Site icon Vistara News

RBI Dividend: ಆರ್‌ಬಿಐನಿಂದ ಕೇಂದ್ರಕ್ಕೆ 2.11 ಲಕ್ಷ ಕೋಟಿ ರೂ.‌ ಡಿವಿಡೆಂಡ್! ಮುಂದಿನ ಸರ್ಕಾರಕ್ಕೆ ವರ!

RBI Dividend

RBI's record dividend of ₹2.11 trillion to help Centre's FY25 fiscal deficit

ಮುಂಬೈ: ಲೋಕಸಭೆ ಚುನಾವಣೆ (Lok Sabha Election 2024) ಕೊನೆಯ ಹಂತಕ್ಕೆ ಬಂದಿದ್ದು, ಇನ್ನೆರಡು ತಿಂಗಳು ಬಾಕಿ ಇವೆ. ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಇನ್ನೆರಡು ಹಂತದ ಮತದಾನಕ್ಕೆ ಅಬ್ಬರದ ಪ್ರಚಾರ ನಡೆಯುತ್ತಿದೆ. ಇದರ ಬೆನ್ನಲ್ಲೇ, ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ (Reserve Bank Of India) ಮಹತ್ವದ ಪ್ರಕಟಣೆ ಹೊರಬಿದ್ದಿದೆ. ಕೇಂದ್ರ ಸರ್ಕಾರಕ್ಕೆ ಆರ್‌ಬಿಐ 2023-24ನೇ ಸಾಲಿನಲ್ಲಿ 2.11 ಲಕ್ಷ ಕೋಟಿ ರೂ. ಡಿವಿಡೆಂಡ್‌ (Dividend) (ಲಾಭಾಂಶ) ನೀಡುವುದಾಗಿ ಘೋಷಣೆ ಮಾಡಿದೆ.

ಜೂನ್‌ 4ರಂದು ನೂತನ ಸರ್ಕಾರ ರಚನೆಯಾಗಲಿದೆ. ವಿತ್ತೀಯ ಕೊರತೆ ನೀಗಿಸುವ ದಿಸೆಯಲ್ಲಿ ಆರ್‌ಬಿಐನ 2.11 ಲಕ್ಷ ಕೋಟಿ ರೂ. ಹೊಸ ಸರ್ಕಾರಕ್ಕೆ ವರದಾನವಾಗಲಿದೆ. ಅದರಲ್ಲೂ, ಆರ್‌ಬಿಐ ಇತಿಹಾಸದಲ್ಲಿಯೇ ದಾಖಲೆ ಮೊತ್ತದ ಡಿವಿಡೆಂಡ್‌ಅನ್ನು ಕೇಂದ್ರ ಸರ್ಕಾರಕ್ಕೆ ನೀಡುವುದಾಗಿ ಘೋಷಿಸಿರುವುದು ಹೊಸ ಸರ್ಕಾರಕ್ಕೆ ಭಾರಿ ಅನುಕೂಲವಾಗಲಿವೆ. ಇದು ದೇಶದ ಒಟ್ಟು ಜಿಡಿಪಿಯ ಶೇ.4ರಷ್ಟು ಮೊತ್ತವಾಗಿದೆ ಎಂದು ತಿಳಿದುಬಂದಿದೆ.

ಷೇರು ಪೇಟೆ ಲಯಕ್ಕೂ ಇದೇ ಕಾರಣ

ಕೇಂದ್ರ ಸರ್ಕಾರಕ್ಕೆ 2023-24ನೇ ಸಾಲಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್ ದಾಖಲೆಯ 2.11 ಲಕ್ಷ ಕೋಟಿ ರೂ. ಡೆವಿಡೆಂಡ್‌ (ಲಾಭಾಂಶ) ನೀಡಲು ಒಪ್ಪಿಗೆ ನೀಡಿರುವುದು ಕೂಡ ಷೇರು ಮಾರುಕಟ್ಟೆಯ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. 2022-23ರಲ್ಲಿ ಕೇಂದ್ರ ಸರ್ಕಾರಕ್ಕೆ ಆರ್‌ಬಿಐ 87 ಸಾವಿರ ಕೋಟಿ ರೂ. ನೀಡಿತ್ತು. ಆದರೆ, ಅದು ಎರಡು ಪಟ್ಟು ಜಾಸ್ತಿಯಾಗಿರುವುದರಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಹಣ ಸಿಗುತ್ತದೆ. ಆ ಹಣವು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ವಿನಿಯೋಗವಾಗುತ್ತದೆ. ಇದರಿಂದ ಷೇರು ಪೇಟೆಯಲ್ಲಿ ಲಾಭ ಗಳಿಸಬಹುದು ಎಂಬ ಕಾರಣದಿಂದ ಹೂಡಿಕೆ ಜಾಸ್ತಿಯಾಗಿದೆ. ಗುರುವಾರವೂ ಸಾರ್ವಜನಿಕ ವಲಯದ ಸಂಸ್ಥೆಗಳು ಲಾಭ ಗಳಿಸಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ.

“ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ ಮಹತ್ವದ ಸುಧಾರಣೆ ತಂದಿದೆ. ಆರ್ಥಿಕ ಶಿಸ್ತು, ವಿತ್ತೀಯ ಪ್ರಕ್ರಿಯೆಗಳಲ್ಲಿ ಸುಧಾರಣಾ ಕ್ರಮಗಳನ್ನು ಅನುಸರಿಸಿಕೊಂಡಿದೆ. ಇದರಿಂದಾಗಿ ಭಾರತದ ಷೇರು ಮಾರುಕಟ್ಟೆಯು ಕಳೆದ ಒಂದು ದಶಕದಲ್ಲಿ ಗಣನೀಯ ಏಳಿಗೆ ಕಂಡಿದೆ. 10 ವರ್ಷಗಳ ಹಿಂದೆ ಸೆನ್ಸೆಕ್ಸ್‌ 25 ಸಾವಿರ ಪಾಯಿಂಟ್ಸ್‌ ಹೊಂದಿತ್ತು. ಆದರೀಗ, ಸೆನ್ಸೆಕ್ಸ್‌ 75 ಸಾವಿರ ಪಾಯಿಂಟ್ಸ್‌ಗೆ ಏರಿಕೆಯಾಗಿದೆ. ಈಕ್ವಿಟಿ ಮಾರುಕಟ್ಟೆಯ ಮೌಲ್ಯವು ಕೆಲ ದಿನಗಳ ಹಿಂಷ್ಟೇ 5 ಲಕ್ಷ ಕೋಟಿ ಡಾಲರ್‌ ಆಗಿದೆ. ಹಾಗಾಗಿ, ಜೂನ್‌ 4ರಂದು ಷೇರು ಮಾರುಕಟ್ಟೆಯು ದಾಖಲೆ ಬರೆಯಲಿದೆ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

Exit mobile version