ನವದೆಹಲಿ: ಕಳೆದ ಜುಲೈನಲ್ಲಿ 15 ತಿಂಗಳ ಗರಿಷ್ಟ ಏರಿಕೆಯನ್ನು ದಾಖಲಿಸಿದ್ದ ಚಿಲ್ಲರೆ ಹಣದುಬ್ಬರವು (Retail Inflation) ಆಗಸ್ಟ್ ತಿಂಗಳಲ್ಲಿ ಇಳಿಕೆಯಾಗಿದ್ದು, ಶೇ.6.83ಕ್ಕೆ ನೆಲೆ ನಿಂತಿದೆ. ಇದು ಕಳೆದ ವರ್ಷ ಇದೇ ಅವಧಿಯಲ್ಲಿ ದಾಖಲಾಗಿದ್ದ ಹಣದುಬ್ಬರಕ್ಕೆ ಸಮನಾಗಿದೆ. ಹಾಗಿದ್ದೂ, ಭಾರತೀಯ ರಿಸರ್ವ್ ಬ್ಯಾಂಕ್‌ನ (Reserve Bank of India) ಗುರಿಯಾದ 4% (+/-2) ಗಿಂತ ಹೆಚ್ಚಿನ ಮಟ್ಟದಲ್ಲಿ ಮುಂದುವರೆದಿದೆ ಎಂದು ಮಂಗಳವಾರ ಬಿಡುಗಡೆಯಾದ ಅಧಿಕೃತ ಮಾಹಿತಿಯಲ್ಲಿ ತಿಳಿಸಲಾಗಿದೆ.
15 ತಿಂಗಳ ಗರಿಷ್ಟ ಏರಿಕೆಯಾಗಿದ್ದ ಜುಲೈ ತಿಂಗಳ ಶೇ.7.44 ಹಣದುಬ್ಬರಕ್ಕೆ ಹೋಲಿಸಿದರೆ, ಆಗಸ್ಟ್ ತಿಂಗಳಲ್ಲಿ ಇದರ ವೇಗ ಮಂದಗತಿಯಲ್ಲಿದೆ. ಖಾದ್ಯ ತೈಲದ ಬೆಲೆಗಳಲ್ಲಿ ತುಸು ಇಳಿಕೆ ಮತ್ತು ತರಕಾರಿ ಬೆಲೆಗಳಲ್ಲೂ ಅಲ್ಪ ಪ್ರಮಾಣದ ಕುಸಿತವು ಈ ಚಿಲ್ಲರೆ ಹಣದುಬ್ಬರ ಇಳಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಸಂಯೋಜಿತ ಆಹಾರ ಬೆಲೆ ಸೂಚ್ಯಂಕವು ಒಂದು ವರ್ಷದ ಹಿಂದಿನಿಂದ ಆಗಸ್ಟ್‌ನಲ್ಲಿ 9.94% ಕ್ಕೆ ಕಡಿಮೆಯಾಗಿದೆ. ಹಿಂದಿನ ತಿಂಗಳಲ್ಲಿ 11.51% ರಷ್ಟು ಏರಿಕೆಯಾಗಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ. ಗ್ರಾಹಕರ ಬೆಲೆ ಹಣದುಬ್ಬರವು ಸತತ ಎರಡನೇ ತಿಂಗಳಿಗೆ ಕೇಂದ್ರ ಬ್ಯಾಂಕ್‌ನ ಗುರಿ ಶ್ರೇಣಿಯನ್ನು ಮೀರಿದೆ. ಇದು ಟೊಮೆಟೊ ಮತ್ತು ತರಕಾರಿ ಬೆಲೆಗಳಲ್ಲಿನ ತೀವ್ರ ಏರಿಕೆಯು ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: ಸಂಪಾದಕೀಯ: ಅಗತ್ಯ ವಸ್ತುಗಳ ದರ ನಿಯಂತ್ರಿಸಿ ಹಣದುಬ್ಬರಕ್ಕೆ ಕಡಿವಾಣ ಹಾಕಬೇಕಿದೆ
ಧಾನ್ಯಗಳ ಬೆಲೆಗಳು ಎರಡಂಕಿಗಳಲ್ಲಿ ಉಳಿದಿವೆ ಮತ್ತು ಜುಲೈನಲ್ಲಿ 13% ಇದ್ದ ಹಣದುಬ್ಬರ ದರ ಆಗಸ್ಟ್‌ನಲ್ಲಿ 11.6%ಕ್ಕೆ ಏರಿಕೆಯಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಹಣದುಬ್ಬರವು ಹಿಂದಿನ ತಿಂಗಳಲ್ಲಿ 8.34% ಇತ್ತು ಮತ್ತು ಅದೀಗ 7.7% ಕ್ಕೆ ಬಂದಿದೆ. ಆದರೆ, ತರಕಾರಿ ಬೆಲೆಗಳು ಇನ್ನೂ ಗಗನಮುಖಿಯಾಗೇ ಇವೆ. ಆಗಸ್ಟ್ ತಿಂಗಳಲ್ಲಿ ಶೇ.26.1ರಷ್ಟಿದ್ದು, ಜುಲೈನಲ್ಲಿ ದರ ಶೇ.37.34 ಇತ್ತು. ಆದರೆ ತೈಲಗಳು ಮತ್ತು ಫ್ಯಾಟ್ಸ್ ಬೆಲೆಗಳು ಹಿಂದಿನ ತಿಂಗಳಕ್ಕೆ ಹೋಲಿಸಿದರೆ ಇಳಿಕೆಯಾಗಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.