Site icon Vistara News

Retail Inflation: ಮತ್ತೆ ದುಬಾರಿ ದುನಿಯಾ… 15 ತಿಂಗಳ ಗರಿಷ್ಠ ಮಟ್ಟಕ್ಕೆ ಹಣದುಬ್ಬರ ಏರಿಕೆ!

Retail inflation

ನವದೆಹಲಿ: ಭಾರತದ ಆರ್ಥಿಕಾಭಿವೃದ್ಧಿ (Indian Economy) ಏರುಗತಿಯಲ್ಲಿದೆ ಎಂದು ವಿಶ್ಲೇಷಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಈ ವಿಶ್ಲೇಷಣೆಗಳಿಗೆ ವಿರುದ್ಧವಾದ ಬೆಳವಣಿಗೆ ಘಟಿಸಿದೆ. ಭಾರತೀಯ ಚಿಲ್ಲರೆ ಹಣದುಬ್ಬರವು (Retail Inflation) ಜುಲೈನಲ್ಲಿ ಶೇ.7.44ಕ್ಕೆ ಏರಿಕೆಯಾಗಿದೆ. ಕಳೆದ 15 ತಿಂಗಳಲ್ಲೇ ಇದು ಗರಿಷ್ಠ ಮಟ್ಟದ ಏರಿಕೆಯಾಗಿದೆ. ಅರ್ಥಾತ್, ಭಾರತದಲ್ಲಿ ಮತ್ತೆ ದುಬಾರಿ ದುನಿಯಾ(Food Prices Spike) ಶುರುವಾಗಿದೆ. ಭಾರತದ ಚಿಲ್ಲರೆ ಹಣದುಬ್ಬರವು ಜೂನ್‌ನಲ್ಲಿ ಶೇ.4.81ರಿಂದ ವಾರ್ಷಿಕ ಆಧಾರದ ಮೇಲೆ ಜುಲೈನಲ್ಲಿ ಶೇ.7.44ಕ್ಕೆ ಏರಿದೆ. ಕೇಂದ್ರ ಸಾಂಖೀಕ ಇಲಾಖೆ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಈ ಮಾಹಿತಿಯನ್ನು ವಿವರಿಸಲಾಗಿದೆ.

2022ರ ಮೇ ತಿಂಗಳ ಬಳಿಕ ಚಿಲ್ಲರೆ ಹಣದುಬ್ಬರವು ಈಗ ಗರಿಷ್ಠ ಮಟ್ಟಕ್ಕೆ ತಲುಪಿದೆ. ಅಂದು ಶೇ.7.79ರಷ್ಟು ದಾಖಲಾಗಿತ್ತು. ಗ್ರಾಹಕ ಆಹಾರ ಬೆಲೆ ಸೂಚ್ಯಂಕ (CFPI) ಜೂನ್‌ನಲ್ಲಿ ಶೇ 4.49ರಿಂದ ಶೇ 11.51ಕ್ಕೆ ಏರಿದೆ. ಗ್ರಾಮೀಣ ಹಣದುಬ್ಬರವು ಶೇ.7.63 ರಷ್ಟಿದ್ದರೆ, ನಗರ ಹಣದುಬ್ಬರವು ಶೇ.7.20 ರಷ್ಟಿದೆ.

Retail Inflation: ತಲೆ ಕೆಳಗಾಯಿತು ವಿಶ್ಲೇಷಣೆಗಳು

ಇತ್ತೀಚೆಗೆ ರಾಯಿಟರ್ಸ್ ನಡೆಸಿದ್ದ 53 ಅರ್ಥಶಾಸ್ತ್ರಜ್ಞರ ಸಮೀಕ್ಷೆಯು ಗ್ರಾಹಕ ಬೆಲೆ ಸೂಚ್ಯಂಕ (CPI) ಹಣದುಬ್ಬರವು ಹೆಚ್ಚುತ್ತಿರುವ ಆಹಾರದ ಬೆಲೆಗಳಿಂದ ವಾರ್ಷಿಕ ಆಧಾರದ ಮೇಲೆ 6.40 ಪ್ರತಿಶತಕ್ಕೆ ಏರುತ್ತದೆ ಎಂದು ಅಂದಾಜಿಸಿತ್ತು. ಆದರೆ, ಕೇಂದ್ರ ಸಾಂಖೀಕ ಇಲಾಖೆ ಈಗ ಬಿಡುಗಡೆ ಮಾಡಿರುವ ಹಣದುಬ್ಬರದ ಅಂಕಿ ಸಂಖ್ಯೆಗಳು ವಿಶ್ಲೇಷಕರ ವಿಶ್ಲೇಷಣೆಯನ್ನು ತಲೆಕೆಳಗೆ ಮಾಡಿದೆ.

ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ಟಾಲರೆನ್ಸ್ ಬ್ಯಾಂಡ್‌ನ 2-6 ಪ್ರತಿಶತದ ಮೇಲಿನ ಮಿತಿಯನ್ನು ಸತತ ನಾಲ್ಕು ತಿಂಗಳ ಕಾಲದೊಳಗೇ ಉಲ್ಲಂಘಿಸಿದೆ. ಕಳೆದ ಒಂದು ತಿಂಗಳಿನಿಂದ ತರಕಾರಿಗಳು, ವಿಶೇಷವಾಗಿ ಟೊಮ್ಯಾಟೊ ಬೆಲೆ ಭಾರೀ ಏರಿಕೆಯು ಹಣದುಬ್ಬರ ಹೆಚ್ಚಳಕ್ಕೆ ಹೆಚ್ಚಿನ ಕಾಣಿಕೆಯನ್ನು ನೀಡಿದೆ.

ಈ ಸುದ್ದಿಯನ್ನೂ ಓದಿ: RBI Monetary Policy: ಸಾಲಗಾರರಿಗೆ ಸಿಹಿ ಸುದ್ದಿ, ರೆಪೋ ದರ ಯಥಾಸ್ಥಿತಿ; ಹಣದುಬ್ಬರ ಜೇಬಿಗೆ ಮತ್ತಷ್ಟು ಭಾರ

ತರಕಾರಿಗಳ ದರ ಏರಿಕೆ

ತರಕಾರಿಗಳ ಹಣದುಬ್ಬರ ದರವು ತೀವ್ರ ಹೆಚ್ಚಳವನ್ನು ಕಂಡಿದೆ. 0.93 ಪ್ರತಿಶತದ ಸಂಕೋಚನದ ವಿರುದ್ಧ 37.34 ಪ್ರತಿಶತಕ್ಕೆ ಏರಿಕೆಯಾಗಿದೆ. ಆಹಾರ ಮತ್ತು ಪಾನೀಯಗಳ ಹಣದುಬ್ಬರ ಮಟ್ಟವು ಶೇ.4.63 ರಿಂದ ಶೇ.10.57 ಕ್ಕೆ ಏರಿದೆ. ಧಾನ್ಯಗಳ ಹಣದುಬ್ಬರ ದರವು ಜೂನ್‌ನಲ್ಲಿ ಶೇ.12.71 ರಿಂದ ಶೇ.13.04 ಕ್ಕೆ ಏರಿಕೆಯಾಗಿದೆ. ಇಂಧನ ಮತ್ತು ಲೈಟ್ ವಿಭಾಗದ ಹಣದುಬ್ಬರ ಕೂಡ ಶೇ.3.67ಕ್ಕೆ ಹೆಚ್ಚಳ ಕಂಡಿದೆ.

ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version