ಮುಂಬೈ: ದೇಶದ ಖ್ಯಾತ ಹೂಡಿಕೆದಾರ, ಉದ್ಯಮಿ ರಾಕೇಶ್ ಜುಂಜುನ್‌ವಾಲಾ (Rakesh Jhunjhunwala) ಅವರ ಪತ್ನಿ ರೇಖಾ ಜುಂಜುನ್‌ವಾಲಾ (Rekha Jhunjhunwala) ಅವರು ಮಹಾರಾಷ್ಟ್ರದಲ್ಲಿ (Maharashtra) ಮನೆ ಖರೀದಿಸಿದ್ದಾರೆ. ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತರೆ ಸಮುದ್ರ ಕಾಣುವುದಿಲ್ಲ ಎಂಬ ಒಂದೇ ಕಾರಣಕ್ಕಾಗಿ ಅವರು 118 ಕೋಟಿ ರೂಪಾಯಿ ಕೊಟ್ಟು ನಿರ್ಮಾಣ ಹಂತದಲ್ಲಿರುವ ಎದುರಿನ ಮನೆಯನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದ ಮಲಬಾರ್ ಹಿಲ್‌ನಲ್ಲಿ ರೇಖಾ ಜುಂಜುನ್‌ವಾಲಾ ಅವರ ನಿವಾಸವಾದ ‘ರೇರ್ ವಿಲ್ಲಾ’ ಇದೆ. ಸಮುದ್ರ ಕಡೆಗೆ ಮುಖ ಮಾಡಿ ಇರುವ ನಿವಾಸಗಳಿಗೆ ಮಲಬಾರ್ ಹಿಲ್ ಖ್ಯಾತಿಯಾಗಿದ್ದು, ಇಲ್ಲಿ ರೇಖಾ ಜುಂಜುನ್‌ವಾಲಾ ಅವರ ಬೃಹತ್ ಬಂಗಲೆ ಇದೆ. ಆದರೆ, ಇವರ ಮನೆಯ ಎದುರು ರಾಕ್‌ಸೈಡ್ ಸಿಎಚ್‌ಎಸ್ ಎಂಬ ಮತ್ತೊಂದು ಕಟ್ಟಡದ ಮರುನವೀಕರಣ ಕೆಲಸ ನಡೆಯುತ್ತಿದೆ. ರಾಕ್‌ಸೈಡ್ ಸಿಎಚ್‌ಎಸ್ ಮನೆ ನಿರ್ಮಿಸಿದರೆ, ರೇಖಾ ಜುಂಜುನ್‌ವಾಲಾ ನಿವಾಸದಿಂದ ಸಮುದ್ರ ಕಾಣಿಸುವುದಿಲ್ಲ. ಹಾಗಾಗಿ, ರೇಖಾ ಜುಂಜುನ್‌ವಾಲಾ ಅವರು ತಮ್ಮ ಮನೆಯ ಎದುರಿನ ಮನೆಯನ್ನೇ ಖರೀದಿಸಿದ್ದಾರೆ.
ವಾಲ್ಕೇಶ್ವರ್ ಪ್ರದೇಶದಲ್ಲಿ ರಾಕ್‌ಸೈಡ್ ಸಿಎಚ್‌ಎಸ್ ಸೇರಿ ಏಳು ಕಟ್ಟಡಗಳ ಮರುನವೀಕರಣ ಕೆಲಸ ನಡೆಯುತ್ತಿದೆ. ಶಪೂರ್‌ಜಿ ಪಲ್ಲೋನ್‌ಜಿ ಡೆವಲಪರ್ ಕಂಪನಿಯು ನಿರ್ಮಾಣದ ಹೊಣೆ ಹೊತ್ತಿದೆ. ಆದರೆ, ರೇಖಾ ಜುಂಜುನ್‌ವಾಲಾ ಅವರು ಸಮುದ್ರವನ್ನು ನೋಡಲು ಆಗದ ಕಾರಣ ಅವರು ಇಡೀ ರಾಕ್‌ಸೈಡ್ ಸಿಎಚ್‌ಎಸ್ ಕಟ್ಟಡವನ್ನು 118 ಕೋಟಿ ರೂ. ವ್ಯಯಿಸಿ ಖರೀದಿಸಿದ್ದಾರೆ. ಈಗಾಗಲೇ, ಕಟ್ಟಡದ ದಾಖಲೆಗಳನ್ನು ಶಪೂರ್‌ಜಿ ಪಲ್ಲೋನ್‌ಜಿ ಡೆವಲಪರ್ ಸಂಸ್ಥೆಯು ರೇಖಾ ಜುಂಜುನ್‌ವಾಲಾ ಅವರಿಗೆ ಹಸ್ತಾಂತರಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Rakesh Jhunjhunwala | ರಾಕೇಶ್ ಜುಂಜುನ್ವಾಲಾಗೆ ಏನಾಗಿತ್ತು? ಹೊರಬಿತ್ತು ವೈದ್ಯಕೀಯ ವರದಿ
ರಾಕೇಶ್ ಜುಂಜುನ್‌ವಾಲಾ ಅವರು ದೇಶದ ಖ್ಯಾತ ಹೂಡಿಕೆದಾರರು. ಷೇರು ಮಾರುಕಟ್ಟೆಯ ಬಿಗ್ ಬುಲ್, ಭಾರತದ ವಾರೆನ್ ಬಫೆಟ್ ಎಂದೇ ಖ್ಯಾತಿಯಾಗಿದ್ದ ಅವರು 2022ರಲ್ಲಿ ನಿಧನರಾದರು. ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರ ಮಗನಾಗಿದ್ದ ಜುಂಜುನ್‌ವಾಲಾ ಅವರು ಕೇವಲ 5 ಸಾವಿರ ರೂ. ಹೂಡಿಕೆಯಿಂದ ಷೇರು ವ್ಯವಹಾರವನ್ನು ಆರಂಭಿಸಿ, ಅಂತಿಮವಾಗಿ ಷೇರು ಪೇಟೆಯ ಸರದಾರರಾಗಿ 5.8 ಶತಕೋಟಿ ಡಾಲರ್ (ಸುಮಾರು 45 ಸಾವಿರ ಕೋಟಿ ರೂ.) ಸಂಪತ್ತಿಗೆ ಒಡೆಯರಾಗಿದ್ದರು. ಸದ್ಯ, ರೇಖಾ ಜುಂಜುನ್‌ವಾಲಾ ಅವರ ಆಸ್ತಿ ಮೌಲ್ಯ 58 ಸಾವಿರ ಕೋಟಿ ರೂ. ಆಗಿದೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ