ನವ ದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಎದುರು ಸೋತಿದ್ದ ಬಿಜೆಪಿ, ಅಷ್ಟು ಸುಲಭಕ್ಕೆ ಅಲ್ಲಿನ ಪಟ್ಟ ಬಿಟ್ಟುಕೊಡುವ ಹಾಗೆ ಕಾಣುತ್ತಿಲ್ಲ. ಡಿಸೆಂಬರ್ 4ರಂದು ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಒಟ್ಟು 250 ವಾರ್ಡ್ಗಳಿಗೆ ನಡೆದ ಎಲೆಕ್ಷನ್ನಲ್ಲಿ ಆಮ್ ಆದ್ಮಿ ಪಕ್ಷ 134 ಸೀಟುಗಳನ್ನು ಗೆದ್ದಿದ್ದರೆ, ಬಿಜೆಪಿ 104 ವಾರ್ಡ್ಗಳಲ್ಲಿ ಜಯಸಾಧಿಸಿತ್ತು. ಈ ಮೂಲಕ ಕಳೆದ 15ವರ್ಷಗಳಿಂದಲೂ ದೆಹಲಿ ಮಹಾನಗರ ಪಾಲಿಕೆಯಲ್ಲಿ ಇದ್ದ ಬಿಜೆಪಿ ಆಡಳಿತ ಕೊನೆಗೊಂಡಿತ್ತು.
ಗೆದ್ದ ಪಕ್ಷದಿಂದಲೇ ಮೇಯರ್ ಮತ್ತು ಉಪಮೇಯರ್ಗಳನ್ನು ಆಯ್ಕೆ ಮಾಡಲಾಗುತ್ತದೆ. ದೆಹಲಿ ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿದ ಆಮ್ ಆದ್ಮಿ ಪಕ್ಷ ಜನವರಿ 6ರಂದು ಮೇಯರ್ ಮತ್ತು ಉಪಮೇಯರ್ ಸ್ಥಾನದ ಆಯ್ಕೆ ಪ್ರಕ್ರಿಯೆಯನ್ನು ನಿಗದಿಪಡಿಸಿತ್ತು. ಇಂದು ನಾಮಪತ್ರ ಸಲ್ಲಿಸಲು ಕೊನೇ ದಿನವಾಗಿತ್ತು. ಇದೇ ವೇಳೆ ಬಿಜೆಪಿ ಯೂಟರ್ನ್ ಹೊಡೆದಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಇದೀಗ ಮೇಯರ್-ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅದರಂತೆ ಮೇಯರ್ ಸ್ಥಾನಕ್ಕೆ ಬಿಜೆಪಿ ರೇಖಾ ಗುಪ್ತಾರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದು, ಉಪಮೇಯರ್ ಸ್ಥಾನಕ್ಕೆ ಕಮಲ್ ಬಾಗ್ರಿ ಅವರನ್ನು ಕಣಕ್ಕಿಳಿಸಿದೆ. ಇವರಿಬ್ಬರೂ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಇದರಲ್ಲಿ ರೇಖಾಗುಪ್ತಾ ಶಾಲಿಮಾರ್ ಬಾಘ್ನ ಕೌನ್ಸಿಲರ್ ಆಗಿದ್ದು, ಮೂರು ಅವಧಿಗೆ ಆಡಳಿತ ನಡೆಸಿದ ಅನುಭವಿ. ಹಾಗೇ, ಕಮಲ್ ಬಾಗ್ರಿಯವರು ರಾಮ್ ನಗರ ವಾರ್ಡ್ನ ಕೌನ್ಸಿಲರ್. ಮೇಯರ್ ಹುದ್ದೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು. ಗೆದ್ದ ಪಕ್ಷದವರೇ ಆಯ್ಕೆಯಾಗಬೇಕು ಎಂದೇನೂ ಇಲ್ಲ. ಹಾಗಾಗಿಯೇ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿದೆ. ಇನ್ನೊಂದೆಡೆ ಆಮ್ ಆದ್ಮಿ ಪಕ್ಷದಿಂದ ಶೆಲ್ಲಿ ಒಬೆರಾಯ್ ಮೇಯರ್ ಅಭ್ಯರ್ಥಿಯಾಗಿದ್ದು, ಉಪಮೇಯರ್ ಸ್ಥಾನಕ್ಕೆ ಆಲೆ ಮೊಹಮ್ಮದ್ ಇಕ್ಬಾಲ್ ಅವರನ್ನು ಅಭ್ಯರ್ಥಿಯನ್ನಾಗಿಸಿದೆ.
ಇದನ್ನೂ ಓದಿ: Delhi MCD Election | ದೆಹಲಿ ಪಾಲಿಕೆ ಚುನಾವಣೆಯಲ್ಲಿ ಸೋಲುಂಡ ಬಿಜೆಪಿಯಿಂದ ಆಪರೇಷನ್ ಕಮಲ?