Site icon Vistara News

ಕೇರಳದ ಸಚಿವರಿಂದ ಸಂವಿಧಾನ ಅವಹೇಳನ, ಪ್ರತಿಭಟನೆಗೆ ಕಾಂಗ್ರೆಸ್‌ ಸಜ್ಜು

saji cherian

ತಿರುವನಂತಪುರಂ: ರಾಜ್ಯದ ಆಳುವ ಪಕ್ಷದ ಸಚಿವರೊಬ್ಬರು ಸಂವಿಧಾನದ ಬಗ್ಗೆ ಅವಹೇಳನಕಾರಿ ಟೀಕೆ ಮಾಡಿ ವಿವಾದಕ್ಕೆ ಒಳಗಾಗಿದ್ದಾರೆ.

ಕೇರಳದ ಹಿರಿಯ ಸಿಪಿಐ(ಎಂ) ನಾಯಕ, ಮೀನುಗಾರಿಕೆ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಅವರು ಸಂವಿಧಾನದ ಬಗ್ಗೆ ನೀಡಿರುವ ಹೇಳಿಕೆ ಈಗ ರಾಜಕೀಯ ಬಿರುಗಾಳಿ ಎಬ್ಬಿಸಿದ್ದು, ಈಗಾಗಲೇ ಹಗರಣಗಳು ಮತ್ತು ಆರೋಪಗಳ ಸುಳಿಯಲ್ಲಿ ಸಿಲುಕಿರುವ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರಕ್ಕೆ ಇನ್ನಷ್ಟು ಸಂಕಷ್ಟಕ್ಕೆ ತಂದೊಡ್ಡಿದೆ.

ಪತ್ತನಂತಿಟ್ಟದಲ್ಲಿ ಸೋಮವಾರ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚೆರಿಯನ್, ʻʻದೇಶದಲ್ಲಿ ಸುಂದರವಾದ ಸಂವಿಧಾನವನ್ನು ಬರೆಯಲಾಗಿದೆ. ಸಾಧ್ಯವಾದಷ್ಟೂ ಸಂಖ್ಯೆಯ ಜನರನ್ನು ಲೂಟಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಈ ಸಂವಿಧಾನವನ್ನು ಬರೆಯಲಾಗಿದೆ. ಬ್ರಿಟಿಷರು ಅದನ್ನು ಸಿದ್ಧಪಡಿಸಿದರು, ಭಾರತೀಯರು ಬರೆದರು. ಕಳೆದ 75 ವರ್ಷಗಳಲ್ಲಿ ಲೂಟಿಯನ್ನು ಜಾರಿಗೊಳಿಸಲಾಗಿದೆ. ಇದು ದೇಶದಲ್ಲಿ ಗರಿಷ್ಠ ಸಂಖ್ಯೆಯ ಜನರ ಶೋಷಣೆಯನ್ನು ಖಾತ್ರಿಪಡಿಸುವ ಸಂವಿಧಾನವಾಗಿದೆʼʼ ಎಂದಿದ್ದರು.

ಸಂವಿಧಾನದ ಲೇಖಕರು ಅಲ್ಲಿ ಇಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತತೆಯಂತಹ ಕೆಲವು ಒಳ್ಳೆಯ ವಿಷಯಗಳನ್ನು ಸೇರಿಸಿದ್ದಾರೆ. ಆದರೆ ಸಂವಿಧಾನವು ಸಾಮಾನ್ಯ ಜನರನ್ನು ಶೋಷಿಸುವ ಸಾಧನವಾಗಿದೆ. ‘ಜಾತ್ಯತೀತತೆ’ ಮತ್ತು ‘ಪ್ರಜಾಪ್ರಭುತ್ವ’ವೆಂದರೆ ʻಕುಂಠಂʼ ಮತ್ತು ʻಕುಡಚಕ್ರನ್ʼ (ಇದು ಈಟಿ ಮತ್ತು ಛತ್ರಿ ಎಂಬರ್ಥದ ಗ್ರಾಮ್ಯ ಮಲಯಾಳಂ ಪದಗಳು) ಆಗಿದೆ ಎಂದಿದ್ದಾರೆ ಚೆರಿಯನ್.

ಚೆಂಗನ್ನೂರು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಚೆರಿಯನ್ ಅವರು ಕಳೆದ ವರ್ಷವೂ ಅನುಪಮಾ ಚಂದ್ರನ್ ಎಂಬಾಕೆಯ ನೈತಿಕತೆಯ ಬಗ್ಗೆ ಪ್ರಶ್ನೆ ಎತ್ತಿ ವಿವಾದ ಸೄ಼ಷ್ಟಿಸಿದ್ದರು. ಚೆರಿಯನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಬೀದಿಗಿಳಿಯುವುದಾಗಿ ಬೆದರಿಕೆ ಹಾಕಿವೆ. ರಾಜ್ಯಪಾಲರ ಕಚೇರಿ ಸಚಿವರ ಭಾಷಣದ ವಿವರ ಕೇಳಿದೆ.

ಇತ್ತೀಚಿಗೆ ವಯನಾಡ್‌ನಲ್ಲಿ ರಾಹುಲ್ ಗಾಂಧಿಯವರ ಕಚೇರಿಯನ್ನು ಧ್ವಂಸಗೊಳಿಸಿರುವುದು ಸೇರಿದಂತೆ ಹಲವಾರು ವಿಚಾರಗಳಲ್ಲಿ ಸಿಪಿಎಂ ವಿರುದ್ಧ ಸರಣಿ ಪ್ರತಿಭಟನೆಗಳನ್ನು ಪ್ರಾರಂಭಿಸುತ್ತಿರುವ ಕಾಂಗ್ರೆಸ್‌ಗೆ ಎಲ್‌ಡಿಎಫ್‌ ವಿರುದ್ಧ ಆಕ್ರೋಶಕ್ಕೆ ಇದು ಇನ್ನೊಂದು ಕಾರಣವನ್ನು ಒದಗಿಸಿದೆ.

ಇದನ್ನೂ ಓದಿ: ಬಿಹಾರ, ಕೇರಳ, ಪಂಜಾಬ್‌, ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರ ಎಂದ ಆರ್‌ಬಿಐ

Exit mobile version