Site icon Vistara News

ಚೀನಾದಲ್ಲಿ ಕೊರೊನಾ ಅಬ್ಬರ; ಬೀಜಿಂಗ್​​ಗೆ ಜ್ವರದ ಔಷಧ ಕಳಿಸಲು ಸಿದ್ಧ ಎಂದ ಭಾರತೀಯ ವಿದೇಶಾಂಗ ಸಚಿವಾಲಯ

ready to export fever medicines to China Says India foreign ministry

ನವ ದೆಹಲಿ: ಚೀನಾದಲ್ಲಿ ಕೊವಿಡ್​ 19 ಸೋಂಕು (covid 19) ತೀವ್ರಗೊಂಡಿದ್ದು, ಅಲ್ಲಿ ಸೋಂಕಿತರಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಹಾಗೇ ಶವಸಂಸ್ಕಾರವೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಶವಾಗಾರಗಳಲ್ಲಿ ನೂಕುನುಗ್ಗಲು ಉಂಟಾಗುತ್ತಿದೆ. ಪೊಲೀಸ್​ ಬಿಗಿ ಭದ್ರತೆಯಲ್ಲಿ ಶವಸಂಸ್ಕಾರ ಮಾಡಲಾಗುತ್ತಿದೆ. ಅದರ ಬೆನ್ನಲ್ಲೇ ಭಾರತದಲ್ಲೂ ಮತ್ತೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ.

ಈ ಮಧ್ಯೆ ಭಾರತವು ಚೀನಾಕ್ಕೆ ಜ್ವರದ ಔಷಧಗಳನ್ನು ರಫ್ತು ಮಾಡಲು ಸಿದ್ಧವಿದೆ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO)ಯ ಅಧ್ಯಕ್ಷ ಹೇಳಿದ್ದಾಗಿ ರಾಯಿಟರ್ಸ್ ಸುದ್ದಿ ಮಾಧ್ಯಮ ವರದಿ ಮಾಡಿದೆ.
ಚೀನಾದಲ್ಲಿ ಈಗ ಅಬ್ಬರಿಸುತ್ತಿರುವುದು ಕೊರೊನಾ ವೈರಸ್‌ನ ಒಮಿಕ್ರಾನ್ ಬಿಎಫ್.7(Omicron BF.7) ರೂಪಾಂತರಿ. ಇದು ಮೂಲ ಒಮಿಕ್ರಾನ್​ ತಳಿಯಂತೇ ಇದ್ದು, ಸಣ್ಣಪುಟ್ಟ ಬದಲಾವಣೆಗಳಷ್ಟೇ ಇವೆ. ಭಾರತದಲ್ಲಿ ಈಗಾಗಲೇ ಒಮಿಕ್ರಾನ್​ ಅಲೆಯನ್ನು ಎದುರಿಸಿದ್ದೇವೆ. ಭಾರತದಲ್ಲಿ ನೀಡಲಾಗುತ್ತಿರುವ ಲಸಿಕೆಗಳು ಈ ಒಮಿಕ್ರಾನ್​ ವಿರುದ್ಧ ಹೋರಾಡುತ್ತವೆ. ಅಷ್ಟೇ ಅಲ್ಲ ಒಮಿಕ್ರಾನ್​ ಸೋಂಕಿತರಿಗೆ ನೀಡುವ ಔಷಧಗಳೂ ನಮ್ಮಲ್ಲಿ ಇವೆ. ವಿಶ್ವದಲ್ಲೇ ಔಷಧ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಭಾರತ ಈ ಹಿಂದೆ ಜಾಗತಿಕವಾಗಿ ಕೊರೊನಾ ಅಲೆ ಎದ್ದಾಗಲೂ ಭಾರತ ಹಲವು ದೇಶಗಳಿಗೆ ಲಸಿಕೆ ಮತ್ತು ಔಷಧಗಳನ್ನು ನೀಡುವ ಮೂಲಕ ಸಹಾಯ ಹಸ್ತ ಚಾಚಿತ್ತು. ಇದೀಗ ಚೀನಾದಲ್ಲಿ ಒಮಿಕ್ರಾನ್ ವೈರಸ್​​ನ ರೂಪಾಂತರಿ ಬಿಎಫ್.7(Omicron BF.7) ಹೆಚ್ಚಾಗಿರುವ ಬೆನ್ನಲ್ಲೇ ಅಲ್ಲಿಗೆ ಔಷಧ ಕಳಿಸಲು ಭಾರತ ಮುಂದಾಗಿದೆ.

ಚೀನಾದಲ್ಲಿ ಶೂನ್ಯ ಕೊವಿಡ್​ ನೀತಿ ಅಳವಡಿಸಿಕೊಂಡು ಕಟ್ಟುನಿಟ್ಟಿನ ಕ್ರಮ ವಹಿಸಲಾಗಿತ್ತು. ಜನರು ಮನೆಯಿಂದ ಹೊರಬೀಳದಂತೆ ಕಠಿಣ ನಿರ್ಬಂಧ ಹೇರಲಾಗಿತ್ತು. ಆದರೆ ಅಲ್ಲಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆದ ಬಳಿಕ ನಿಯಮಗಳನ್ನು ಸಡಿಲಗೊಳಿಸಲಾಯಿತು. ಬೀಜಿಂಗ್​, ಶಾಂಘೈಗಳೆಲ್ಲ ಸೇರಿ ಪ್ರಮುಖ ನಗರಗಳಲ್ಲಿ ನಿರ್ಬಂಧ ತೆಗೆದ ಬೆನ್ನಲ್ಲೇ ಅಲ್ಲಿ ಕೊರೊನಾ ಮತ್ತೆ ಆರ್ಭಿಟಿಸುತ್ತಿದೆ. ಚೀನಾದಲ್ಲೀಗ ಕೊರೊನಾ ಪರೀಕ್ಷಾ ಕಿಟ್​​ಗಳು, ಕೊವಿಡ್​ 19 ಔಷಧಿಗಳಷ್ಟೇ ಅಲ್ಲ, ಸಾಮಾನ್ಯ ಜ್ವರ ನಿಯಂತ್ರಣಕ್ಕೆ ಅಗತ್ಯವಿರುವ ಔಷಧಗಳೂ ಕೊರತೆಯಾಗಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದರ ಬೆನ್ನಲ್ಲೇ ಭಾರತೀಯ ವಿದೇಶಾಂಗ ಸಚಿವಾಲಯ ಬೀಜಿಂಗ್​ಗೆ ಸಹಾಯ ಮಾಡಲು ತಾವು ಸಿದ್ಧ ಇದ್ದೇವೆ ಎಂದು ಹೇಳಿದೆ.

ಇದನ್ನೂ ಓದಿ: Coronavirus | ಚೀನಾದಲ್ಲಿ ಕೊರೊನಾ ಉಲ್ಬಣದ ಬೆನ್ನಲ್ಲೇ ಭಾರತದಲ್ಲಿ ಮೂವರಿಗೆ ಓಮಿಕ್ರಾನ್‌, ಏರ್‌ಪೋರ್ಟ್‌ನಲ್ಲಿ ತಪಾಸಣೆ

Exit mobile version