ಶ್ರೀನಗರ: ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಹಿಂದು ಯಾತ್ರಿಕರ ಮೇಲೆ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಪೊಲೀಸರು ಮೊದಲ ಆರೋಪಿಯನ್ನು ಬಂಧಿಸಿದ್ದಾರೆ. ರಿಯಾಸಿಯಲ್ಲಿ ಜೂನ್ 9ರಂದು ಉಗ್ರರು ಯಾತ್ರಿಕರ ಮೇಲೆ ದಾಳಿ (Reasi Terror Attack) ನಡೆಸಲು ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸಿದ ಹಕೀಮ್ ದಿನ್ (Hakim Din) ಎಂಬ ಶಂಕಿತ ಉಗ್ರನನ್ನು ಪೊಲೀಸರು ರಾಜೌರಿ (Rajouri District) ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಬಂಧಿತನ ವಿಚಾರಣೆ ನಡೆಯುತ್ತಿದ್ದು, ಸ್ಫೋಟಕ ಮಾಹಿತಿ ಲಭಿಸುವ ಸಾಧ್ಯತೆ ಇದೆ.
“ರಿಯಾಸಿ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೌರಿ ಜಿಲ್ಲೆಯಲ್ಲಿ ಹಕೀಮ್ ದಿನ್ ಎಂಬ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ಈತನೇ ದಾಳಿಯ ರೂವಾರಿ ಆಗದಿದ್ದರೂ, ಉಗ್ರರ ದಾಳಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ್ದಾನೆ. ಇದರಿಂದ ಉಗ್ರರು ಸುಲಭವಾಗಿ ದಾಳಿ ಮಾಡಲು ಸಾಧ್ಯವಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ” ಎಂಬುದಾಗಿ ರಿಯಾಸಿ ಎಸ್‌ಪಿ ಮೋಹಿತ್ ಶರ್ಮಾ ಅವರು ಮಾಹಿತಿ ನೀಡಿದ್ದಾರೆ.
One person has been arrested in connection with Reasi terror attack by Reasi Police, says J&K Police. pic.twitter.com/GSShuzIMof
— ANI (@ANI) June 19, 2024
ಜೂನ್ 9ರಂದು ಏನಾಗಿತ್ತು?
ದೆಹಲಿ ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ಹಿಂದು ಯಾತ್ರಿಕರು ಜೂನ್ 9ರಂದು ಬಸ್‌ನಲ್ಲಿ ವೈಷ್ಣೋದೇವಿ ಯಾತ್ರೆಗೆ ಹೊರಟಿದ್ದರು. ರಿಯಾಸಿಜಿಲ್ಲೆಯ ತೆರ್ಯಾತ್ ಗ್ರಾಮದ ಬಳಿಯ ಮಾರ್ಗವಾಗಿ ಬಸ್ ಚಲಿಸುತ್ತಿತ್ತು. ಆದರೆ, ಉಗ್ರರು ಬಸ್‌ಅನ್ನು ಹಿಂಬಾಲಿಸಿಕೊಂಡು ಬಂದು ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ದಾಳಿಯ ಹಿನ್ನೆಲೆಯಲ್ಲಿ ಬಸ್ ಕಣಿವೆಗೆ ಉರುಳಿತ್ತು. ಇದರಿಂದಾಗಿ 9 ಮಂದಿ ಮೃತಪಟ್ಟರೆ, 33 ಜನ ಗಾಯಗೊಂಡಿದ್ದರು. ದಾಳಿಯ ಹೊಣೆಯನ್ನು ಲಷ್ಕರೆ ತಯ್ಬಾ ಉಗ್ರ ಸಂಘಟನೆಯು ಹೊತ್ತುಕೊಂಡಿದೆ.
ರಿಯಾಸಿಯಲ್ಲಿ ಯಾತ್ರಿಕರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರವು, ಎನ್‌ಐಎ ತನಿಖೆಗೆ ಆದೇಶಿಸಿದೆ. ಇದುವರೆಗೆ 50ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಜೂನ್ 17ರಂದು ಉನ್ನತ ಮಟ್ಟದ ಸಭೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉಗ್ರರನ್ನು ಮಟ್ಟಹಾಕಿ ಎಂಬುದಾಗಿ ಸೂಚನೆ ನೀಡಿದ್ದಾರೆ. ನರೇಂದ್ರ ಮೋದಿ ಅವರೂ ಜಮ್ಮು-ಕಾಶ್ಮೀರ ಭದ್ರತೆ ಕುರಿತು ಹೈ ಲೆವೆಲ್ ಮೀಟಿಂಗ್ ನಡೆಸಿದ್ದಾರೆ. ಈಗಾಗಲೇ ಉಗ್ರನ ರೇಖಾಚಿತ್ರವನ್ನು ಬಿಡುಗಡೆ ಮಾಡಲಾಗಿದ್ದು, ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.
ಇದನ್ನೂ ಓದಿ: Kashmir Encounter: ಕಾಶ್ಮೀರಕ್ಕೆ ಮೋದಿ ಭೇಟಿಗೂ ಒಂದು ದಿನ ಮೊದಲೇ ಇಬ್ಬರು ಉಗ್ರರ ಹತ್ಯೆ