Site icon Vistara News

Vikram Batra | 24 ವರ್ಷಕ್ಕೇ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವಿಕ್ರಮ್‌ ಬಾತ್ರಾ ನೆನಪಿಂದು ಕಾಡುತ್ತಿದೆ!

vikram batra captain

ಬಿ ಸೋಮಶೇಖರ್‌, ಬೆಂಗಳೂರು

“ಒಂದೋ ತಿರಂಗಾವನ್ನು ಹಾರಿಸಿ ಬರುತ್ತೇನೆ. ಇಲ್ಲವೇ ಅದೇ ತಿರಂಗಾ ಹೊದ್ದುಕೊಂಡು ಬರುತ್ತೇನೆ. ಏನಾದರೂ ಆಗಲಿ, ನಾನು ವಾಪಸ್‌ ಬಂದೇ ಬರುತ್ತೇನೆ”…

ಅದು ೧೯೯೯ರ ಬೇಸಿಗೆಯ ಸಮಯ. ಸೇನೆಯ ಕರ್ತವ್ಯದಿಂದ ಬಿಡುವು ಪಡೆದುಕೊಂಡು ಹೋಳಿ ಆಚರಿಸಲು, ತಂದೆ- ತಾಯಿ, ಮುದ್ದಿನ ಸಹೋದರನನ್ನು ನೋಡಲು, ನಲುಮೆಯ ಗೆಳತಿಯ ಜತೆಗೊಂದಿಷ್ಟು ಕಾಲ ಕಳೆಯಲು ವಿಕ್ರಮ್ ಬಾತ್ರಾ ತನ್ನೂರಾದ ಹಿಮಾಚಲ ಪ್ರದೇಶದ ಪಾಲಂಪುರಕ್ಕೆ ಆಗಮಿಸಿದ್ದರು. ಆಗ ಗೆಳೆಯರು, “ಪಾಕಿಸ್ತಾನದ ವಿರುದ್ಧ ಯುದ್ಧ ಆರಂಭವಾಗಿದೆ. ನಿನ್ನನ್ನು ಯಾವಾಗ ಬೇಕಾದರೂ ಸೇನೆ ವಾಪಸ್‌ ಕರೆಸಿಕೊಳ್ಳಬಹುದು” ಎಂದಾಗ ವಿಕ್ರಮ್ ಬಾತ್ರಾ ಈ ಮೇಲಿನಂತೆ ಹೇಳಿದ್ದರು.

ಅದು ಜುಲೈ ೨೬ರ “ವಿಜಯ ದಿವಸ”ವೇ ಬರಲಿ, ಜುಲೈ ೭ ಇರಲಿ ಅಥವಾ ಸೆಪ್ಟೆಂಬರ್‌ 9 ಇರಲಿ. ಆಗೆಲ್ಲ ಕ್ಯಾಪ್ಟನ್‌ ವಿಕ್ರಂ ಬಾತ್ರಾ ಎಂಬ ವೀರನ ನೆನಪಾಗುತ್ತದೆ. ಜುಲೈ ೨೬ ಬಂತೆಂದರೆ, ಕಾರ್ಗಿಲ್‌ ವಿಜಯ ದಿವಸವನ್ನು ನೆನೆಯುತ್ತ, ವಿಜಯಕ್ಕೆ ವಿಕ್ರಂ ಬಾತ್ರಾ ನೀಡಿದ ಕೊಡುಗೆ, ಮಾಡಿದ ತ್ಯಾಗವನ್ನು ನೆನೆಯುತ್ತೇವೆ. ಜುಲೈ ೭ ಬಂದರೆ, ಮತ್ತೂ ವಿಕ್ರಂ ಬಾತ್ರಾ ನೆನಪಾಗುತ್ತಾರೆ. ದೇಶಕ್ಕಾಗಿ ಹೋರಾಡುತ್ತಲೇ ಪ್ರಾಣ ತ್ಯಾಗ ಮಾಡಿದರಲ್ಲ, ಬದುಕಿದ್ದಿದ್ದರೆ ಅವರಿಗೆ ಇಂದು ಇಷ್ಟು ವರ್ಷ ತುಂಬುತಿತ್ತಲ್ಲ ಎಂದು ಮನಸ್ಸು ಹೊಯ್ದಾಡುತ್ತದೆ. ಅದೇ, ಇಂದು ಸೆಪ್ಟೆಂಬರ್‌ ೯ನೇ ತಾರೀಖು ಎಂಬುದು ಅರಿವಾದರೆ, ಮಗದೊಮ್ಮೆಯೂ ವಿಕ್ರಮ್‌ ಬಾತ್ರಾ ಅವರೇ ಸ್ಮೃತಿಪಟಲದಲ್ಲಿ ಬಂದು ಕೂತುಬಿಡುತ್ತಾರೆ. ಪಾಕಿಸ್ತಾನಿಯರ ಎದೆಯನ್ನೇ ನಡುಗಿಸಿ, ದೇಶವೇ ಎದೆಯುಬ್ಬಿಸುವಂತೆ ಮಾಡಿದ ಕಲಿಯ ಜನ್ಮದಿನ ಇಂದು ಎಂಬ ಹೆಮ್ಮೆ ಒಡಮೂಡುತ್ತದೆ. ಅಷ್ಟರಮಟ್ಟಿಗೆ, ಹುತಾತ್ಮರಾಗಿ ೨೩ ವರ್ಷವಾದರೂ ೨೪ ವರ್ಷಕ್ಕೇ ದೇಶಕ್ಕಾಗಿ ಮಡಿದ ಯೋಧನ ನೆನಪು ಪ್ರತಿ ಭಾರತೀಯರನ್ನೂ ಕಾಡುತ್ತಿದೆ.

ಯೋಧರು ಹಾಗೂ ಶಸ್ತ್ರಾಸ್ತ್ರಗಳ ಜತೆ ಬಾತ್ರಾ.

ಆಪರೇಷನ್‌ ಪಾಯಿಂಟ್‌ ೫೧೪೦

ಗೆಳೆಯರು ಹೇಳಿದ್ದು ನಿಜವಾಯಿತು. ೧೯೯೯ರ ಜೂನ್‌ ೧ರಂದು ಸೇನೆಗೆ ವಾಪಸಾಗಬೇಕು ಎಂದು ವಿಕ್ರಮ್‌ ಬಾತ್ರಾ ಅವರಿಗೆ ಕರೆ ಬಂತು. ಪಾಕಿಸ್ತಾನದ ಸೈನಿಕರು ಲಡಾಕ್‌ನ ದ್ರಾಸ್‌ನಲ್ಲಿರುವ ೫೧೪೦ ಶಿಖರವನ್ನು (ಈಗ ಇದಕ್ಕೆ ಗನ್‌ ಹಿಲ್‌ ಎಂದು ಹೆಸರಿಡಲಾಗಿದೆ) ವಶಪಡಿಸಿಕೊಂಡಿದ್ದರು. ಪಾಯಿಂಟ್‌ ೫೧೪೦ಅನ್ನು ನಾವು ವಾಪಸ್‌ ಪಡೆಯದಿದ್ದರೆ ವೈರಿಪಡೆಗಳು ಬಲಿಷ್ಠರಾಗುತ್ತಾರೆ. ಹಾಗಾಗಿ, ಇದನ್ನು ಮತ್ತೆ ವಶಪಡಿಸಿಕೊಳ್ಳುವ ಉಸ್ತುವಾರಿಯನ್ನು ೨೪ ವರ್ಷದ ವಿಕ್ರಮ್‌ ಬಾತ್ರಾ ಅವರಿಗೆ ನೀಡಲಾಯಿತು. ವೈರಿಗಳು ಶಿಖರದ ಮೇಲಿರುವುದರಿಂದ ಭಾರತೀಯ ಸೈನಿಕರು ಶಿಖರ ಹತ್ತಿ ವೈರಿಗಳ ವಿರುದ್ಧ ಕಾದಾಡಬೇಕಿತ್ತು. ಆದರೇನಂತೆ, ವಿಕ್ರಮ್‌ ಬಾತ್ರಾ ಅವರು ೧೩ ಜಮ್ಮು-ಕಾಶ್ಮೀರ ರೈಫಲ್ಸ್‌ ತಂಡವನ್ನು ಕರೆದುಕೊಂಡು ಶಿಖರ ಹತ್ತಲು ಆರಂಭಿಸಿದರು. ಶಿಖರದ ಮೇಲೆ ಭಾರತ ಹಾಗೂ ಪಾಕಿಸ್ತಾನದ ಯೋಧರ ಮಧ್ಯೆ ದೊಡ್ಡ ಕಾಳಗವೇ ನಡೆಯಿತು. ಮುಂದೆ ನಿಂತು ವಿಕ್ರಮ್‌ ಬಾತ್ರಾ ಯೋಧರನ್ನು ಮುನ್ನಡೆಸಿದರು. ಈ ಗುದ್ದಾಟದಲ್ಲಿ ಬಾತ್ರಾ ಒಬ್ಬರೇ ಪಾಕಿಸ್ತಾನದ ನಾಲ್ವರು ಸೈನಿಕರನ್ನು ಹೊಡೆದು ಸಾಯಿಸಿದರು. ಬಾತ್ರಾ ನೇತೃತ್ವದಲ್ಲಿ ಅಪ್ರತಿಮ ಶೌರ್ಯ ಮೆರೆದ ಯೋಧರು ಜೂನ್‌ ೨೦ರಂದು ಪಾಯಿಂಟ್‌ ೫೧೪೦ಅನ್ನು ವಶಪಡಿಸಿಕೊಂಡರು. ಆಗ ವಿಕ್ರಮ್‌ ಬಾತ್ರಾ ನ್ಯಾಷನಲ್‌ ಹೀರೊ ಆಗಿ ಹೊರಹೊಮ್ಮಿದರು. ಇವರ ಶೌರ್ಯದ ಬಗ್ಗೆ ಪತ್ರಿಕೆಗಳು ಪುಟಗಟ್ಟಲೆ ಬರೆದವು. ಸೇನಾ ನೆಲೆಗೇ ಹೋಗಿ ದೃಶ್ಯ ಮಾಧ್ಯಮಗಳು ಸಂದರ್ಶನ ಮಾಡಿದವು.

ಯೇ ದಿಲ್‌ ಮಾಂಗೆ ಮೋರ್‌

ಪಾಯಿಂಟ್‌ ೫೧೪೦ಅನ್ನು ವಶಪಡಿಸಿಕೊಂಡ ಬಳಿಕ ವಿಕ್ರಮ್‌ ಬಾತ್ರಾ ಅವರು ತಮ್ಮ ತಂದೆ ಜಿ.ಎಲ್.ಬಾತ್ರಾ ಅವರಿಗೆ ಕರೆ ಮಾಡಿ ನಾವು ಪಾಯಿಂಟ್‌ ೫೧೪೦ ನಮ್ಮ ವಶವಾಗಿದೆ ಎಂದು ಖುಷಿಯಿಂದ ಹೇಳಿದರು. ಅಷ್ಟೇ ಅಲ್ಲ, ಸೇನಾ ನೆಲೆಯಲ್ಲಿ ನಿಂತು, ತಮ್ಮ ಕಮಾಂಡರ್‌ಗೆ “ಯೇ ದಿಲ್‌ ಮಾಂಗೆ ಮೋರ್”‌ ಎಂದು ಹೇಳಿದ್ದರು. ಅಂದರೆ ಇದೊಂದೇ ಸಾಕಾಗುವುದಿಲ್ಲ. ಇನ್ನಷ್ಟು ಶಿಖರಗಳನ್ನು ಗೆಲ್ಲಬೇಕು ನಾವು ಎಂಬ ಕಾತರ ತೋರಿದ್ದರು. ʻಯೇ ದಿಲ್‌ ಮಾಂಗೆ ಮೋರ್‌ʼ ಎಂಬ ಘೋಷಣೆಯೂ ದೇಶದ ಮನೆಮಾತಾಯಿತು. ವಿಕ್ರಮ್‌ ಬಾತ್ರಾ ಶೇರ್‌ ಷಾ ಎಂದೇ ಖ್ಯಾತರಾದರು. ಪಾಕಿಸ್ತಾನದ ಸೈನಿಕರಿಗೂ ಶೇರ್‌ ಷಾ ಎಂದರೆ ಯಾರು ಎಂಬುದು ಗೊತ್ತಾಗಿತ್ತು. ಬಾತ್ರಾ ಮನದಾಸೆಯಂತೆಯೇ ಮುಂದೆ ಅವರಿಗೆ ದೊಡ್ಡ ಜವಾಬ್ದಾರಿಯೇ ಕಾದಿತ್ತು. ಹಾಗೆಯೇ, ವಿಧಿಯ ಆಟವೂ!

ಪಾಯಿಂಟ್‌ 4875 ಸಾಹಸಗಾಥೆ

ಭಾರತದ ಯೋಧರು ೫೧೪೦ ಪಾಯಿಂಟ್‌ ವಶಪಡಿಸಿಕೊಂಡ ಮಾತ್ರಕ್ಕೆ ಶತ್ರುಪಡೆಯು ಸಂಪೂರ್ಣವಾಗಿ ನಿರ್ನಾಮವಾಗಿರಲಿಲ್ಲ. ಪಾಯಿಂಟ್‌ ೫೧೪೦ ನಮ್ಮ ವಶವಾಯಿತು ಎಂದು ಸಂಭ್ರಮಿಸುವಷ್ಟರಲ್ಲಿಯೇ ಪಾಕ್‌ ಯೋಧರು ಪಾಯಿಂಟ್‌ ೪೮೭೫ ಎಂಬ ೧೮ ಸಾವಿರ ಅಡಿ ಎತ್ತರದ ಶಿಖರದ ೧೬ ಸಾವಿರ ಅಡಿ ಹತ್ತಿ ಕುಳಿತಿದಿದ್ದರು. ಒಂದು ಚಾರ್ಲಿ ಕಂಪನಿಗೆ ಕ್ಯಾಪ್ಟನ್‌ ಅನೂಜ್‌ ನಯ್ಯರ್‌ ಹಾಗೂ ಮತ್ತೊಂದು ಕಂಪನಿಗೆ ವಿಕ್ರಮ್‌ ಬಾತ್ರಾ ಅವರನ್ನು ನಾಯಕನನ್ನಾಗಿ ಮಾಡಿ, ಪಾಯಿಂಟ್‌ ೪೮೭೫ ವಶಪಡಿಸಿಕೊಳ್ಳಲು ಕಳುಹಿಸಲಾಯಿತು. ಆದರೆ, ಈ ಬಾರಿ ಪಾಕಿಸ್ತಾನದ ಯೋಧರು ಮುನ್ನಡೆ ಸಾಧಿಸಿದರು. ಕ್ಯಾಪ್ಟನ್‌ ನಯ್ಯರ್‌ ಅವರೂ ಸೇರಿ ಇಡೀ ತಂಡದ ಯೋಧರು ಹುತಾತ್ಮರಾದರು. ಉಳಿದಿದ್ದು, ವಿಕ್ರಮ್‌ ಬಾತ್ರಾ ಯೋಧರ ತಂಡವೊಂದೇ. ಇದರಿಂದ ಕಿಂಚಿತ್ತೂ ಎದೆಗುಂದದ ಬಾತ್ರಾ, ವೈರಿಗಳ ಜತೆ ಇನ್ನಿಲ್ಲದಂತೆ ಕಾದಾಡಿದರು. ಬಡಿದಾಟದಲ್ಲಿ ಒಬ್ಬರೇ ಪಾಕಿಸ್ತಾನದ ಐವರನ್ನು ಹತ್ಯೆಗೈದರು. ಆದರೆ, ಗಾಯಗೊಂಡ ತಮ್ಮ ತಂಡದ ಯೋಧರನ್ನು ಉಳಿಸಲು ಹೋದಾಗ ಶತ್ರುವಿನ ಗುಂಡು ಬಾತ್ರಾ ದೇಹ ಹೊಕ್ಕಿತು. ವಿಕ್ರಮ್‌ ಬಾತ್ರಾ ಎಂಬ ಯೋಧ ರಣರಂಗ ಭೂಮಿಯಲ್ಲಿ ೧೯೯೯ರ ಜುಲೈ ೭ರಂದು ಹುತಾತ್ಮನಾಗುವ ಮೊದಲು ವೈರಿಗಳ ಮೇಲೆ ಭಾರಿ ಪ್ರಭಾವ ಬೀರಿದ್ದರು. ಅವರನ್ನು ಹಿಮ್ಮೆಟ್ಟಿಸಿದರು. ಹಾಗಾಗಿ, ವ್ಯೂಹಾತ್ಮಕವಾಗಿ ಪ್ರಮುಖವಾಗಿದ್ದ ಪಾಯಿಂಟ್‌ ೪೮೭೫ ನಮ್ಮ ವಶವಾಯಿತು. ೧೮ ಸಾವಿರ ಅಡಿ ಎತ್ತರದಲ್ಲಿ ನಡೆದ ಒಂದಿಡೀ ಕಾಳಗದಲ್ಲಿ ಪಾಕಿಸ್ತಾನದ ೪೭ ಯೋಧರು ಹತರಾಗಿದ್ದರೆ, ಬಾತ್ರಾ, ನಯ್ಯರ್‌ ಸೇರಿ ಭಾರತದ ೧೧ ಯೋಧರು ಹುತಾತ್ಮರಾದರು. ಇದು ಭಾರತವು ಕಾರ್ಗಿಲ್‌ ಯುದ್ಧ ಗೆಲ್ಲಲು ನೆರವಾಯಿತು. ತನ್ನೂರಿನಲ್ಲಿ ಕೊಟ್ಟ ಮಾತಿನಂತೆ ವಿಕ್ರಮ್‌ ಬಾತ್ರಾ ತಿರಂಗಾದೊಂದಿಗೆ ವಾಪಸಾಗಿದ್ದರು. ಆದರೆ, ಅವರನ್ನು ತಿರಂಗಾದಲ್ಲಿ ಸುತ್ತಲಾಗಿತ್ತು ಎಂಬುದೇ ದುರ್ದೈವವಾಗಿತ್ತು. ಅಪ್ರತಿಮ ಶೌರ್ಯ ಮೆರೆದ ವಿಕ್ರಮ್‌ ಬಾತ್ರಾ ಅವರಿಗೆ ಸೇನೆಯ ಅತ್ಯುನ್ನತ “ಪರಮ ವೀರ ಚಕ್ರ” ಹಾಗೂ ಅನೂಜ್‌ ನಯ್ಯರ್‌ ಅವರಿಗೆ “ಮಹಾ ವೀರ ಚಕ್ರ” ನೀಡಿ ಗೌರವಿಸಲಾಯಿತು.

ಬಾತ್ರಾ ಅಮರ ಪ್ರೇಮಕತೆ

ಡಿಂಪಲ್‌ ಚೀಮಾ.

ವಿಕ್ರಮ್‌ ಬಾತ್ರಾ ಅವರು ದೇಶಕ್ಕೆ ನೀಡಿದ ಕೊಡುಗೆ, ಮಾಡಿದ ಮಹೋನ್ನತ ತ್ಯಾಗ ಎಷ್ಟು ಅಮರವಾಗಿದೆಯೋ, ಅವರ ಪ್ರೇಮಕತೆಯೂ ಅಷ್ಟೇ ಪ್ರಾಂಜಲವಾಗಿದೆ. ಪಂಜಾಬ್‌ ವಿಶ್ವವಿದ್ಯಾಲಯದಲ್ಲಿ ಬಾತ್ರಾ ಪದವಿ ಅಧ್ಯಯನ ಮಾಡುವಾಗ ಡಿಂಪಲ್‌ ಚೀಮಾ ಎಂಬ ಯುವತಿಯ ಪರಿಚಯವಾಗುತ್ತದೆ. ಓದು, ಬರಹ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ನಿಸ್ಸೀಮರಾಗಿದ್ದ ಬಾತ್ರಾ ಹಾಗೂ ಡಿಂಪಲ್‌ ಪರಿಚಯವು ಪ್ರೇಮವಾಗಿ ಪರಿವರ್ತನೆಯಾಗುತ್ತದೆ. ಅದೊಂದು ದಿನ, ಮಾನ್ಸಾ ದೇವಿ ದೇವಾಲಯದಲ್ಲಿ ಡಿಂಪಲ್‌ ದುಪಟ್ಟಾ ಹಿಡಿದ ಬಾತ್ರಾ, ಇದೇ ನಮ್ಮ ಮದುವೆ ಎಂದು ಹೇಳಿದ್ದರು. ವಿಕ್ರಮ್‌ ಬಾತ್ರಾ ಹುತಾತ್ಮರಾಗುವ ಆರು ದಿನಗಳ ಮೊದಲು “ನಮ್ಮ ಮದುವೆಯಲ್ಲಿ ವಿಕ್ರಮ್‌ ಬಾತ್ರಾ ಕುಣಿಯಬೇಕು” ಎಂದು ಡಿಂಪಲ್‌ ಹೇಳಿದ್ದರು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಹಾಗಂತ, ವಿಕ್ರಮ್‌ ಬಾತ್ರಾ ಅಗಲಿದರು ಎಂದು ಡಿಂಪಲ್‌ ಚೀಮಾ ಬೇರೊಬ್ಬರನ್ನು ಮದುವೆಯಾಗಲಿಲ್ಲ. ಈಗಲೂ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಿಂಪಲ್‌ ಚೀಮಾ, ಬಾತ್ರಾ ಜತೆ ಕಳೆದ ನೆನಪುಗಳಲ್ಲೇ ಜೀವಿಸುತ್ತಿದ್ದಾರೆ. ದೇಶಕ್ಕಾಗಿ ಬಾತ್ರ ಜೀವವನ್ನೇ ತ್ಯಾಗ ಮಾಡಿದರೆ, ಆತನ ಮೇಲಿನ ಪ್ರೀತಿಗಾಗಿ ಡಿಂಪಲ್‌ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.

ಹಾಂಕಾಂಗ್‌ ಮೂಲದ ಮರ್ಚಂಟ್‌ ನೇವಿ ಮೆಚ್ಚುಗೆ

ಹಿಮಾಚಲ ಪ್ರದೇಶದ ಪಾಲಂಪುರದಲ್ಲಿ ೧೯೭೪, ಸೆಪ್ಟೆಂಬರ್‌ ೯ರಂದು ಜನಿಸಿದ ವಿಕ್ರಮ್‌ ಬಾತ್ರಾ ಎನ್‌ಸಿಸಿ ಸೇರಿ, ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದರು. ಇದೇ ಕಾರಣಕ್ಕಾಗಿ ವಿಕ್ರಮ್‌ ಬಾತ್ರಾ ಹಾಂಕಾಂಗ್ ಮೂಲದ ಕಂಪನಿ ಮರ್ಚಂಟ್‌ ನೇವಿಗೆ 1995ರಲ್ಲಿ ಆಯ್ಕೆಯಾಗಿದ್ದರು. ಕೈತುಂಬ ಸಂಬಳ, ಒಳ್ಳೆಯ ಕೆಲಸ ಅವರನ್ನು ಕೈಬೀಸಿ ಕರೆಯುತ್ತಿದೆ. ಅದಕ್ಕಾಗಿ ಸಮವಸ್ತ್ರವನ್ನೂ ಹೊಲಿಸಿಕೊಂಡು ಹೊರಡಲು ಸಿದ್ಧನಾಗಿದ್ದರು. ಆದರೆ, ಆತನ ಮನಸ್ಸು ಕೊನೇ ಕ್ಷಣದಲ್ಲಿ ಬದಲಾಯಿತು. ನಾನು ಭಾರತೀಯ ಸೇನೆ ಸೇರುತ್ತೇನೆ ಎಂದು ತೀರ್ಮಾನಿಸಿದ ವಿಕ್ರಮ್‌ ಬಾತ್ರಾ 1996ರಲ್ಲಿ ಸೇನೆ ಸೇರಿದರು. ಯಾವ ಹಾಂಕಾಂಗ್‌ ಮೂಲದ ಕಂಪನಿಯ ಉದ್ಯೋಗವನ್ನು ನಿರಾಕರಿಸಿದ್ದರಲ್ಲ, ಅದೇ ಕಂಪನಿಯು ಒಂದು ದಶಕದ ಬಳಿಕ ವಿಕ್ರಮ್‌ ಬಾತ್ರಾ ಅವರಿಗೆ ಗೌರವ ಸಲ್ಲಿಸಿದೆ. “ಸಾಮಾನ್ಯ ವ್ಯಕ್ತಿಯೊಬ್ಬ ಇಡೀ ಭಾರತೀಯ ಸೈನ್ಯವನ್ನೇ ಮೆಚ್ಚುವಂತೆ ಮಾಡುತ್ತಾರೆ ಎಂದರೆ ಹೆಮ್ಮೆ ಎನಿಸುತ್ತದೆ. ನಾವು ಒಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದರೂ ಆಗ ಭಾರತೀಯರೊಬ್ಬರು ಸ್ಫೂರ್ತಿಯಾಗುತ್ತಾರೆ” ಎಂದು ಕಂಪನಿ ಶ್ಲಾಘಿಸಿದೆ.

ಸಹೋದರನ ಜತೆ ವಿಕ್ರಮ್.

“ನನ್ನ ಒಬ್ಬ ಮಗ ಅಗಲುತ್ತಾನೆ ಎಂದೇ ದೇವರು ಅವಳಿ ಗಂಡು ಮಕ್ಕಳನ್ನು ನೀಡಿದನೇನೋ” ಎಂದು ವಿಕ್ರಮ್‌ ಬಾತ್ರಾ ತಾಯಿ ಹೇಳುತ್ತಾರೆ. “ನನ್ನ ಮಗ ಮಡಿದ ೪೮೭೫ ಶಿಖರಕ್ಕೆ ಹೋದರೆ ತೀರ್ಥಕ್ಷೇತ್ರಕ್ಕೆ ಹೋದ ಅನುಭವವಾಗುತ್ತದೆ” ಎಂದು ಅವರ ತಂದೆ ಹೆಮ್ಮೆಯಿಂದ ಹೇಳಿದ್ದಾರೆ. ವಿಕ್ರಮ್‌ ಬಾತ್ರಾ ಸೈನ್ಯದಲ್ಲಿದ್ದ ಕಾರಣ ನಾಲ್ಕು ವರ್ಷದ ಪ್ರೇಮ ಪಯಣದಲ್ಲಿ ಆತನ ಜತೆ ಕಳೆದಿದ್ದು ೪೦ ದಿನವಾದರೂ ಡಿಂಪಲ್‌ ಚೀಮಾ ಇಂದಿಗೂ ಅವರ ನೆನಪಿನಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಅವರ ಕುಟುಂಬಸ್ಥರಷ್ಟೇ ಅಲ್ಲ, ನಮ್ಮ‌ ಮನದಲ್ಲೂ ಬಾತ್ರಾ ಜಾಗ ಪಡೆದಿದ್ದಾರೆ. ಅಷ್ಟಕ್ಕೂ, ವಿಕ್ರಮ್‌ ಬಾತ್ರಾ ಅವರ ಜೀವನ ಹಾಗೂ ಸಾಧನೆಯನ್ನು ಕಣ್ತುಂಬಿಕೊಳ್ಳಬೇಕು ಎಂದರೆ ಸಿದ್ಧಾರ್ಥ್‌ ಮಲ್ಹೋತ್ರಾ ಅಭಿನಯದ “ಶೇರ್‌ ಷಾ” ಸಿನಿಮಾ ನೋಡಿ.

Exit mobile version