಸ್ ಜಾರಿಗೊಳಿಸಿತ್ತು. ನೋಟಿಸ್‌ಗೆ ಪಿಎನ್‌ಬಿ ನೀಡಿದ ಪ್ರತಿಕ್ರಿಯೆಯ ಆಧಾರದ ಮೇಲೆ ಆರ್‌ಬಿಐ ದಂಡ ವಿಧಿಸಿದೆ ಎಂದು ತಿಳಿದುಬಂದಿದೆ.
ಬ್ಯಾಂಕ್ ಆಫ್ ಇಂಡಿಯಾಗೆ ಕಳೆದ ತಿಂಗಳು ದಂಡ
ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಕಳೆದ ಜೂನ್ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 1.45 ಕೋಟಿ ರೂ. ದಂಡ ವಿಧಿಸಿತ್ತು. ಸಾಲಗಳು ಹಾಗೂ ಮುಂಗಡಗಳು, ಗ್ರಾಹಕರ ರಕ್ಷಣೆಯ ಕುರಿತು ಆರ್‌ಬಿಐ ಜಾರಿಗೆ ತಂದಿರುವ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಮುಂಬೈ ಮೂಲದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ದಂಡ ವಿಧಿಸಲಾಗಿತ್ತು.
ಅನುತ್ಪಾದಕ ಆಸ್ತಿ (NPA) ಬಿಕ್ಕಟ್ಟು ನಿವಾರಣೆ, ಬ್ಯಾಂಕ್‌ಗಳ ದಿವಾಳಿತನ ತಡೆಗಾಗಿ ಹಲವು ನಿಯಮಗಳನ್ನು ಆರ್‌ಬಿಐ ಜಾರಿಗೆ ತಂದಿದೆ. ಹಾಗಾಗಿ, ಎಲ್ಲ ಬ್ಯಾಂಕ್‌ಗಳು ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಿಯಮಗಳನ್ನು ಪಾಲಿಸುವಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಆರ್‌ಬಿಐ ದಂಡ ವಿಧಿಸುತ್ತದೆ. ಆರ್‌ಬಿಐ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿಯೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಹಿವಾಟನ್ನು ಸ್ಥಗಿತಗೊಳಿಸಲಾಗಿದೆ.
ಕೆಲ ತಿಂಗಳ ಹಿಂದೆಯೂ ಮೂರು ಬ್ಯಾಂಕ್‌ಗಳಿಗೆ ಆರ್‌ಬಿಐ ದಂಡ ವಿಧಿಸಿತ್ತು. ಎಸ್‌ಬಿಐಗೆ 2 ಕೋಟಿ ರೂ. ದಂಡ ವಿಧಿಸಲಾಗಿತ್ತು. ಠೇವಣಿದಾರರ ಶೈಕ್ಷಣಿಕ ಜಾಗೃತಿ ಫಂಡ್ ಯೋಜನೆ (2014) ಅಡಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ದಂಡ ವಿಧಿಸಿತ್ತು. ಆದಾಯ ಗುರುತಿಸುವ ಮಾನದಂಡಗಳು, ಅನುತ್ಪಾದಕ ಆಸ್ತಿ ಪತ್ತೆಹಚ್ಚುವಲ್ಲಿ ಚ್ಯುತಿ ಸೇರಿ ಹಲವು ಕಾರಣಗಳಿಂದಾಗಿ ಸಿಟಿ ಯುನಿಯನ್ ಬ್ಯಾಂಕ್‌ಗೆ 66 ಲಕ್ಷ ರೂ. ದಂಡ ವಿಧಿಸಿತ್ತು. ಮತ್ತೊಂದೆಡೆ, ಆರ್‌ಬಿಐ ನಿರ್ದೇಶನಗಳನ್ನು ಪಾಲಿಸುವಲ್ಲಿ ವಿಫಲವಾದ ಕೆನರಾ ಬ್ಯಾಂಕ್‌ಗೆ 32.30 ಲಕ್ಷ ರೂ. ದಂಡ ವಿಧಿಸಿತ್ತು.
ಇದನ್ನೂ ಓದಿ: RBI Dividend: ಆರ್‌ಬಿಐನಿಂದ ಕೇಂದ್ರಕ್ಕೆ 2.11 ಲಕ್ಷ ಕೋಟಿ ರೂ. ಡಿವಿಡೆಂಡ್! ಮುಂದಿನ ಸರ್ಕಾರಕ್ಕೆ ವರ!