ಹೊಸದಿಲ್ಲಿ: ರಾಷ್ಟ್ರವು ಶುಕ್ರವಾರ 75ನೇ ಗಣರಾಜ್ಯೋತ್ಸವವನ್ನು (Republic Day 2024) ಆಚರಿಸಿಕೊಳ್ಳುತ್ತಿದೆ. 1950ರ ಜನವರಿ 26ರಂದು ಭಾರತದ ಸಂವಿಧಾನ (Constitution) ಜಾರಿಗೆ ಬಂದು ನಮ್ಮ ದೇಶ ಗಣರಾಜ್ಯವಾದ ನೆನಪಿನಲ್ಲಿ ಈ ದಿನ. ಪ್ರತಿ ವರ್ಷ ಗಣರಾಜ್ಯೋತ್ಸವದಂದು, ರಾಷ್ಟ್ರದ ಮುಖ್ಯಸ್ಥರಾಗಿರುವ ರಾಷ್ಟ್ರಪತಿಗಳು (President) ತ್ರಿವರ್ಣ ಧ್ವಜವನ್ನು (Tricolor) ʻಅರಳಿಸುತ್ತಾರೆ’ (Flag Unfurling). ಆದರೆ ಸ್ವಾತಂತ್ರ್ಯ ದಿನದಂದು (Independence Day) ಪ್ರಧಾನ ಮಂತ್ರಿಗಳು ರಾಷ್ಟ್ರಧ್ವಜವನ್ನು ʻಆರೋಹಿಸುತ್ತಾರೆ’ (Flag Hoisting).
ಎರಡೂ ಪದಗಳನ್ನು ಸಾಮಾನ್ಯವಾಗಿ ಉಭಯ ಸಂದರ್ಭಗಳಲ್ಲಿಯೂ ಹೆಚ್ಚಿನ ಭೇದವಿಲ್ಲದೆ ಬಳಸಲಾಗುತ್ತದೆ. ಆದರೆ ಇವುಗಳ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಬಲ್ಲಿರಾ?
ಎರಡೂ ಸಮಾರಂಭಗಳಲ್ಲಿ ತ್ರಿವರ್ಣ ಧ್ವಜವನ್ನು ಹೇಗೆ ಇರಿಸಲಾಗುತ್ತದೆ ಎಂಬುದರಲ್ಲಿ ವ್ಯತ್ಯಾಸವಿದೆ. ಜನವರಿ 26ರಂದು, ಧ್ವಜವನ್ನು ಮಡಚಿ ಅಥವಾ ಸುತ್ತಿ ಕಂಬದ ಮೇಲ್ಭಾಗದಲ್ಲಿ ಜೋಡಿಸಲಾಗುತ್ತದೆ. ಇದನ್ನು ದಾರ ಎಳೆದಾಗ ಬಿಡಿಸಿಕೊಳ್ಳುವಂತೆ ಕಟ್ಟಲಾಗಿರುತ್ತದೆ. ಇದನ್ನು ರಾಷ್ಟ್ರಪತಿಗಳು ದಾರ ಎಳೆದು, ಅನಾವರಣಗೊಳ್ಳುವಂತೆ ಮಾಡುತ್ತಾರೆ. ಇದು ಧ್ವಜ ಅರಳಿಸುವಿಕೆ. ಮತ್ತೊಂದೆಡೆ, ಆಗಸ್ಟ್ 15ರಂದು, ಧ್ವಜಸ್ತಂಭದ ಕೆಳಭಾಗದಲ್ಲಿ ಇರಿಸಲಾದ ಧ್ವಜವನ್ನು ಪ್ರಧಾನ ಮಂತ್ರಿಯವರು ಕೆಳಗಿನಿಂದ ಮೇಲಕ್ಕೆ ಏರಿಸುತ್ತಾರೆ. ಅದು ಧ್ವಜಾರೋಹಣ.
ಎರಡೂ ಆಚರಣೆಗಳಿಗೂ ತಾತ್ವಿಕವಾಗಿಯೂ ವ್ಯತ್ಯಾಸವಿದೆ. ʼಧ್ವಜ ಅರಳಿಸುವಿಕೆʼ ಎಂಬುದು ಈಗಾಗಲೇ ಇರುವ, ಸಂವಿಧಾನದಲ್ಲಿ ನಮೂದಿಸಲಾದ ತತ್ವಗಳಿಗೆ ನಮ್ಮ ಬದ್ಧತೆಯನ್ನು ನವೀಕರಿಸುವ ಸಾಂಕೇತಿಕ ಸೂಚಕ. ಇದು ಭಾರತವು ಬ್ರಿಟಿಷ್ ವಸಾಹತುಶಾಹಿಯಿಂದ ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಬದಲಾಗುತ್ತಿರುವುದನ್ನು ಎತ್ತಿ ತೋರಿಸುತ್ತದೆ.
ಸ್ವಾತಂತ್ರ್ಯ ದಿನದ ‘ಧ್ವಜಾರೋಹಣʼವು ಹೊಸ ರಾಷ್ಟ್ರದ ಉದಯವನ್ನು ಸಂಕೇತಿಸುತ್ತದೆ. ದೇಶಭಕ್ತಿ, ಮತ್ತು ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದುದನ್ನು ಸೂಚಿಸುತ್ತದೆ. ರಾಷ್ಟ್ರಗೀತೆಯನ್ನು ನುಡಿಸುವಾಗ ಮಿಲಿಟರಿ ಅಥವಾ ನಾಗರಿಕ ಗೌರವ ಸಿಬ್ಬಂದಿ ಧ್ವಜಾರೋಹಣ ಮಾಡುವ ವಿಧ್ಯುಕ್ತ ಕಾರ್ಯಕ್ರಮವನ್ನು ಇದು ಒಳಗೊಂಡಿದೆ.
ಇದನ್ನೂ ಓದಿ: ಭಾರತದ 30 ಸಾವಿರ ವಿದ್ಯಾರ್ಥಿಗಳಿಗೆ ಫ್ರಾನ್ಸ್ ವೀಸಾ; ಮ್ಯಾಕ್ರನ್ ಗಣರಾಜ್ಯೋತ್ಸವ ಗಿಫ್ಟ್