ನವ ದೆಹಲಿ: ವಿದ್ಯಾವಂತ ಮುಸ್ಲಿಮರನ್ನು ತಲುಪುವ ಮೂಲಕ ಅವರಿಗೆ ಸರಕಾರದ ಯೋಜನೆಗಳ ಕುರಿತು ಮನವರಿಕೆ ಮಾಡಬೇಕು ಹಾಗೂ ಸರಕಾರದ ಯೋಜನೆಯಲ್ಲಿ ಭಾಗಿಯಾಗುವಂತೆ ಮಾಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ((BJP Executive Meeting).) ಪಕ್ಷದ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ. ಅಲ್ಲದೆ, ಮುಸ್ಲಿಮರ ವಿರುದ್ಧ ವಿವಾದಾತ್ಮಕ ಟೀಕೆ ಮಾಡುವುದನ್ನು ಮುಂದುವರಿಸಬಾರದು ಎಂಬುದಾಗಿಯೂ ಅವರು ಸೂಚನೆ ಕೊಟ್ಟಿದ್ದಾರೆ.
ಕಾರ್ಯಕಾರಿಣಿಯಲ್ಲಿ ನಡೆದ ಚರ್ಚೆಗಳ ಕುರಿತು ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರು ದಿಲ್ಲಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಚಿವರು ವಿದ್ಯಾವಂತ ಮುಸ್ಲಿಮರ ಬಳಿ ತೆರಳಿ ಅಭಿವೃದ್ಧಿ ಕಾರ್ಯಗಳನ್ನು ಮನದಟ್ಟು ಮಾಡಬೇಕು. ಅವರು ಬಿಜಿಪಿಗೆ ಮತ ಹಾಕುತ್ತಾರೋ, ಇಲ್ಲವೋ ಎಂಬುದನ್ನು ಪರಿಗಣಿಸದೇ ಸರಕಾರದ ಉದ್ದೇಶಗಳನ್ನು ಹೇಳಬೇಕು ಎಂದು ಪ್ರಧಾನಿ ಮೋದಿ ಅವರು ಸಲಹೆ ಕೊಟ್ಟಿದ್ದಾರೆ ಎಂದು ಫಡ್ನವಿಸ್ ಅವರು ಹೇಳಿದರು.
ಹಲವು ಬಾರಿ ಎಚ್ಚರಿಕೆ ಕೊಟ್ಟ ಹೊರತಾಗಿಯೂ ಕೆಲವು ಸಚಿವರು ಅಲ್ಪ ಸಂಖ್ಯಾತ ಸಮುದಾಯಗಳ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಕ್ಷಣವೇ ಇಂಥ ಕೆಲಸಗಳನ್ನು ನಿಲ್ಲಿಸಬೇಕು ಎಂಬುದಾಗಿ ಮೋದಿ ಹೇಳಿದ್ದಾರೆ ಎಂಬುದಾಗಿಯೂ ದೇವೇಂದ್ರ ಫಡ್ನವಿಸ್ ಅವರು ನುಡಿದಿದ್ದಾರೆ.
ಅಲ್ಪಸಂಖ್ಯಾತರಾದ ಬೋಹ್ರಾಗಳು, ಪಸ್ಮಾಂಡಾಗಳು ಮತ್ತು ಸಿಖ್ಖರು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗವನ್ನು ತಲುಪುವಂತೆ ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು. ಗಡಿ ಪ್ರದೇಶಗಳು ಸೇರಿದಂತೆ ಹಳ್ಳಿಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವತ್ತ ಪಕ್ಷದ ನಾಯಕರು ಗಮನಹರಿಸಬೇಕು ಎಂಬ ಪ್ರಧಾನಿಯ ಮಾತುಗಳನ್ನು ಉಲ್ಲೇಖಿಸಿ ಫಡ್ನವಿಸ್ ಹೇಳಿದರು.
ಇದನ್ನೂ ಓದಿ | BJP Executive Meeting | ಲೋಕಸಭೆ ಎಲೆಕ್ಷನ್‌ಗೆ 400 ದಿನಗಳಷ್ಟೇ ಉಳಿದಿರೋದು, ಮತದಾರರನ್ನು ತಲುಪಿ ಎಂದ ಪ್ರಧಾನಿ ಮೋದಿ