ನವದೆಹಲಿ: ಬಾಡಿಕೆ ಹಣ ಕೊಟ್ಟಿಲ್ಲ (Non Payment of Rent) ಎಂದು ಮಾಲೀಕ (Landlord) ಅಂಚೆ ಕಚೇರಿಗೆ (Post Office) ಬೀಗ ಜಡಿದ ವಿಚಿತ್ರ ಘಟನೆ ಬಿಹಾರದ ಸರನ್ (Saran District) ಜಿಲ್ಲೆಯಲ್ಲಿ ನಡೆದಿದೆ. ಆರು ತಿಂಗಳಿಂದ ಬಾಕಿ ಉಳಿದಿರುವ ಬಾಡಿಗೆ ಮೊತ್ತವನ್ನು ಪಾವತಿಸುವಂತೆ ಮನೆ ಮಾಲೀಕ ಅನೇಕ ಬಾರಿ ವಿನಂತಿಸಿಕೊಂಡಿದ್ದ. ಆದರೂ, ಅಧಿಕಾರಿಗಳು ಹಣ ನೀಡಲು ವಿಫಲರಾದ್ದರಿಂದ, ಹತಾಶಗೊಂಡ ಮನೆ ಮಾಲೀಕ ಕಚೇರಿಗೆ ಬೀಗ ಹಾಕಿದ್ದ ಎಂದು ಅಂಚೆ ಕಚೇರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಮನೆ ಮಾಲೀಕ ಲಕ್ಷ್ಮೀಕಾಂತ್ ಪ್ರಸಾದ್, ಸ್ಥಳೀಯ ಅಂಚೆ ಕಚೇರಿಯು ಆರು ತಿಂಗಳಿನಿಂದ ಬಾಡಿಗೆಯನ್ನು ಪಾವತಿಸಿಲ್ಲ, ಇದರಿಂದಾಗಿ ಹತಾಶೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾನೆ. 1985ರಿಂದಲೂ ಈ ಅಂಚೆ ಕಚೇರಿ ಖಾಸಗಿ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಈ ಸುದ್ದಿಯನ್ನೂ ಓದಿ: post office interest rate | ಪೋಸ್ಟ್ ಆಫೀಸ್‌ನಲ್ಲಿ ಸಿಗುವ ಬಡ್ಡಿ ಎಷ್ಟು?
ಮಾಸಿಕ ಬಾಡಿಗೆ 18,325 ರೂ.ನಂತೆ ಆರು ತಿಂಗಳ ಬಾಕಿಯನ್ನು ನೀಡುವಂತೆ ಮಾಲೀಕ ಹಿರಿಯ ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಅನೇಕ ಬಾರಿ ಪ್ರಯತ್ನಿಸಿದ್ದ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ, ಅಂಚೆ ಕಚೇರಿಗೆ ಬೀಗ ಹಾಕುವ ಮೂಲಕವೇ ಇಡೀ ಪರಿಸ್ಥಿತಿ ಉಲ್ಬಣಗೊಂಡಿತು ಎಂದು ಹೇಳಬಹುದು. ಮನೆ ಮಾಲೀಕನ ಈ ಅನಿರೀಕ್ಷಿತ ನಡೆಯು, ಅಂಚೆ ಕಚೇರಿಯ ನೌಕರರು ಮತ್ತು ಗ್ರಾಹಕರಲ್ಲಿ ಗೊಂದಲಕ್ಕೆ ಕಾರಣವಾಯಿತು.
ಕೊನೆಗೆ ಹಿರಿಯ ಅಧಿಕಾರಿಗಳಿಗೆ ವಿಷಯ ಗೊತ್ತಾಗಿ, ಅವರು ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವುದಾಗಿ ಮನೆ ಮಾಲೀಕನಿಗೆ ತಿಳಿಸಿದ್ದಾರೆ. ವಾರದೊಳಗೇ ಬಾಕಿ ಇರುವ ಬಾಡಿಗೆಯ ಪಾವತಿಯನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ, ಮನೆ ಮಾಲೀಕ ಬೀಗವನ್ನು ತೆರೆದಿದ್ದಾನೆ. ಈ ಅಂಚೆ ಕಚೇರಿಗೆ ಕನಿಷ್ಠ ಒಂದೂವರೆ ಗಂಟೆಗಳಷ್ಟು ಕಾಲ ಬೀಗ ಹಾಕಲಾಗಿತ್ತು.