ನವದೆಹಲಿ: ದೇಶದ ಉನ್ನತ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳ ನೇಮಕಕ್ಕಾಗಿ ರಚಿಸಲಾಗಿರುವ ಕೊಲಿಜಿಯಂ (Collegium) ಅನ್ವಯ ಸಲ್ಲಿಸುವ ಶಿಫಾರಸುಗಳಿಗೆ ಕ್ಷಿಪ್ರವಾಗಿ ಅನುಮೋದನೆ ಸಿಗದಿರುವ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ, ಜಡ್ಜ್‌ಗಳ ನೇಮಕದ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. “ದೇಶಾದ್ಯಂತ ೨೦೨೨ರಲ್ಲಿ ದಾಖಲೆ ಪ್ರಮಾಣದಲ್ಲಿ ನ್ಯಾಯಮೂರ್ತಿಗಳ ನೇಮಕವಾಗಿದೆ” ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
“ದೇಶಾದ್ಯಂತ ಇರುವ ಹೈಕೋರ್ಟ್‌ಗಳಿಗೆ ಪ್ರಸಕ್ತ ವರ್ಷ ೧೬೫ ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ. ಒಂದು ವರ್ಷದಲ್ಲಿ ಇಷ್ಟು ನ್ಯಾಯಮೂರ್ತಿಗಳನ್ನು ನೇಮಕ ಮಾಡಿರುವುದು ದಾಖಲೆಯಾಗಿದೆ” ಎಂದು ರಿಜಿಜು ಅವರು ರಾಜ್ಯಸಭೆಗೆ ಲಿಖಿತ ಮಾಹಿತಿ ನೀಡಿದ್ದಾರೆ. ಕೊಲಿಜಿಯಂ ಅನ್ವಯ ಸಲ್ಲಿಸುವ ಶಿಫಾರಸುಗಳಿಗೆ ಅನುಮೋದನೆ ನೀಡುವ ಕುರಿತು ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರಿಂದಾಗಿ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
“ದೇಶದಲ್ಲಿರುವ ಒಟ್ಟು ೧,೧೦೮ ಜಡ್ಜ್‌ಗಳ ಹುದ್ದೆ ಪೈಕಿ ೩೩೧ ಹುದ್ದೆಗಳು ಖಾಲಿ ಇವೆ. ಕೊಲಿಜಿಯಂ ಅನ್ವಯ ಸುಪ್ರೀಂ ಕೋರ್ಟ್ ಸಲ್ಲಿಸಿರುವ ೩೩೧ ಶಿಫಾರಸುಗಳ ಪೈಕಿ ೧೪೭ ಶಿಫಾರಸುಗಳ ಅನುಮೋದನೆಗೆ ಸರ್ಕಾರವು ನೇಮಕ ಪ್ರಕ್ರಿಯೆಯನ್ನು ಅನುಸರಿಸುತ್ತಿದೆ. ೨೦೧೪ರ ಮೇ ತಿಂಗಳಿಂದ ಇದುವರೆಗೆ ಸರ್ವೋಚ್ಚ ನ್ಯಾಯಾಲಯಕ್ಕೆ ೪೬ ನ್ಯಾಯಮೂರ್ತಿಗಳ ನೇಮಕ ಮಾಡಲಾಗಿದೆ. ಹೈಕೋರ್ಟ್‌ಗಳಿಗೆ ೮೫೩ ಜಡ್ಜ್‌ಗಳ ನೇಮಕ ಮಾಡಲಾಗಿದ್ದು, ೬೨೧ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂಗೊಳಿಸಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Supreme Court | ಕೊಲಿಜಿಯಂ ಕಾನೂನುಬದ್ಧ, ಅನುಸರಿಸಬೇಕು : ಕೇಂದ್ರಕ್ಕೆ ಸುಪ್ರೀಂ ಸೂಚನೆ