ನವದೆಹಲಿ: ದೇಶದಲ್ಲಿ 2 ಸಾವಿರ ರೂ. ಮೌಲ್ಯದ ನೋಟುಗಳನ್ನು ಆರ್‌ಬಿಐ (RBI) ಹಿಂತೆಗೆದುಕೊಂಡಿದ್ದು, ಈಗ 500 ರೂ. ಮೌಲ್ಯದ ನೋಟುಗಳು ಮಾತ್ರ ಗರಿಷ್ಠ ಮುಖಬೆಲೆಯ ನೋಟುಗಳು ಎನಿಸಿವೆ. ಆದರೆ, ಶೀಘ್ರದಲ್ಲಿಯೇ ದೇಶದಲ್ಲಿ ಆರ್‌ಬಿಐ ಮತ್ತೆ 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು (Rs 1,000 Notes) ಮತ್ತೆ ಜಾರಿಗೆ ತರಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ದೇಶದಲ್ಲಿ ಮತ್ತೆ 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಜಾರಿಗೆ ತರುವುದಿಲ್ಲ ಎಂದು ಇತ್ತೀಚಿನ ಮಾಹಿತಿ ದೃಢಪಡಿಸಿದೆ.
“ದೇಶದಲ್ಲಿ ಸಾವಿರ ರೂ. ಮೌಲ್ಯದ ನೋಟುಗಳನ್ನು ಜಾರಿಗೆ ತರುವ ಕುರಿತು ಆರ್‌ಬಿಐ ಯಾವುದೇ ಚಿಂತನೆ ನಡೆಸುತ್ತಿಲ್ಲ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ” ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. 2016ರ ನವೆಂಬರ್ 8ರಂದು ದೇಶದಲ್ಲಿ ಐನೂರು ಹಾಗೂ ಸಾವಿರ ರೂ. ನೋಟುಗಳನ್ನು ರದ್ದುಗೊಳಿಸಲಾಗಿದೆ. ಇದಾದ ಬಳಿಕ ಚಲಾವಣೆಗೆ ಬಂದ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನೂ ಹಿಂಪಡೆಯಲಾಗಿದೆ. ಆದರೂ, ಒಂದು ಸಾವಿರ ರೂ. ನೋಟು ಚಲಾವಣೆಗೆ ಬರುವುದಿಲ್ಲ ಎಂಬುದು ಇತ್ತೀಚಿಗಿನ ಮಾಹಿತಿಯಾಗಿದೆ.
RBI is not in consideration of the re-introduction of Rs 1000 note: Sources
— ANI (@ANI) October 20, 2023
ವಾಪಸಾಗದ 12 ಸಾವಿರ ಕೋಟಿ ರೂ.
2 ಸಾವಿರ ರೂ. ಮೌಲ್ಯದ ಎಲ್ಲ ನೋಟುಗಳು ವಾಪಸಾಗದ ಕಾರಣ ಗಡುವು ವಿಸ್ತರಣೆ ಮಾಡಿದರೂ, 12 ಸಾವಿರ ಕೋಟಿ ರೂ. ಮೌಲ್ಯದ ನೋಟುಗಳು ವಾಪಸ್ ಆಗಿಲ್ಲ ಎಂದು ಆರ್‌ಬಿಐ ತಿಳಿಸಿದೆ. 2 ಸಾವಿರ ರೂ. ಮುಖಬೆಲೆಯ 3.56 ಲಕ್ಷ ಕೋಟಿ ರೂ.ನಲ್ಲಿ ಶೇ.96ರಷ್ಟು ಅಂದರೆ ಇದುವರೆಗೆ 3.44 ಲಕ್ಷ ಕೋಟಿ ರೂ. ವಾಪಸಾಗಿದೆ. ಇನ್ನೂ 12 ಸಾವಿರ ಕೋಟಿ ರೂ. ಮೌಲ್ಯದ ನೋಟುಗಳು ವಾಪಸ್ ಆಗಿಲ್ಲ ಎಂದು ತಿಳಿಸಿದೆ. ಅಕ್ಟೋಬರ್ 7ರ ನಂತರ 2 ಸಾವಿರ ರೂ. ಮೌಲ್ಯದ ನೋಟುಗಳನ್ನು ಇಟ್ಟುಕೊಳ್ಳುವುದು ಕಾನೂನುಬಾಹಿರ ಎನಿಸದಿದ್ದರೂ ಅವು ಚಲಾವಣೆಯಲ್ಲಿ ಇಲ್ಲ.
ಇದನ್ನೂ ಓದಿ: ಡೆಡ್‌ಲೈನ್ ಮುಗಿದ್ರೂ 2000 ನೋಟು ಎಕ್ಸ್‌ಚೇಂಜ್ ಮಾಡ್ಕೊಬಹುದು! ಈ ಸಂಗತಿಗಳು ತಿಳಿದಿರಲಿ
ಆರ್‌ಬಿಐ ಕಾಯ್ದೆಯ ಸೆಕ್ಷನ್ 24 (1)ರ ಪ್ರಕಾರ ದೇಶದಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಈ ಕುರಿತು ಕೇಂದ್ರ ಸರ್ಕಾರವು ಕಳೆದ ಮೇ 19ರಂದು ಆದೇಶ ಹೊರಡಿಸಿತ್ತು. 2018-19ನೇ ಸಾಲಿನಲ್ಲಿಯೇ 2 ಸಾವಿರ ರೂ. ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ. ಇದುವರೆಗೆ ಬ್ಯಾಂಕುಗಳಿಗೆ ಗ್ರಾಹಕರು ನೀಡಿದ ನೋಟುಗಳನ್ನು ಸಂಗ್ರಹಿಸಲಾಗುತ್ತಿತ್ತು. ಇನ್ನು ಮುಂದೆ ಚಲಾವಣೆಯೂ ರದ್ದಾಗಲಿದೆ. ಕ್ಲೀನ್ ನೋಟ್ ಪಾಲಿಸಿ (Clean Note Policy) ಅನ್ವಯ, ಅಂದರೆ, ಜನರಿಗೆ ಗುಣಮಟ್ಟದ ನೋಟುಗಳನ್ನು ನೀಡುವ ದೃಷ್ಟಿಯಿಂದ 2 ಸಾವಿರ ರೂ. ನೋಟುಗಳನ್ನು ಹಿಂತೆಗೆಯಲು ತೀರ್ಮಾನಿಸಲಾಗಿದೆ.