ಮುಂಬೈ: ಗೃಹ, ವಾಹನ ಸಾಲ ಸೇರಿ ಹಲವು ರೀತಿಯ ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಿಹಿ ಸುದ್ದಿ ನೀಡಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಅವರು ಹಣಕಾಸು ನೀತಿ ಸಭೆಯ (RBI Monetary Policy) ತೀರ್ಮಾನಗಳನ್ನು ಪ್ರಕಟಿಸಿದ್ದು, ರೆಪೋ ದರದಲ್ಲಿ (Repo Rate) ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ಅಸ್ತಿತ್ವದಲ್ಲಿರುವ 6.5% ಬಡ್ಡಿ ದರವನ್ನೇ ಆರ್‌ಬಿಐ (RBI News) ಮುಂದುವರಿಸಿದೆ.
ಸತತ ಆರನೇ ಬಾರಿಗೆ ರೆಪೋ ದರದಲ್ಲಿ ಆರ್‌ಬಿಐ ಯಾವುದೇ ಬದಲಾವಣೆ ಮಾಡಿಲ್ಲ. 2023ರ ಫೆಬ್ರವರಿಯಲ್ಲಿ ಆರ್‌ಬಿಐ ರೆಪೋ ದರವನ್ನು ಶೇ.6.25ರಿಂದ ಶೇ.6.50ಕ್ಕೆ ಏರಿಕೆ ಮಾಡಿತ್ತು. ಇದಾದ ಬಳಿಕ ಆರು ದ್ವೈಮಾಸಿಕ ಸಭೆಗಳು ನಡೆದಿದ್ದು, ಇಷ್ಟೂ ಸಭೆಗಳಲ್ಲಿ ಕೂಡ ರೆಪೋ ದರದಲ್ಲಿ ಬದಲಾವಣೆ ಮಾಡದಿರಲು ಆರ್‌ಬಿಐ ತೀರ್ಮಾನಿಸಿದೆ. ಇದರಿಂದಾಗಿ ಕಳೆದ ಒಂದು ವರ್ಷದಿಂದ ಗೃಹ ಸಾಲ, ವಾಹನ ಸಾಲ ಸೇರಿ ಹಲವು ಸಾಲಗಾರರಿಗೆ ಇಎಂಐ ಹೊರೆಯಾಗಿಲ್ಲ.
RBI MPC opts for status quo, keeps repo rate unchanged at 6.5%, maintains monetary policy stance as ‘withdrawal of accommodation’ pic.twitter.com/x3JEXhAqC9
— ANI (@ANI) February 8, 2024
ಜಾಗತಿಕ ಬಿಕ್ಕಟ್ಟುಗಳ ಮಧ್ಯೆಯೂ ಭಾರತದ ಆರ್ಥಿಕತೆ ಬೆಳವಣಿಗೆಯತ್ತ ಸಾಗುತ್ತಿದೆ. ಹಾಗೆಯೇ, ಹಣದುಬ್ಬರವೂ ನಿಯಂತ್ರಣಕ್ಕೆ ಬರುತ್ತಿದೆ. ಹಾಗಾಗಿ, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. 2023ರ ಜುಲೈನಲ್ಲಿ ದೇಶದ ಹಣದುಬ್ಬರವು ಶೇ.7.44ರಷ್ಟಿತ್ತು. ಆದರೆ, 2023ರ ಡಿಸೆಂಬರ್ ವೇಳೆಗೆ ಹಣದುಬ್ಬರವು ಶೇ.5.69ಕ್ಕೆ ಇಳಿಕೆಯಾಗಿದೆ. 2024ರಲ್ಲೂ ಹಣದುಬ್ಬರವು ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.
ಜಿಡಿಪಿ ಬೆಳವಣಿಗೆ ನಿರೀಕ್ಷೆ
2024-25ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಯು ಶೇ.7ರಷ್ಟು ಬೆಳವಣಿಗೆ ಹೊಂದುವ ನಿರೀಕ್ಷೆ ಇದೆ. ಮೊದಲ ತ್ರೈಮಾಸಿಕದಲ್ಲಿ ಇದು ಶೇ.7.2ರಷ್ಟು ಇರಲಿದೆ ಎಂಬ ಅಂದಾಜಿದೆ ಎಂದು ಶಕ್ತಿಕಾಂತ ದಾಸ್ ಮಾಹಿತಿ ನೀಡಿದರು. ದ್ವಿತೀಯ ತ್ರೈಮಾಸಿಕದಲ್ಲಿ ಶೇ.6.8, ತೃತೀಯ ತ್ರೈಮಾಸಿಕದಲ್ಲಿ ಶೇ.7 ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.6.9ರಷ್ಟು ಜಿಡಿಪಿ ದರ ಇರಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: Paytm payment Bank : ಆರ್‌ಬಿಐ ನಿರ್ಬಂಧದ ಬೆನ್ನಲ್ಲೇ ಪೇಟಿಎಂ ಷೇರು ಮೌಲ್ಯ ಭಾರೀ ಕುಸಿತ
ರೆಪೋ ದರ ಎಂದರೇನು?
ದೇಶದ ವಾಣಿಜ್ಯ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿದರವೇ ರೆಪೋದರ ಆಗಿದೆ. ಹಣದ ಕೊರತೆ ಸೇರಿ ಯಾವುದೇ ತುರ್ತು ಸಂದರ್ಭಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುತ್ತವೆ. ಈ ಸಾಲಕ್ಕೆ ಆರ್‌ಬಿಐ ಬಡ್ಡಿ ವಿಧಿಸುತ್ತದೆ. ಇದನ್ನೇ ರೆಪೋ ರೇಟ್ ಎನ್ನುತ್ತಾರೆ. ಕೆಲವೊಮ್ಮೆ, ವಾಣಿಜ್ಯ ಬ್ಯಾಂಕ್‌ಗಳಿಂದ ಆರ್‌ಬಿಐ ಸಾಲ ಪಡೆಯತ್ತದೆ. ಆ ಸಾಲದ ಮೇಲಿನ ಬಡ್ಡಿಗೆ ರಿವರ್ಸ್ ರೆಪೋ ದರ ಎನ್ನುತ್ತಾರೆ. ರೆಪೋ ದರ ಏರಿಕೆಯಾದರೆ, ಬ್ಯಾಂಕುಗಳು ಕೂಡ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿಯನ್ನು ಏರಿಕೆ ಮಾಡುತ್ತವೆ. ಹಾಗಾಗಿ, ರೆಪೋ ದರವು ಸಾಲಗಾರರಿಗೆ ಪ್ರಮುಖ ಎನಿಸುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ