Site icon Vistara News

Real Estate: 2025ರ ವೇಳೆಗೆ ಭಾರತೀಯ ರಿಯಲ್ ಎಸ್ಟೇಟ್‌ಗೆ ಎನ್ಆರ್‌ಐ ಕೊಡುಗೆ ಶೇ.20ಕ್ಕೆ ಏರಿಕೆ?

real estate

real estate

ನವದೆಹಲಿ: ಭಾರತದ ರಿಯಲ್‌ ಎಸ್ಟೇಟ್‌ (Real Estate) ಕ್ಷೇತ್ರಕ್ಕೆ ಅನಿವಾಸಿ ಭಾರತೀಯರ (Non-Resident Indians-NRIs) ಕೊಡುಗೆ ಗಮನಾರ್ಹವಾಗಿ ಏರಿದೆ. 5 ವರ್ಷಗಳಲ್ಲಿ ಅವರ ಹೂಡಿಕೆ ನಿರಂತರವಾಗಿ ವೃದ್ಧಿಸಿದೆ ಎಂದು ವರದಿ ತಿಳಿಸಿದೆ. 2025ರ ವೇಳೆಗೆ ಅನಿವಾಸಿ ಭಾರತೀಯರು ಭಾರತೀಯ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಶೇ. 20ರಷ್ಟು ಕೊಡುಗೆ ನೀಡುವ ನಿರೀಕ್ಷೆಯಿದೆ.

2019 ಮತ್ತು 2020ರ ಒಂದು ವರ್ಷದ ನಡುವೆ ಅನಿವಾಸಿ ಭಾರತೀಯರು ಭಾರತದ ಒಟ್ಟು ರಿಯಲ್ ಎಸ್ಟೇಟ್ ಹೂಡಿಕೆಗಳಲ್ಲಿ ಪೈಕಿ ಶೇ. 10ರಷ್ಟು ಕೊಡುಗೆ ನೀಡಿದ್ದಾರೆ. ಇದೀಗ ವರದಿಯ ಪ್ರಕಾರ ಹೂಡಿಕೆ ಶೇ. 15ಕ್ಕೆ ತಲುಪಿದೆ.

ʼʼಹೆಚ್ಚಿದ ಬಾಡಿಗೆ ದರ, ಭಾರತೀಯ ರೂಪಾಯಿಯ ನಿರಂತರ ಅಪಮೌಲ್ಯ, ಸರ್ಕಾರದ ಅನುಕೂಲಕರ ನೀತಿಗಳು, ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಭಾರತೀಯ ರಿಯಲ್ ಎಸ್ಟೇಟ್ ಕ್ಷೇತ್ರವು ತೋರಿಸಿದ ಸ್ಥಿತಿಸ್ಥಾಪಕತ್ವದಂತಹ ಅಂಶಗಳು ಹೂಡಿಕೆ ಹೆಚ್ಚಳಕ್ಕೆ ಕಾರಣ. ಅನಿವಾಸಿ ಭಾರತೀಯರು ತಮ್ಮ ಮೂಲ ದೇಶದೊಂದಿಗೆ ಭಾವನಾತ್ಮಕ ಸಂಬಂಧ ಉಳಿಸಿಕೊಂಡಿರುವುದು ಕೂಡ ಗಮನಿಸಬೇಕಾದ ಅಂಶʼʼ ಎಂದು NoBroker.comನ ಸಹ ಸಂಸ್ಥಾಪಕ ಮತ್ತು ಮುಖ್ಯ ವ್ಯವಹಾರ ಅಧಿಕಾರಿ ಸೌರಭ್ ಗರ್ಗ್ ಹೇಳಿದ್ದಾರೆ.

ಅಗ್ರ ಸ್ಥಾನದಲ್ಲಿ ಬೆಂಗಳೂರು

ಬೆಂಗಳೂರು ಮತ್ತು ಮುಂಬೈ ಅನಿವಾಸಿ ಭಾರತೀಯರ ಹಾಟ್‌ ಸ್ಪಾಟ್‌. ಇಲ್ಲಿನ ಜೀವನಶೈಲಿ, ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಗಳು ಮತ್ತು ಕ್ರಿಯಾತ್ಮಕ ರಿಯಲ್ ಎಸ್ಟೇಟ್ ಮಾರುಕಟ್ಟೆಗಳಂತಹ ಅಂಶಗಳಿಂದಾಗಿ ಬೆಂಗಳೂರು ಮತ್ತು ಮುಂಬೈ ಅನಿವಾಸಿ ಭಾರತೀಯರ ಗಮನ ಸೆಳೆದಿದೆ. ಎನ್‌ಆರ್‌ಐ ಹೂಡಿಕೆದಾರರ ಪೈಕಿ ಶೇ. 29ರಷ್ಟು ಮಂದಿಗೆ ಬೆಂಗಳೂರು ಆದ್ಯತೆಯಾಗಿದ್ದು, ಅಗ್ರಸ್ಥಾನದಲ್ಲಿದೆ. ಶೇ. 24ರಷ್ಟು ಅನಿವಾಸಿ ಭಾರತೀಯರು ಮುಂಬೈಯನ್ನು ಆಯ್ಕೆ ಮಾಡಿಕೊಂಡಿದ್ದು, ಎರಡನೇ ಸ್ಥಾನದಲ್ಲಿದೆ.

ಬದಲಾದ ಬೇಡಿಕೆ

1 ಬಿಎಚ್‌ಕೆ ಮತ್ತು 2 ಬಿಎಚ್‌ಕೆ ಮನೆಗಳಿಗಿಂತ 3 ಬಿಎಚ್‌ಕೆ ಮನೆಗಳ ಮೇಲೆ ಬೇಡಿಕೆ ಹೆಚ್ಚಾಗಿದೆ. ಹೆಚ್ಚು ವಿಶಾಲವಾದ ವಾಸಸ್ಥಳಗಳ ಆದ್ಯತೆಯನ್ನು ಇದು ಪ್ರತಿಬಿಂಬಿಸುತ್ತದೆ. ಕಳೆದ ವರ್ಷ ರಜಾದಿನಗಳ ಮನೆಯ ಬೇಡಿಕೆಯೂ ಹೆಚ್ಚಾಗಿತ್ತು. ಆಸ್ತಿ ನಿರ್ವಹಣಾ ಸೇವೆಗಳು ಗಣನೀಯ ಪ್ರಮಾಣದಲ್ಲಿ ವೃದ್ಧಿಸಿವೆ.

ಹೆಚ್ಚಿನ ಮೌಲ್ಯದ ಹೂಡಿಕೆಗಳು

ಆಸಕ್ತಿದಾಯಕ ಸಂಗತಿಯೆಂದರೆ ಎನ್ಆರ್‌ಐ ಖರೀದಿದಾರರಲ್ಲಿ ಶೇ. 26ರಷ್ಟು ಮಂದಿ 1 ಕೋಟಿ ರೂ.ಗಿಂತ ಹೆಚ್ಚಿನ ಬಜೆಟ್ ಹೊಂದಿರುವ ಆಸ್ತಿಗಳನ್ನು ಬಯಸುತ್ತಾರೆ. ಇದು ಪ್ರೀಮಿಯಂ ಮತ್ತು ಐಷಾರಾಮಿ ರಿಯಲ್ ಎಸ್ಟೇಟ್ ಆಯ್ಕೆಗಳ ಮೇಲೆ ಹೆಚ್ಚುತ್ತಿರುವ ಬೇಡಿಕೆಯನ್ನು ಸೂಚಿಸುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದಲ್ಲದೆ ಶೇ. 40ರಷ್ಟು ಅನಿವಾಸಿ ಭಾರತೀಯರು 1 ಕೋಟಿ ರೂ.ಗಿಂತ ಹೆಚ್ಚು ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ಕುರಿತು ಒಲವು ವ್ಯಕ್ತಪಡಿಸಿದ್ದಾರೆ. ಶೇ. 54ರಷ್ಟು ಜನರು ಸುರಕ್ಷತೆಯ ಹೂಡಿಕೆಗೆ ಆದ್ಯತೆ ನೀಡಿದ್ದಾರೆ. ಈ ಮಧ್ಯೆ ಮಾಹಿತಿ ಮತ್ತು ಪಾರದರ್ಶಕತೆಯ ಕೊರತೆ ಬಗ್ಗೆ ಶೇ. 82ರಷ್ಟು ಅನಿವಾಸಿ ಭಾರತೀಯ ಖರೀದಿದಾರರಿಗೆ ಮಾತನಾಡಿದ್ದಾರೆ. ಒಟ್ಟು ಶೇ. 52ರಷ್ಟು ಮಂದಿ ತಮ್ಮ ರಿಯಲ್ ಎಸ್ಟೇಟ್ ಹೂಡಿಕೆಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಆಸ್ತಿ ನಿರ್ವಹಣಾ ಸೇವೆಗಳನ್ನು ಹೊಂದಲು ಬಯಸಿದ್ದಾರೆ.

ಭಾವನಾತ್ಮಕ ಸೆಳೆತ

ಎನ್‌ಆರ್‌ಐಗಳು ಭಾರತದಲ್ಲಿ ಆಸ್ತಿ ಖರೀದಿಸಲು ಒಲವು ವ್ಯಕ್ತಪಡಿಸುವ ಹಿಂದೆ ತಾಯ್ನೆಲ ಎನ್ನುವ ಭಾವನಾತ್ಮಕತೆಯೂ ಪ್ರಭಾವ ಬೀರುತ್ತದೆ. ಶೇ. 60ರಷ್ಟು ಮಂದಿ ಸುರಕ್ಷತೆ ಮತ್ತು ಹುಟ್ಟೂರು ಎನ್ನುವ ಕಾರಣಕ್ಕೆ ಭಾರತದಲ್ಲಿ ಆಸ್ತಿ ಖರೀದಿಸುತ್ತಾರೆ.

ಇದನ್ನೂ ಓದಿ: ಕಿರಿಕಿರಿಯುಂಟು ಮಾಡುವ ಎಸ್ಸೆಮ್ಮೆಸ್, ಧ್ವನಿ ಕರೆಗಳಿಗೆ ಟ್ರಾಯ್ ಬ್ರೇಕ್!

ಕುಟುಂಬಸ್ಥರ ನೆಲೆ

ಕುಟುಂಬಸ್ಥರು ಭಾರತದಲ್ಲಿ ನೆಲೆಸಿದ್ದಾರೆ ಎನ್ನುವ ಕಾರಣಕ್ಕೆ ಶೇ. 43ರಷ್ಟು ಎನ್‌ಆರ್‌ಐಗಳು ಇಲ್ಲಿನ ಆಸ್ತಿ ಮೇಲೆ ಹೂಡಿಕೆ ಮಾಡುತ್ತಾರೆ. ಹಿರಿಯರಿಗೆ ಲಭಿಸುವ ಸೌಲಭ್ಯ ಇವರಿಗೆ ಮುಖ್ಯ ವಿಚಾರವಾಗುತ್ತದೆ. ಶೇ. 46ರಷ್ಟು ಅನಿವಾಸಿ ಭಾರತೀಯರು ಆಸ್ತಿ ಹುಡುಕಾಟಕ್ಕೆ ರಿಯಲ್‌ ಎಸ್ಟೇಟ್‌ ವೆಬ್‌ಸೈಟ್‌ ಮೊರೆ ಹೋಗುತ್ತಾರೆ. ಒಟ್ಟಿನಲ್ಲಿ ರಿಯಲ್ ಎಸ್ಟೇಟ್ ಭರವಸೆಯ ಹೂಡಿಕೆಯಾಗಿ ಹೊರ ಹೊಮ್ಮಿದೆ. ಎನ್ಆರ್‌ಐ ವಸತಿ ಮಾರಾಟವು ಶೇ. 11ರಿಂದ 15ಕ್ಕೆ ಏರಿದೆ ಮತ್ತು 2024ರ ವೇಳೆಗೆ ಶೇ. 20ಕ್ಕೆ ತಲುಪುವ ನಿರೀಕ್ಷೆಯಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿ

Exit mobile version