Site icon Vistara News

Rs 2000 Notes: 2 ಸಾವಿರ ರೂ. ನೋಟು ಹಿಂತಿರುಗಿಸುವ ಡೆಡ್‌ಲೈನ್‌ ವಿಸ್ತರಣೆ? ನಿಖರ ಮಾಹಿತಿ ಇಲ್ಲಿದೆ

2000 rupees notes

ನವದೆಹಲಿ: ದೇಶದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು (Rs 2000 Notes) ಬ್ಯಾಂಕ್‌ಗಳಿಗೆ ಹಿಂತಿರುಗಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ನೀಡಿದ ಗಡುವು ಮುಗಿಯಲು ಇನ್ನೊಂದೇ ದಿನ ಬಾಕಿ ಇದೆ. ಇದರ ಬೆನ್ನಲ್ಲೇ ಆರ್‌ಬಿಐ ಇನ್ನೊಂದು ತಿಂಗಳು ಗಡುವು ವಿಸ್ತರಣೆ ಮಾಡುತ್ತದೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್‌ 30 ಇದುವರೆಗಿನ ಗಡುವಾಗಿದ್ದು, ಇದನ್ನು ಅಕ್ಟೋಬರ್‌ 31ರವರೆಗೆ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

“ವಿದೇಶಕ್ಕೆ ಅಧ್ಯಯನ ಸೇರಿ ಹಲವು ಕಾರಣಗಳಿಗಾಗಿ ತೆರಳಿದವರು, ಅನಿವಾಸಿ ಭಾರತೀಯರು (ಅಲ್ಲಿಯೇ ನೆಲೆಸಿದವರು) ಇನ್ನೂ ಆರ್‌ಬಿಐಗೆ ನೋಟುಗಳನ್ನು ಹಿಂತಿರುಗಿಸಿಲ್ಲ. ಹಾಗಾಗಿ, ಭಾರತೀಯ ರಿಸರ್ವ್‌ ಬ್ಯಾಂಕ್‌ ಇನ್ನೊಂದು ತಿಂಗಳಿಗೆ ನೋಟು ವಾಪಸ್‌ ಮಾಡುವ ಗಡುವನ್ನು ವಿಸ್ತರಣೆ ಮಾಡುವ ಸಾಧ್ಯತೆ ಹೆಚ್ಚಿದೆ” ಎಂದು ಆರ್‌ಬಿಐ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗಾಗಿ, ಅಕ್ಟೋಬರ್‌ 31ರವರೆಗೆ ಡೆಡ್‌ಲೈನ್‌ ವಿಸ್ತರಣೆ ಖಚಿತ ಎನ್ನಲಾಗುತ್ತಿದೆ.

24 ಸಾವಿರ ಕೋಟಿ ರೂ. ಮೌಲ್ಯದ ನೋಟು ವಾಪಸ್‌ ಬಂದಿಲ್ಲ

RBI ಒದಗಿಸಿದ ಮಾಹಿತಿಯ ಪ್ರಕಾರ, ಚಲಾವಣೆಯಲ್ಲಿರುವ ನೋಟುಗಳಲ್ಲಿ ಸರಿಸುಮಾರು 93 ಪ್ರತಿಶತದಷ್ಟು ಬ್ಯಾಂಕ್‌ಗಳಿಗೆ ಮರಳಿದೆ. ಆಗಸ್ಟ್ 31, 2023ರೊಳಗೆ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲಾದ 2,000 ರೂ. ನೋಟುಗಳ ಒಟ್ಟು ಮೌಲ್ಯ 3.32 ಲಕ್ಷ ಕೋಟಿ ರೂ. ಆಗಿದೆ. ಆದರೆ, ಇನ್ನೂ 24 ಸಾವಿರ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳು ಚಲಾವಣೆಯಲ್ಲಿ ಉಳಿದಿವೆ. ಇವುಗಳನ್ನು ಕೂಡ ಸಂಗ್ರಹಿಸುವ ದಿಸೆಯಲ್ಲಿ ಒಂದು ತಿಂಗಳು ಗಡುವು ವಿಸ್ತರಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Currency Notes : ಈ ಮಾರ್ಕ್‌ ಇರುವ ಕರೆನ್ಸಿ ನೋಟುಗಳು ನಕಲಿ ಅಲ್ಲ: ಆರ್‌ಬಿಐ

ಆರ್‌ಬಿಐ ಕಾಯ್ದೆಯ ಸೆಕ್ಷನ್‌ 24 (1)ರ ಪ್ರಕಾರ ದೇಶದಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಈ ಕುರಿತು ಕೇಂದ್ರ ಸರ್ಕಾರವು ಕಳೆದ ಮೇ 19ರಂದು ಆದೇಶ ಹೊರಡಿಸಿದೆ. 2018-19ನೇ ಸಾಲಿನಲ್ಲಿಯೇ 2 ಸಾವಿರ ರೂ. ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ. ಇದುವರೆಗೆ ಬ್ಯಾಂಕುಗಳಿಗೆ ಗ್ರಾಹಕರು ನೀಡಿದ ನೋಟುಗಳನ್ನು ಸಂಗ್ರಹಿಸಲಾಗುತ್ತಿತ್ತು. ಇನ್ನು ಮುಂದೆ ಚಲಾವಣೆಯೂ ರದ್ದಾಗಲಿದೆ. ಕ್ಲೀನ್‌ ನೋಟ್‌ ಪಾಲಿಸಿ (Clean Note Policy) ಅನ್ವಯ, ಅಂದರೆ, ಜನರಿಗೆ ಗುಣಮಟ್ಟದ ನೋಟುಗಳನ್ನು ನೀಡುವ ದೃಷ್ಟಿಯಿಂದ 2 ಸಾವಿರ ರೂ. ನೋಟುಗಳನ್ನು ಹಿಂತೆಗೆಯಲು ತೀರ್ಮಾನಿಸಲಾಗಿದೆ.

Exit mobile version