ಗಾಂಧಿನಗರ, ಗುಜರಾತ್): ಹಸಿರು ಇಂಧನ (green energy) ಕ್ಷೇತ್ರದಲ್ಲಿ ಮುಂದಿನ 10 ವರ್ಷಗಳವರೆಗೆ ಗುಜರಾತ್‌ನಲ್ಲಿ (Gujarat State) ರಿಲಯನ್ಸ್ ಹೂಡಿಕೆಯನ್ನು (Investment) ಮುಂದುವರಿಸಲಿದೆ. 2030 ರ ವೇಳೆಗೆ ಗುಜರಾತ್‌ನ ಹಸಿರು ಇಂಧನದ ಒಟ್ಟಾರೆ ಬಳಕೆಯ ಅರ್ಧದಷ್ಟು ಭಾಗವನ್ನು ರಿಲಯನ್ಸ್ ಉತ್ಪಾದಿಸಲಿದೆ (Reliance Industries) ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ (mukesh ambani) ಅವರು ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ 2024ರಲ್ಲಿ (Vibrant Gujarat summit) ಘೋಷಣೆ ಮಾಡಿದರು.
ಹಸಿರು ಅಭಿವೃದ್ಧಿಯಲ್ಲಿ ಗುಜರಾತ್ ರಾಜ್ಯವು ಜಾಗತಿಕ ನಾಯಕನಾಗಿ ಹೊರಹೊಮ್ಮುವುದನ್ನು ಖಚಿತಪಡಿಸಿಕೊಳ್ಳಲು ಜಾಮ್‌ನಗರದಲ್ಲಿ 5,000 ಎಕರೆ ವ್ಯಾಪ್ತಿಯಲ್ಲಿ ಧೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್‌ನ ನಿರ್ಮಾಣವನ್ನು ರಿಲಯನ್ಸ್ ಪ್ರಾರಂಭಿಸಿದೆ. “ಇದು ಹೆಚ್ಚಿನ ಸಂಖ್ಯೆಯಲ್ಲಿ ಹಸಿರು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಹಸಿರು ಉತ್ಪನ್ನಗಳು ಹಾಗೂ ವಸ್ತುಗಳ ಉತ್ಪಾದನೆಗೆ ಚಾಲನೆಯನ್ನು ನೀಡುತ್ತದೆ, ಇದು ಗುಜರಾತ್ ಅನ್ನು ಹಸಿರು ಉತ್ಪನ್ನಗಳ ಪ್ರಮುಖ ರಫ್ತುದಾರ ರಾಜ್ಯವನ್ನಾಗಿ ಮಾಡುತ್ತದೆ,” ಎಂದು ಅಂಬಾನಿ ಹೇಳಿದರು.
ಗುಜರಾತ್ ಅನ್ನು ತನ್ನ ಮಾತೃಭೂಮಿ ಮತ್ತು ಕರ್ಮಭೂಮಿ ಎಂದು ಬಣ್ಣಿಸಿದ ಮುಕೇಶ್ ಅಂಬಾನಿ, ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಸುಮಾರು 12 ಲಕ್ಷ ಕೋಟಿ ರೂಪಾಯಿಯನ್ನು ರಿಲಯನ್ಸ್ ಹೂಡಿಕೆ ಮಾಡಿದೆ ಮತ್ತು ಈ ಹೂಡಿಕೆಯ ಮೂರನೇ ಒಂದು ಭಾಗದಷ್ಟು ಗುಜರಾತ್‌ನಲ್ಲಿಯೇ ಮಾಡಲಾಗಿದೆ ಎಂದು ಹೇಳಿದರು. 7 ಕೋಟಿ ಗುಜರಾತಿಗಳ ಕನಸುಗಳನ್ನು ನನಸು ಮಾಡಲು ರಿಲಯನ್ಸ್ ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ಹೇಳಿದರು.
ಇನ್ನೂ ಮುಂದುವರಿದು ದೇಶದ ಆರ್ಥಿಕತೆ ಕುರಿತು ಮಾತನಾಡಿದ ಮುಕೇಶ್ ಅಂಬಾನಿ, “2047ನೇ ಇಸವಿ ವೇಳೆಗೆ ಭಾರತವು 35 ಟ್ರಿಲಿಯನ್ ಅಮೆರಿಕನ್ ಡಾಲರ್ (ಒಂದು ಟ್ರಿಲಿಯನ್ ಅಂದರೆ ಲಕ್ಷ ಕೋಟಿ) ಆರ್ಥಿಕತೆ ಆಗುವುದನ್ನು ಭೂಮಿಯ ಮೇಲಿನ ಯಾವುದೇ ಶಕ್ತಿಯು ತಡೆಯಲು ಸಾಧ್ಯವಿಲ್ಲ. ಮತ್ತು ಗುಜರಾತ್ ರಾಜ್ಯವೊಂದೇ ಆ ಹೊತ್ತಿಗೆ 3-ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆ ಆಗಲಿದೆ ಎಂಬುದನ್ನು ನಾನು ಎದುರು ನೋಡುತ್ತೇನೆ,” ಎಂದು ಅವರು ಹೇಳಿದರು.
ಭಾರತ ಷೇರು ಮಾರುಕಟ್ಟೆಯಲ್ಲಿ ಮಾರುಕಟ್ಟೆ ಮೌಲ್ಯದಲ್ಲಿ ಟಾಪ್ ಒನ್ ಕಂಪನಿ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾಗಿರುವ ಮುಕೇಶ್ ಅಂಬಾನಿ ಅವರು ಇತ್ತೀಚೆಗೆ ನಡೆದ ಧೀರೂಭಾಯಿ ಅಂಬಾನಿ ಜನ್ಮ ದಿನಾಚರಣೆ (ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕರ ದಿನಾಚರಣೆ)ಯಲ್ಲಿ ತಮ್ಮ ಕನಸನ್ನು ತೆರೆದಿಟ್ಟಿದ್ದರು. ಜಾಗತಿಕವಾಗಿ ಅತ್ಯಂತ ಮೌಲ್ಯಯುತ ಟಾಪ್ ಹತ್ತು ಕಂಪನಿಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸಮೂಹವು ಕೂಡ ಒಂದು ಸ‌್ಥಾನ ಪಡೆಯುವಂತೆ ಮಾಡುವ ತಮ್ಮ ಗುರಿಯ ಬಗ್ಗೆ ಹೇಳಿದ್ದರು.
ರಿಲಯನ್ಸ್ ಇಂಡಸ್ಟ್ರೀಸ್ ನ ವಿವಿಧ ವ್ಯವಹಾರಗಳ ಜವಾಬ್ದಾರಿಯನ್ನು ತಮ್ಮ ಮಕ್ಕಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ ಹಾಗೂ ಅನಂತ್ ಅಂಬಾನಿಗೆ ಮುಕೇಶ್ ಅವರು ನೀಡುತ್ತಿದ್ದು, ಹೂಡಿಕೆದಾರರ ನಿರೀಕ್ಷೆಗೆ ಮೀರಿದಂತೆ ರಿಲಯನ್ಸ್ ಸಾಮ್ರಾಜ್ಯದ ವಿಸ್ತರಣೆ ಮಾಡುತ್ತಿದ್ದಾರೆ. ಅಂದ ಹಾಗೆ ಇದಕ್ಕೆ ಪೂರಕವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಟೆಲಿಕಾಂ, ರೀಟೇಲ್, ಹಸಿರು ಇಂಧನ, ಹಣಕಾಸು ಸೇವೆಗಳು ಸೇರಿದಂತೆ ವಿವಿಧ ವ್ಯವಹಾರಗಳಲ್ಲಿ ದೊಡ್ಡ ಮಟ್ದದ ಹೂಡಿಕೆ ಮಾಡುತ್ತಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ್ ಭಾರತ’ (ಸ್ವಾವಲಂಬಿ ಭಾರತ) ಆಗುವ ಕನಸಿನ ಸಾಕಾರಕ್ಕಾಗಿ ಕೆಲಸ ಮಾಡುತ್ತಿದೆ.
ರಿಲಯನ್ಸ್ ಇಂಡಸ್ಟ್ರೀಸ್ ನ ಪ್ರತಿ ಷೇರಿನ ಬೆಲೆ ಬುಧವಾರ ಮಧ್ಯಾಹ್ನ 1.25ರ ಹೊತ್ತಿಗೆ 2,591 ರೂಪಾಯಿ ಇತ್ತು. ಇನ್ನು ಮಾರುಕಟ್ಟೆ ಬಂಡವಾಳ ಮೌಲ್ಯವು 17,53,111 ಕೋಟಿ ರೂಪಾಯಿ (17.53 ಕೋಟಿ ರೂಪಾಯಿ ಇತ್ತು).
ಈ ಸುದ್ದಿಯನ್ನೂ ಓದಿ: Mukesh Ambani: ರಿಲಯನ್ಸ್‌ಗೆ ಜಾಗತಿಕ ಟಾಪ್ 10 ಉದ್ಯಮ ಸಮೂಹದಲ್ಲಿ ಸ್ಥಾನ ಪಡೆಯುವ ಗುರಿ; ಮುಕೇಶ್ ಅಂಬಾನಿ