ನವ ದೆಹಲಿ: ಪಕ್ಷದ ಮುಖ್ಯಸ್ಥ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗಿನ ಭಿನ್ನಾಭಿಪ್ರಾಯದ ನಡುವೆ ಜೆಡಿಯು ಹಿರಿಯ ನಾಯಕ ಆರ್‌ಸಿಪಿ ಸಿಂಗ್ ಶನಿವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಹಾರದ ಮುಸ್ತಫಾಪುರ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸ್ವಂತ ಪಕ್ಷವೊಂದನ್ನು ಹುಟ್ಟುಹಾಕುವ ಉದ್ದೇಶದ ಬಗ್ಗೆ ಮಾತನಾಡಿದ ಕೆಲವೇ ಗಂಟೆಗಳಲ್ಲಿ ಸಿಂಗ್ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ, 2013 ಮತ್ತು 2019ರ ನಡುವೆ ಅಪಾರ ಪ್ರಮಾಣದ ಅಕ್ರಮ ಆಸ್ತಿಯನ್ನು ಸಂಗ್ರಹಿಸಿದ ಹಾಗೂ ಚುನಾವಣಾ ಅಫಿಡವಿಟ್‌ನಲ್ಲಿ ಅದನ್ನು ಘೋಷಿಸದ ಆರೋಪದ ಮೇಲೆ ಸಿಂಗ್ ಅವರಿಗೆ ಶೋಕಾಸ್ ನೋಟಿಸ್ ಅನ್ನು ಜೆಡಿಯು ನೀಡಿತ್ತು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಮತ್ತು ರಾಜ್ಯ ಅಧ್ಯಕ್ಷರಿಗೆ ಜುಲೈ 26ರಂದು ಪಕ್ಷದ ಇಬ್ಬರು ಕಾರ್ಯಕರ್ತರು ನೀಡಿದ ದೂರಿನ ಆಧಾರದ ಮೇಲೆ ರಾಜ್ಯ ಜೆಡಿಯು ಅಧ್ಯಕ್ಷ ಉಮೇಶ್ ಕುಶ್ವಾಹ ಅವರು ಶೋಕಾಸ್ ಪತ್ರ ನೀಡಿದ್ದರು. “ನೀವು ಮತ್ತು ನಿಮ್ಮ ಕುಟುಂಬ 2013ರಿಂದ 2022ರವರೆಗೆ ಅಪಾರ ಸ್ಥಿರ ಆಸ್ತಿಯನ್ನು ಸಂಗ್ರಹಿಸಿದ್ದೀರಿ. ಅನೇಕ ಅಕ್ರಮಗಳು ಬೆಳಕಿಗೆ ಬಂದಿವೆ. ನೀವು ಪಕ್ಷದ ನಾಯಕ ನಿತೀಶ್ ಕುಮಾರ್ ಅವರೊಂದಿಗೆ ಅಧಿಕಾರಿಯಾಗಿ ಮತ್ತು ಪಕ್ಷದ ಕಾರ್ಯಕರ್ತರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದೀರಿ. ಪಕ್ಷದ ನಾಯಕರು ನಿಮ್ಮನ್ನು ಎರಡು ಬಾರಿ ರಾಜ್ಯಸಭಾ ಸಂಸದರನ್ನಾಗಿ ಮಾಡಿದರು. ಪಕ್ಷದ ವರಿಷ್ಠರಿಗೆ ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಇದೆ ಎಂಬ ಸತ್ಯ ನಿಮಗೆ ತಿಳಿದಿದೆ. ಇಷ್ಟು ವರ್ಷ ಸಾರ್ವಜನಿಕ ಜೀವನದಲ್ಲಿದ್ದರೂ ಅವರ ವಿರುದ್ಧ ಯಾವುದೇ ಆರೋಪವಿಲ್ಲ” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ನಿತೀಶ್ ಜತೆ ಜಗಳ| ರಾಜ್ಯಸಭೆ ಟಿಕೆಟ್ ಕೊಡದ ಬೇಸರ, ಕೇಂದ್ರ ಸಚಿವ ಆರ್‌ಸಿಪಿ ಸಿಂಗ್ ಸದ್ಯವೇ ಬಿಜೆಪಿಗೆ ಸೇರ್ಪಡೆ?
ನಿತೀಶ್ ಕುಮಾರ್ ಅವರ ಪ್ರಧಾನ ಕಾರ್ಯದರ್ಶಿಯಾಗಿ ಸಿಂಗ್ ಈ ಮುನ್ನ ಕೆಲಸ ಮಾಡಿದ್ದರು. ಮಾಜಿ ಐಎಎಸ್ ಅಧಿಕಾರಿಯಾದ ಅವರು ಜೆಡಿಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯನ್ನೂ ನಿರ್ವಹಿಸಿದ್ದರು. ರಾಜ್ಯಸಭೆಯ ಸದಸ್ಯರಾಗಿದ್ದ ಅವರನ್ನು ಕಳೆದ ವರ್ಷ ಇದ್ದಕ್ಕಿದ್ದಂತೆ ನರೇಂದ್ರ ಮೋದಿ ಅವರ ಸಂಪುಟ ಸಚಿವರಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಈ ನೇಮಕಾತಿ ಪಕ್ಷದ ಮುಖ್ಯಸ್ಥ ನಿತೀಶ್ ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಇನ್ನೊಂದು ಅವಧಿಗೆ ರಾಜ್ಯಸಭೆಯ ಸದಸ್ಯತ್ವವನ್ನು ಜೆಡಿಯು ಪಕ್ಷ ಆರ್‌ಸಿಪಿ ಸಿಂಗ್ ಅವರಿಗೆ ನೀಡಿರಲಿಲ್ಲ. ಇದರಿಂದಾಗಿ ಸಿಂಗ್ ತಮ್ಮ ಸಚಿವ ಸ್ಥಾನ ಕಳೆದುಕೊಳ್ಳಬೇಕಾಗಿ ಬಂದಿತ್ತು.
“ನನ್ನ ಮೇಲಿನ ಎಲ್ಲಾ ಆರೋಪಗಳು ಸುಳ್ಳು. ನನ್ನ ಜನಪ್ರಿಯತೆಗೆ ಹೆದರಿದ ಕೆಲವರು ಪಿತೂರಿ ಮಾಡಿದ್ದಾರೆ” ಎಂದು ಸಿಂಗ್ ಈ ಕುರಿತು ಹೇಳಿದ್ದಾರೆ. ʼʼಹೊಟ್ಟೆಕಿಚ್ಚಿಗೆ ಔಷಧವಿಲ್ಲ. ನಿತೀಶ್ ಕುಮಾರ್ ಏಳೇಳು ಜನ್ಮದಲ್ಲೂ ಪ್ರಧಾನಿಯಾಗಲು ಸಾಧ್ಯವಿಲ್ಲʼʼ ಎಂದು ಟೀಕಿಸಿರುವ ಅವರು ʼʼಜೆಡಿಯು ಮುಳುಗುತ್ತಿರುವ ಹಡಗುʼʼ ಎಂದು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಾತಿ ಗಣತಿ: ಜೈ ಎಂದ ನಿತೀಶ್, ತೇಜಸ್ವಿ ಬೇಡಿಕೆಗೆ ಅಸ್ತು, ಮಿತ್ರಪಕ್ಷ ಬಿಜೆಪಿಗೆ ಮುಜುಗರ