Site icon Vistara News

RBI Penalty: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ 1.45 ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ; ಕಾರಣ ಏನು?

RBI Penalty

RBI Imposes Rs 1.45-Crore Penalty on Central Bank of India

ಮುಂಬೈ: ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ (Central Bank Of India) ಭಾರತೀಯ ರಿಸರ್ವ್‌ ಬ್ಯಾಂಕ್‌ 1.45 ಕೋಟಿ ರೂ. ದಂಡ (RBI Penalty) ವಿಧಿಸಿದೆ. ಸಾಲಗಳು ಹಾಗೂ ಮುಂಗಡಗಳು, ಗ್ರಾಹಕರ ರಕ್ಷಣೆಯ ಕುರಿತು ಆರ್‌ಬಿಐ ಜಾರಿಗೆ ತಂದಿರುವ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಮುಂಬೈ ಮೂಲದ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ದಂಡ ವಿಧಿಸಿ ಜೂನ್‌ 11ರಂದು ಆರ್‌ಬಿಐ ಆದೇಶ ಹೊರಡಿಸಿದೆ.

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾವು ನಿಯಮಗಳ ಉಲ್ಲಂಘನೆ ಕುರಿತು ಇತ್ತೀಚೆಗೆ ತನಿಖೆ ನಡೆಸಲಾಗಿತ್ತು. ವರದಿಯ ಬಳಿಕ ಬ್ಯಾಂಕ್‌ಗೆ ಆರ್‌ಬಿಐ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿತ್ತು. ಆರ್‌ಬಿಐ ನಿಯಮಗಳ ಉಲ್ಲಂಘನೆ, ನೋಟಿಸ್‌ಗೆ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ನೀಡಿದ ಪ್ರತಿಕ್ರಿಯೆ ಆಧರಿಸಿ ದಂಡ ವಿಧಿಸಿದೆ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ. ಇದೇ ಕಾರಣಕ್ಕಾಗಿ, ಸೊನಾಲಿ ಬ್ಯಾಂಕ್‌ ಪಿಎಲ್‌ಸಿಗೂ ಆರ್‌ಬಿಐ 96.4 ಲಕ್ಷ ರೂ. ದಂಡ ವಿಧಿಸಿದೆ. ಪ್ರತ್ಯೇಕವಾಗಿ ಸೊನಾಲಿ ಬ್ಯಾಂಕ್‌ ಪಿಎಲ್‌ಸಿಗೆ ದಂಡ ವಿಧಿಸಲಾಗಿದೆ.

ಅನುತ್ಪಾದಕ ಆಸ್ತಿ (NPA) ಬಿಕ್ಕಟ್ಟು ನಿವಾರಣೆ, ಬ್ಯಾಂಕ್‌ಗಳ ದಿವಾಳಿತನ ತಡೆಗಾಗಿ ಹಲವು ನಿಯಮಗಳನ್ನು ಆರ್‌ಬಿಐ ಜಾರಿಗೆ ತಂದಿದೆ. ಹಾಗಾಗಿ, ಎಲ್ಲ ಬ್ಯಾಂಕ್‌ಗಳು ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಿಯಮಗಳನ್ನು ಪಾಲಿಸುವಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಆರ್‌ಬಿಐ ದಂಡ ವಿಧಿಸುತ್ತದೆ. ಆರ್‌ಬಿಐ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿಯೇ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ವಹಿವಾಟನ್ನು ಸ್ಥಗಿತಗೊಳಿಸಲಾಗಿದೆ.

ಕೆಲ ತಿಂಗಳ ಹಿಂದೆಯೂ ಮೂರು ಬ್ಯಾಂಕ್‌ಗಳಿಗೆ ಆರ್‌ಬಿಐ ದಂಡ ವಿಧಿಸಿತ್ತು. ಎಸ್‌ಬಿಐಗೆ 2 ಕೋಟಿ ರೂ. ದಂಡ ವಿಧಿಸಲಾಗಿತ್ತು. ಠೇವಣಿದಾರರ ಶೈಕ್ಷಣಿಕ ಜಾಗೃತಿ ಫಂಡ್‌ ಯೋಜನೆ (2014) ಅಡಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ದಂಡ ವಿಧಿಸಿತ್ತು. ಆದಾಯ ಗುರುತಿಸುವ ಮಾನದಂಡಗಳು, ಅನುತ್ಪಾದಕ ಆಸ್ತಿ ಪತ್ತೆಹಚ್ಚುವಲ್ಲಿ ಚ್ಯುತಿ ಸೇರಿ ಹಲವು ಕಾರಣಗಳಿಂದಾಗಿ ಸಿಟಿ ಯುನಿಯನ್‌ ಬ್ಯಾಂಕ್‌ಗೆ 66 ಲಕ್ಷ ರೂ. ದಂಡ ವಿಧಿಸಿತ್ತು. ಮತ್ತೊಂದೆಡೆ, ಆರ್‌ಬಿಐ ನಿರ್ದೇಶನಗಳನ್ನು ಪಾಲಿಸುವಲ್ಲಿ ವಿಫಲವಾದ ಕೆನರಾ ಬ್ಯಾಂಕ್‌ಗೆ 32.30 ಲಕ್ಷ ರೂ. ದಂಡ ವಿಧಿಸಿತ್ತು.

ಇದನ್ನೂ ಓದಿ: RBI news: ನಿಯಮ ಪಾಲಿಸದ ಎಲ್‌&ಟಿ ಫೈನಾನ್ಸ್‌ಗೆ ₹2.5 ಕೋಟಿ ದಂಡ ವಿಧಿಸಿದ ಆರ್‌ಬಿಐ

Exit mobile version