ಮುಂಬೈ: ದೇಶದ ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಿಹಿ ಸುದ್ದಿ ನೀಡಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಅವರು ಹಣಕಾಸು ನೀತಿ ಸಭೆಯ (RBI Monetary Policy) ತೀರ್ಮಾನಗಳನ್ನು ಪ್ರಕಟಿಸಿದ್ದು, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದರೊಂದಿಗೆ ಸತತ ನಾಲ್ಕನೇ ಬಾರಿ ರೆಪೋ ದರವನ್ನು ಯಥಾಸ್ಥಿತಿಗೊಳಿಸಿದಂತಾಗಿದೆ. ಸದ್ಯ ಆರ್‌ಬಿಐ ರೆಪೋ ದರ ಶೇ.6.50ರಷ್ಟಿದೆ. ಇದೇ ರೆಪೋ ದರವೇ ಮುಂದುವರಿಯುವ ಕಾರಣ ಸಾಲಗಾರರಿಗೆ ಯಾವುದೇ ಬಡ್ಡಿಯ ಹೊರೆ ಇರುವುದಿಲ್ಲ.
RBI’s Monetary Policy Committee decided to maintain the status quo, Repo Rate kept unchanged at 6.50%: RBI Governor Shaktikanta Das pic.twitter.com/IRfAjZ1Jra
— ANI (@ANI) October 6, 2023
ಅಕ್ಟೋಬರ್ 4, 5 ಹಾಗೂ 6ರಂದು ನಡೆದ ಹಣಕಾಸು ನೀತಿ ಸಭೆಯ ಪ್ರಮುಖ ತೀರ್ಮಾನಗಳನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದರು. “ದೇಶದಲ್ಲಿ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಏಳಿಗೆಗೆ ಆರ್‌ಬಿಐ ಸಹಕಾರ ನೀಡುವ ಕುರಿತು ಚಿಂತನೆ ನಡೆದಿದೆ. ಹಾಗೆಯೇ, ಆರ್‌ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಸಭೆ ತೀರ್ಮಾನಿಸಿದೆ.
ಜಿಡಿಪಿ ದರದ ಬೆಳವಣಿಗೆ
“ದೇಶದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ದರದ ಬೆಳವಣಿಗೆಯನ್ನು ಶೇ.6.50ರಷ್ಟು ಇರಲಿದೆ ಎಂಬುದಾಗಿ ನಿರೀಕ್ಷಿಸಲಾಗಿದೆ. ಹಾಗೆಯೇ, 2024-25ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.6.6ರಷ್ಟು ಇರಲಿದೆ” ಎಂದು ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.
#WATCH | RBI Governor Shaktikanta Das says, "Macroeconomic stability and inclusive growth are the fundamental principles underlying our country's progress. The policy mix that we have pursued during recent years of multiple and unparalleled shocks has fostered macroeconomic &… pic.twitter.com/yzgTicueMl
— ANI (@ANI) October 6, 2023
ಹಣದುಬ್ಬರದ ಸಮತೋಲನ
ಗ್ರಾಹಕ ಬೆಲೆ ಸೂಚ್ಯಂಕ (CPI) ಹಣದುಬ್ಬರದ ಕುರಿತು ಕೂಡ ಶಕ್ತಿಕಾಂತ ದಾಸ್ ಮಾಹಿತಿ ನೀಡಿದರು. “ದೇಶದಲ್ಲಿ 2023-24ನೇ ಸಾಲಿನಲ್ಲಿ ಸಿಪಿಐ ಹಣದುಬ್ಬರ ಶೇ.5.4ರಷ್ಟು ಇದೆ.. ಎರಡನೇ ತ್ರೈಮಾಸಿಕದಲ್ಲಿ ಶೇ.6.4ರಷ್ಟು, ಮೂರನೇ ತ್ರೈಮಾಸಿಕದಲ್ಲಿ ಶೇ.5.6ರಷ್ಟು ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.5.2ರಷ್ಟು ಇರಲಿದೆ. ಹಣದುಬ್ಬರದ ಏರಿಕೆ ಭೀತಿಯಿಂದ ಹೊರಬರಲಾಗಿದೆ” ಎಂದು ತಿಳಿಸಿದರು.
ಸತತ ನಾಲ್ಕನೇ ಬಾರಿಗೆ ಯಥಾಸ್ಥಿತಿ
ಪ್ರಸಕ್ತ ವರ್ಷದ ಜೂನ್ ಹಾಗೂ ಏಪ್ರಿಲ್‌ನಲ್ಲಿ ನಡೆದ ದ್ವೈಮಾಸಿಕ ಸಭೆಗಳಲ್ಲಿ ಆರ್‌ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ, ಶೇ.6.5ರಷ್ಟು ರೆಪೋ ದರವನ್ನೇ ಇರಿಸಲಾಗಿತ್ತು. ಆದರೆ, ಹಣದುಬ್ಬರ ನಿಯಂತ್ರಣದ ದೃಷ್ಟಿಯಿಂದ 2023ರ ಫೆಬ್ರವರಿಯಲ್ಲಿ 25 ಹಾಗೂ 2022ರ ಡಿಸೆಂಬರ್‌ನಲ್ಲಿ 35 ಬೇಸಿಕ್ ಪಾಯಿಂಟ್‌ಗಳನ್ನು ಏರಿಕೆ ಮಾಡಿತ್ತು. ಈಗ ಸತತ ನಾಲ್ಕನೇ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಇದನ್ನೂ ಓದಿ: RBI Guidelines: ಆರ್‌ಬಿಐ ಹೊಸ ರೂಲ್ಸು, 30 ದಿನದಲ್ಲಿ ಸಾಲಗಾರರಿಗೆ ಆಸ್ತಿಗಳ ದಾಖಲೆ ನೀಡದಿದ್ರೆ ನಿತ್ಯ 5000 ರೂ. ದಂಡ!
ರೆಪೋ ದರ ಎಂದರೇನು?
ದೇಶದ ವಾಣಿಜ್ಯ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿದರವೇ ರೆಪೋದರ ಆಗಿದೆ. ಹಣದ ಕೊರತೆ ಸೇರಿ ಯಾವುದೇ ತುರ್ತು ಸಂದರ್ಭಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುತ್ತವೆ. ಈ ಸಾಲಕ್ಕೆ ಆರ್‌ಬಿಐ ಬಡ್ಡಿ ವಿಧಿಸುತ್ತದೆ. ಇದನ್ನೇ ರೆಪೋ ರೇಟ್ ಎನ್ನುತ್ತಾರೆ. ಕೆಲವೊಮ್ಮೆ, ವಾಣಿಜ್ಯ ಬ್ಯಾಂಕ್‌ಗಳಿಂದ ಆರ್‌ಬಿಐ ಸಾಲ ಪಡೆಯತ್ತದೆ. ಆ ಸಾಲದ ಮೇಲಿನ ಬಡ್ಡಿಗೆ ರಿವರ್ಸ್ ರೆಪೋ ದರ ಎನ್ನುತ್ತಾರೆ. ರೆಪೋ ದರ ಏರಿಕೆಯಾದರೆ, ಬ್ಯಾಂಕುಗಳು ಕೂಡ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿಯನ್ನು ಏರಿಕೆ ಮಾಡುತ್ತವೆ. ಹಾಗಾಗಿ, ರೆಪೋ ದರವು ಸಾಲಗಾರರಿಗೆ ಪ್ರಮುಖ ಎನಿಸುತ್ತದೆ.