Site icon Vistara News

ಮಹಾರಾಷ್ಟ್ರದಲ್ಲಿ ನವದಂಪತಿಗಳಿಗೆ ನಿಯಮಿತ ಆರೋಗ್ಯ ತಪಾಸಣೆ; ಶಿಶು ಮರಣ ತಡೆಯಲು ವಿನೂತನ ಕ್ರಮ

Maharashtra

ಮುಂಬಯಿ: ಮಹಾರಾಷ್ಟ್ರ ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ತಡೆದು, ಆರೋಗ್ಯವಂತ ಮಕ್ಕಳ ಜನನ ಪ್ರಮಾಣ ಹೆಚ್ಚಿಸುವ ಸಲುವಾಗಿ ಅಲ್ಲಿನ ಆರೋಗ್ಯ ಇಲಾಖೆ ಇದೇ ಮೊದಲ ಬಾರಿಗೆ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಹೊಸದಾಗಿ ಮದುವೆಯಾದ ದಂಪತಿಗಳಿಗೆ ಆರೋಗ್ಯ ತಪಾಸಣಾ ಅಭಿಯಾನ ಹಮ್ಮಿಕೊಂಡಿದೆ.

ಇದರಲ್ಲಿ ಪುರುಷರು /ಮಹಿಳೆಯರ ಹಿಮೊಗ್ಲೊಬಿನ್ ಮಟ್ಟ, ಬಿಎಂಐ (ಭೌತಿಕ ದ್ರವ್ಯರಾಶಿ ಸೂಚಿ), ಎಚ್​ಐವಿ, ಡಯಾಬಿಟಿಸ್​, ಹೈಪರ್​ಟೆನ್ಷನ್​ ಸೇರಿ ಇನ್ನಿತರ ಯಾವುದಾದರೂ ಗಂಭೀರ ಸ್ವರೂಪದ ಕಾಯಿಲೆಗಳು ಇವೆಯಾ ಎಂಬ ತಪಾಸಣೆಯನ್ನೂ ಮಾಡಲಾಗುವುದು. ಇದರಿಂದ ಆ ದಂಪತಿ ಆರೋಗ್ಯವಂತರಾಗಿದ್ದಾರಾ? ಅದರಲ್ಲೂ ಮಹಿಳೆ ಗರ್ಭಧರಿಸಲು ಸಶಕ್ತಳಿದ್ದಾಳಾ? ಎಂಬಿತ್ಯಾದಿ ವರದಿ ಪಡೆಯಲು ಸಾಧ್ಯವಾಗುತ್ತದೆ. ಅಪೌಷ್ಟಿಕತೆ ಮತ್ತು ಇನ್ನಿತರ ಸಮಸ್ಯೆಗಳಿದ್ದರೆ ಗರ್ಭ ಧರಿಸುವ ಪೂರ್ವದಲ್ಲಿಯೇ ಔಷಧ- ಚಿಕಿತ್ಸೆ ಕೊಡುವ ಕ್ರಮವನ್ನೂ ಈ ಅಭಿಯಾನ ಒಳಗೊಂಡಿದೆ.

ಕೆಲವು ಕಾರ್ಮಿಕ ದಂಪತಿ ಒಂದೆಡೆಯಿಂದ ಇನ್ನೊಂದೆಡೆಗೆ ವಲಸೆ ಹೋಗುತ್ತಿರುತ್ತಾರೆ. ಆಗೇನಾದರೂ ಆ ಮಹಿಳೆ ಗರ್ಭವತಿಯಾದರೆ ಕಾಲಕಾಲಕ್ಕೆ ಅವರಿಗೆ ಆರೋಗ್ಯ ತಪಾಸಣೆ, ಅಗತ್ಯ ಔಷಧಗಳನ್ನು ಪಡೆಯಲು ಸಮಸ್ಯೆ ಆಗಬಹುದು. ಆದರೆ ನಾವೀಗ ಹಮ್ಮಿಕೊಂಡಿರುವ ಕಾರ್ಯಕ್ರಮದಡಿ ಇಂಥ ದಂಪತಿ ಮೇಲೆ ನಿಗಾ ಇಡುತ್ತೇವೆ. ಆ ಮಹಿಳೆಯ ತಪಾಸಣೆ, ಔಷಧಗಳ ಜವಾಬ್ದಾರಿ ನಿಭಾಯಿಸಲಾಗುವುದು ಎಂದು ಪಾಲ್ಗಾರ್ ಜಿಲ್ಲಾ ಆರೋಗ್ಯಾಧಿಕಾರಿ ಡಾ. ದಯಾನಂದ ಸರಸ್ವತಿ ಹೇಳಿದ್ದಾರೆ. ‘ಹಾಗೇ ಯಾವುದೇ ಮಹಿಳೆಯ ಬಿಎಂಐ 18.5ಕ್ಕಿಂತ ಕಡಿಮೆ ಮತ್ತು 25ಕ್ಕಿಂತಲೂ ಹೆಚ್ಚಿಗೆ ಇದ್ದರೆ ಅಂಥವರನ್ನು ಆಸ್ಪತ್ರೆಗೆ ದಾಖಲಿಸಿ, ಇನ್ನಷ್ಟು ತಪಾಸಣೆಗೆ ಒಳಪಡಿಸಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.

ಈ ಕಾರ್ಯಕ್ರಮವನ್ನು ಮೊದಲು ನಾಶಿಕ್ ನಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು. ಇದೀಗ ಹಲವು ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ದೇಶದಲ್ಲಿ ತಾಯಿ-ಶಿಶುವಿನ ಮರಣ ಪ್ರಮಾಣ ತಡೆಯುವಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಬಡ ಕಾರ್ಮಿಕರು, ವಲಸಿಗರು ದೇಹದಲ್ಲಿ ಅನಾರೋಗ್ಯ ಇಟ್ಟುಕೊಂಡು ಮಗುವನ್ನು ಪಡೆಯಲು ಮುಂದಾದಾಗ ಸಹಜವಾಗಿಯೇ ಹೆರಿಗೆ ಸಮಯದಲ್ಲಿ ತೊಂದರೆಯಾಗುತ್ತದೆ. ಇದನ್ನೆಲ್ಲ ತಪ್ಪಿಸಲು ಮಹಾರಾಷ್ಟ್ರ ಸರ್ಕಾರ ಇಂಥದ್ದೊಂದು ಕ್ರಮ ಕೈಗೊಂಡಿದೆ.

ಇದನ್ನೂ ಓದಿ: Border Dispute | ಮಹಾರಾಷ್ಟ್ರ ಗಡಿ ಸಮನ್ವಯ ಸಚಿವರ ಎದುರು ಎಂಇಎಸ್ ಮುಖಂಡರಿಂದ ನಾಡದ್ರೋಹಿ ಘೋಷಣೆ

Exit mobile version