ಬಿಹಾರದ ರೆಸ್ಟೋರೆಂಟ್ವೊಂದಕ್ಕೆ (Bihar Restaurant) ಸ್ಪೆಶಲ್ ಮಸಾಲಾ ದೋಸೆ ತುಂಬ ದುಬಾರಿಯಾಗಿ ಪರಿಣಮಿಸಿದೆ. ಗ್ರಾಹಕರೊಬ್ಬರು ಆರ್ಡರ್ ಮಾಡಿದ 140 ರೂಪಾಯಿ ಸ್ಪೆಶಲ್ ಮಸಾಲೆ ದೋಸೆಗೆ ಸಾಂಬಾರ್ ಕೊಡದ ಕಾರಣ, ಈಗ ಗ್ರಾಹಕ ನ್ಯಾಯಾಲಯ, ರೆಸ್ಟೋರೆಂಟ್ಗೆ 3500 ರೂಪಾಯಿ ದಂಡ ವಿಧಿಸಿದೆ. ಮಸಾಲೆ ದೋಸೆಯೊಂದಿಗೆ ಚಟ್ನಿ ಮತ್ತು ಸಾಂಬಾರ್ ನೀಡಬೇಕು. ಆದರೆ ರೆಸ್ಟೋರೆಂಟ್ನಲ್ಲಿ 140 ರೂಪಾಯಿ ಕೊಟ್ಟು ದೋಸೆ ಆರ್ಡರ್ ಮಾಡಿದರೂ, ಬರೀ ಚಟ್ನಿ ಮಾತ್ರ ಕೊಟ್ಟಿದ್ದಾರೆ. ಸಾಂಬಾರ್ ಕೊಟ್ಟಿಲ್ಲ ಎಂದು ಗ್ರಾಹಕರೇ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದರು. ಆ ಕೇಸ್ನಲ್ಲಿ ಈಗ ರೆಸ್ಟೋರೆಂಟ್ಗೆ ಹಿನ್ನಡೆಯಾಗಿದೆ. ಸುದ್ದಿ ಭರ್ಜರಿ ವೈರಲ್ ಆಗುತ್ತಿದೆ (Viral News)
ಹೀಗೆ ರೆಸ್ಟೋರೆಂಟ್ ವಿರುದ್ಧ ಮೊಕದ್ದಮೆ ಹೂಡಿದ್ದವರು ಮನೀಶ್ ಗುಪ್ತಾ ಎಂಬ ಒಬ್ಬ ವಕೀಲರು. 2022ರ ಆಗಸ್ಟ್ 15ರಂದು ಅವರ ಹುಟ್ಟಿದ ದಿನವಿತ್ತು. ಹೀಗಾಗಿ ಅಂದು ಸ್ಪೆಶಲ್ ಆಗಿ ಏನಾದರೂ ತಿನ್ನಬೇಕು ಎಂದು ಮನೀಶ್ ಗುಪ್ತಾ ಬಯಸಿದರು. ಅದರಂತೆ ನಮಕ್ ಎಂಬ ರೆಸ್ಟೋರೆಂಟ್ನಿಂದ ಮಸಾಲೆ ದೋಸೆ ಆರ್ಡರ್ ಮಾಡಿದರು. ‘ಸ್ಪೆಶಲ್ ಮಸಾಲಾ ದೋಸೆ’ಗೇ ಹೆಸರಾದ ರೆಸ್ಟೋರೆಂಟ್ ಅದು. 140 ರೂಪಾಯಿ ಮಸಾಲಾ ದೋಸೆ ಜತೆ ಒಂದು ಚಟ್ನಿ ಮತ್ತು ಬೇಳೆಗಳು, ವಿವಿಧ ತರಕಾರಿ ಮತ್ತು ಮಸಾಲೆ ಸೇರಿಸಿ ತಯಾರಿಸಲಾದ ಸಾಂಬಾರ್ ಕೊಡುವುದು ವಾಡಿಕೆ. ಆದರೆ ಈ ಲಾಯರ್ಗೆ ಮಸಾಲೆ ದೋಸೆ ಜೊತೆ ಸಾಂಬಾರ್ ಬದಲು ಚಟ್ನಿ ಮಾತ್ರ ಕೊಡಲಾಗಿತ್ತು.
ಇನ್ನು ಮಸಾಲೆ ದೋಸೆಯೊಟ್ಟಿಗೆ ಸಾಂಬಾರ್ ಇಲ್ಲದೆ ಇರುವುದನ್ನು ನೋಡಿದ ಮನೀಶ್ ಗುಪ್ತಾ ಅವರು ರೆಸ್ಟೋರೆಂಟ್ಗೇ ಕರೆ ಮಾಡಿ ಕೇಳಿದ್ದಾರೆ. ಆದರೆ ರೆಸ್ಟೋರೆಂಟ್ ಮಾಲೀಕ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅದರ ಬದಲಿಗೆ ವ್ಯಂಗ್ಯ ಮಾಡಿದ್ದಾನೆ. ಏನು 140 ರೂಪಾಯಿಗೆ ನಿಮಗೆ ಇಡೀ ರೆಸ್ಟೋರೆಂಟ್ ಕೊಡಬೇಕಾ ಎಂದು ಅಧಿಕ ಪ್ರಸಂಗತನದ ಉತ್ತರ ಕೊಟ್ಟಿದ್ದ. ಆ ಉತ್ತರ ಕೇಳಿ ಸಿಟ್ಟಾದ ವಕೀಲ ಮನೀಶ್ ಗುಪ್ತಾ ಅವರು ರೆಸ್ಟೋರೆಂಟ್ ವಿರುದ್ಧ ಕಾನೂನು ಹೋರಾಟ ಶುರು ಮಾಡಿದರು. ಹಲವು ನೋಟಿಸ್ಗಳನ್ನೂ ಕಳಿಸಿದ್ದಾರೆ.
ಇದನ್ನೂ ಓದಿ: Free Bus Service : ಫ್ರೀ ಬಸ್ಸಲ್ಲಿ ಬಂದ ಮಹಿಳೆಯರಿಂದ ಧರ್ಮಸ್ಥಳದಲ್ಲಿ ಸಿದ್ದರಾಮಯ್ಯ ಹೆಸರಲ್ಲಿ ಅರ್ಚನೆ!
ಅದ್ಯಾವುದಕ್ಕೂ ರೆಸ್ಟೋರೆಂಟ್ ಉತ್ತರ ಕೊಡದೆ ಇದ್ದಾಗ ವಕೀಲರು ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ವಿಚಾರಣೆ ಗ್ರಾಹಕ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಅದಾಗಿ 11ತಿಂಗಳ ಬಳಿಕ ತೀರ್ಪು ಹೊರಬಿದ್ದಿದೆ. ಇಂದು ತೀರ್ಪು ನೀಡಿದ ಗ್ರಾಹಕ ಆಯೋಗದ ಅಧ್ಯಕ್ಷ ವೇದ್ ಪ್ರಕಾಶ್ ಸಿಂಗ್ ಮತ್ತು ಸದಸ್ಯ ವರುಣ್ ಕುಮಾರ್ ಅವರು ‘ರೆಸ್ಟೋರೆಂಟ್ ಸಾಂಬಾರು ಕೊಡದೆ, ಗ್ರಾಹಕರಿಗೆ ಮಾನಸಿಕ, ದೈಹಿಕ ಮತ್ತು ಆರ್ಥಿಕವಾಗಿ ತೊಂದರೆಯನ್ನುಂಟು ಮಾಡಿದೆ’ ಎಂದು ಹೇಳಿದ್ದಾರೆ. ಹಾಗೇ, ರೆಸ್ಟೋರೆಂಟ್ ತಪ್ಪಿದೆ ಎಂದು ತೀರ್ಪು ಕೊಟ್ಟು 3500 ರೂಪಾಯಿ ದಂಡ ವಿಧಿಸಿದ್ದಾರೆ.