ಭೋಪಾಲ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಮಧ್ಯಪ್ರದೇಶದಲ್ಲಿ ಬಿಜೆಪಿ (Madhya pradesh) ಮಹಿಳೆಯರಿಗೆ ವಿಶೇಷ ಕೊಡುಗೆ ನೀಡಿದೆ. ಅರಣ್ಯ ಇಲಾಖೆಯನ್ನು ಹೊರತುಪಡಿಸಿ ಮಹಿಳೆಯರಿಗೆ ಎಲ್ಲ ಸರ್ಕಾರಿ ಇಲಾಖೆಗಳ ನೇಮಕಾತಿಯಲ್ಲಿ ಶೇ.35ರಷ್ಟು ಮೀಸಲಾತಿ (Reservation for Women) ಕಲ್ಪಿಸಿ ಅಲ್ಲಿನ ಸರ್ಕಾರ (bjp government) ಬುಧವಾರ ಅಧಿಸೂಚನೆ ಹೊರಡಿಸಿದೆ.
ಸರ್ಕಾರವು ಮಧ್ಯಪ್ರದೇಶದ ನಾಗರಿಕ ಸೇವೆಗಳ (ಮಹಿಳೆಯರ ನೇಮಕಾತಿಗಾಗಿ ವಿಶೇಷ ನಿಬಂಧನೆ) ನಿಯಮಗಳು- 1997ಕ್ಕೆ ತಿದ್ದುಪಡಿ ಮಾಡಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (MP CM Shivraj Singh Chouhan) ಬುರ್ಹಾನ್‌ಪುರ ಜಿಲ್ಲೆಯಲ್ಲಿ ಲಾಡ್ಲಿ ಬೆಹ್ನಾ ಯೋಜನೆಯ ಹಣ ಬಿಡುಗಡೆ ಮಾಡುವ ಕಾರ್ಯಕ್ರಮ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಂದರ್ಭದಲ್ಲಿ ಇದನ್ನು ಪ್ರಕಟಿಸಿದರು.
“ಯಾವುದೇ ಸೇವಾ ನಿಯಮಗಳಲ್ಲಿ ಏನೇ ಇದ್ದರೂ, ನೇರ ನೇಮಕಾತಿಯ ಹಂತದಲ್ಲಿ ಮಹಿಳೆಯರಿಗಾಗಿ ರಾಜ್ಯದ (ಅರಣ್ಯ ಇಲಾಖೆ ಹೊರತುಪಡಿಸಿ) ಸೇವೆಯಲ್ಲಿನ ಎಲ್ಲಾ ಹುದ್ದೆಗಳಲ್ಲಿ 35 ಪ್ರತಿಶತವನ್ನು ಕಾಯ್ದಿರಿಸಬೇಕು” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇತ್ತೀಚೆಗೆ ಪೊಲೀಸ್ ಮತ್ತು ಇತರ ಸರ್ಕಾರಿ ಉದ್ಯೋಗಗಳಲ್ಲಿ ಶೇ 35ರಷ್ಟು ಖಾಲಿ ಹುದ್ದೆಗಳನ್ನು ಮಹಿಳೆಯರಿಂದ ಭರ್ತಿ ಮಾಡಲಾಗುವುದು ಎಂದು ಘೋಷಿಸಿದ್ದರು. ಶೇ.50ರಷ್ಟು ಬೋಧಕ ಹುದ್ದೆಗಳನ್ನು ಸರಕಾರ ಮಹಿಳೆಯರಿಗೆ ಮೀಸಲಿಡಲಿದೆ ಎಂದರು.
ಮಹಿಳೆಯರಿಗಾಗಿ ಬಿಜೆಪಿ ಸರ್ಕಾರದ ಪ್ರಮುಖ ಕಲ್ಯಾಣ ಯೋಜನೆಯಾದ “ಲಾಡ್ಲಿ ಬಹನಾ ಯೋಜನೆ” ಅಡಿಯಲ್ಲಿ ಫಲಾನುಭವಿಗಳಿಗೆ ಹಣಕಾಸಿನ ನೆರವು ವರ್ಗಾವಣೆಯನ್ನು ಅಕ್ಟೋಬರ್ ತಿಂಗಳಿಗೂ ವಿಸ್ತರಿಸುವುದಾಗಿ ಚೌಹಾಣ್ ಘೋಷಿಸಿದ್ದಾರೆ. ಯೋಜನೆಯಡಿ ರಾಜ್ಯ ಸರ್ಕಾರವು ಪ್ರತಿ ಫಲಾನುಭವಿಗೆ ತಿಂಗಳಿಗೆ ₹ 1,250 ನೀಡುತ್ತದೆ.
ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ಮಹಿಳಾ ಮತದಾರರು ನಿರ್ಣಾಯಕವಾಗಿ ಹೊರಹೊಮ್ಮುತ್ತಿದ್ದಾರೆ. ಈ ನಡೆ ಬಿಜೆಪಿ ಸರ್ಕಾರದ ಪ್ರಮುಖ ಪೂರ್ವಭಾವಿ ತಂತ್ರಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: Women’s Reservation Bill: ಮಹಿಳಾ ಮೀಸಲಿಗೆ ರಾಷ್ಟ್ರಪತಿ ಅಂಕಿತ! ಗೆಜೆಟ್ ಅಧಿಸೂಚನೆ ಹೊರಡಿಸಿದ ಸರ್ಕಾರ