Site icon Vistara News

Reliance: ವಯಾಕಾಮ್‌ 18ನಲ್ಲಿರುವ ವಿದೇಶಿ ಕಂಪನಿಯ ಎಲ್ಲ ಷೇರು ಖರೀದಿಗೆ ಅಂಬಾನಿ ನಿರ್ಧಾರ

Mukesh Ambani

Reliance to buy 13% of Paramount's stake in Viacom18 for Rs 4,286 crore

ನವದೆಹಲಿ: ಮುಕೇಶ್‌ ಅಂಬಾನಿ ಒಡೆತನದ, ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ (RIL) ವಯಾಕಾಮ್‌ 18 ಮೀಡಿಯಾ (Viacom 18 Media) ಸಂಸ್ಥೆಯಲ್ಲಿ ಜಾಗತಿಕ ಎಂಟರ್‌ಟೇನ್‌ಮೆಂಟ್‌ ಕಂಪನಿ ಪ್ಯಾರಾಮೌಂಟ್‌ ಗ್ಲೋಬಲ್‌ (Paramount Global) ಹೊಂದಿರುವ ಎಲ್ಲ ಶೇ.13.01ರಷ್ಟು ಷೇರುಗಳನ್ನು ಖರೀದಿಸಲು ರಿಲಯನ್ಸ್‌ ಮುಂದಾಗಿದೆ. ಸುಮಾರು 4,286 ಕೋಟಿ ರೂಪಾಯಿ ಮೌಲ್ಯದ ಎಲ್ಲ ಷೇರುಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆರ್‌ಐಎಲ್‌ ತಿಳಿಸಿದೆ.

“ರಿಲಯನ್ಸ್‌ ಹಾಗೂ ಪ್ಯಾರಾಮೌಂಟ್‌ ಗ್ಲೋಬಲ್‌ ಕಂಪನಿ ಮಧ್ಯೆ ಹೊಸ ಒಪ್ಪಂದ ಆಗಿದೆ. ಪ್ಯಾರಾಮೌಟ್‌ ಗ್ಲೋಬಲ್‌ ಕಂಪನಿಯು ವಯಾಕಾಮ್‌ 18 ಮೀಡಿಯಾ ಕಂಪನಿಯಲ್ಲಿ ಹೊಂದಿರುವ ಶೇ.13.01ರಷ್ಟು ಷೇರುಗಳನ್ನು ರಿಲಯನ್ಸ್‌ ಖರೀದಿಸಲಿದೆ. ಒಟ್ಟು 4,286 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಲಿದೆ” ಎಂದು ರಿಲಯನ್ಸ್‌ ಮಾಹಿತಿ ನೀಡಿದೆ. ಇದರೊಂದಿಗೆ ವಯಾಕಾಮ್‌ 18 ಮೀಡಿಯಾದಲ್ಲಿ ರಿಲಯನ್ಸ್‌ ಷೇರುಗಳ ಪಾಲು ಶೇ.70.49ಕ್ಕೆ ಏರಿಕೆಯಾಗಲಿದೆ.

ರಿಲಯನ್ಸ್‌ ಇದುವರೆಗೆ ವಯಾಕಾಮ್‌ 18 ಮೀಡಿಯಾದಲ್ಲಿ ಶೇ.57.48ರಷ್ಟು ಷೇರುಗಳನ್ನು ಹೊಂದಿತ್ತು. ಈಗ ಇದರ ಪಾಲು ಮತ್ತಷ್ಟು ಜಾಸ್ತಿಯಾಗಲಿದೆ. ರಿಲಯನ್ಸ್‌ ಒಡೆತನದ ವಯಾಕಾಮ್‌ 18 ಮೀಡಿಯಾ ಸಂಸ್ಥೆಯು ಭಾರತದಲ್ಲಿ ಸುಮಾರು 40 ಚಾನೆಲ್‌ಗಳನ್ನು ಹೊಂದಿದೆ. ಪ್ಯಾರಾಮೌಂಟ್‌ ಗ್ಲೋಬಲ್‌ ಕಂಪನಿಯೂ ಜಾಗತಿಕ ಮೀಡಿಯಾ ಸಂಸ್ಥೆಯಾಗಿದ್ದು, ಅದರ ವೆಬ್‌ಸಿರೀಸ್‌ ಹಾಗೂ ಸಿನಿಮಾಗಳು ರಿಲಯನ್ಸ್‌ನ ಜಿಯೋ ಸಿನಿಮಾ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿವೆ. ರಿಲಯನ್ಸ್‌ ಷೇರು ಖರೀದಿಯ ಬಳಿಕವೂ ಸ್ಟ್ರೀಮ್‌ ಆಗಲಿವೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: Mukesh Ambani: ಅಮೆರಿಕದಲ್ಲಿರುವ ಅಪಾರ್ಟ್‌ಮೆಂಟ್‌ ಮಾರಿದ ಮುಕೇಶ್‌ ಅಂಬಾನಿ; ರೇಟ್‌ ಕೇಳಿದರೆ ಅಚ್ಚರಿ

ಈಗಾಗಲೇ ರಿಲಯನ್ಸ್‌ ಹಾಗೂ ವಾಲ್ಟ್‌ ಡಿಸ್ನಿ ಕಂಪನಿಗಳ ವಿಲೀನದ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ. ಒಪ್ಪಂದದಂತೆ ರಿಲಯನ್ಸ್‌ ಕಂಪನಿಯ ವಯಾಕಾಮ್‌ 18 ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಹಾಗೂ ವಾಲ್ಟ್‌ ಡಿಸ್ನಿ ಕಂಪನಿಯ ಸ್ಟಾರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ವಿಲೀನಗೊಳ್ಳಲಿವೆ. ಜಾಯಿಂಟ್‌ ವೆಂಚರ್‌ನಲ್ಲಿ ರಿಲಯನ್ಸ್‌ ಕಂಪನಿಯು ಮೊದಲು 11,500 ಕೋಟಿ ರೂ. ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಿದೆ. ಮಾಧ್ಯಮ ಹಾಗೂ ಮನರಂಜನೆ ಕ್ಷೇತ್ರದಲ್ಲಿ ಒಟ್ಟು 70,352 ಕೋಟಿ ರೂ. ಹೂಡಿಕೆಯಾಗಲಿದೆ. ಹೂಡಿಕೆ ಪ್ರಕ್ರಿಯೆ ಮುಗಿದ ಬಳಿಕ ಇಡೀ ಜಾಯಿಂಟ್‌ ವೆಂಚರ್‌ನ ನಿಯಂತ್ರಣವು ರಿಲಯನ್ಸ್‌ ಬಳಿಯ ಇರಲಿದೆ ಎಂದು ಪ್ರಕಟಣೆ ತಿಳಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version