Site icon Vistara News

Revanth Reddy: ರೇವಂತ್‌ ರೆಡ್ಡಿಯೇ ತೆಲಂಗಾಣ ಮುಖ್ಯಮಂತ್ರಿ: ರಾಹುಲ್ ಗಾಂಧಿ‌

CM Revanth Reddy launches two guarantee Schemes in Telangana

ಹೊಸದಿಲ್ಲಿ: ತೆಲಂಗಾಣ ಕಾಂಗ್ರೆಸ್‌ (Telangana Congress) ಮುಖ್ಯಸ್ಥ ಅನುಮುಲಾ ರೇವಂತ್‌ ರೆಡ್ಡಿ (Anumula Revanth Reddy) ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. “ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.

ನವೆಂಬರ್‌ 30ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ (Assembly Election 2023) ಪಕ್ಷವನ್ನು ರಾಜ್ಯದಲ್ಲಿ ಮುನ್ನಡೆಸಿದ್ದ ರೇವಂತ್‌ ರೆಡ್ಡಿ, ಗೆಲುವಿನ ದಡ ಹತ್ತಿಸಿದ್ದರು. ರಾಹುಲ್‌ ಗಾಂಧಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸೇರಿದಂತೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಿರ್ಧಾರ ಪ್ರಕಟಿಸುವ ಮುನ್ನ ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ಕಾಂಗ್ರೆಸ್‌ನ ಗೆಲುವಿನ ಪ್ರಚಾರದ ಮುಖವಾಗಿದ್ದ ಐವತ್ನಾಲ್ಕು ವರ್ಷದ ರೆಡ್ಡಿ ಅವರು, ಮುಖ್ಯಮಂತ್ರಿ ಹುದ್ದೆಗೇರುವ ಮುನ್ನ ಪಕ್ಷದೊಳಗೇ ತೀವ್ರ ಪ್ರತಿರೋಧವನ್ನೂ ಎದುರಿಸಿದ್ದಾರೆ. ನಿನ್ನೆ ಸಂಜೆ ನಡೆಯಬೇಕಿದ್ದ ಪ್ರಮಾಣ ವಚನ ಸಮಾರಂಭವನ್ನು ರಾಜ್ಯ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರ ಪ್ರತಿರೋಧದ ಕಾರಣ ರದ್ದುಗೊಳಿಸಲಾಗಿತ್ತು.

ಈ ವಿರೋಧಿಗಳಲ್ಲಿ ಮಾಜಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಎನ್. ಉತ್ತಮ್ ಕುಮಾರ್ ರೆಡ್ಡಿ, ಮಾಜಿ ಸಿಎಲ್‌ಪಿ ನಾಯಕ ಭಟ್ಟಿ ವಿಕ್ರಮಾರ್ಕ, ಮಾಜಿ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಮಾಜಿ ಉಪಮುಖ್ಯಮಂತ್ರಿ ದಾಮೋದರ್ ರಾಜನರಸಿಂಹ ಸೇರಿದ್ದಾರೆ. ಇವರು ರೇವಂತ್ ರೆಡ್ಡಿಯ ಉಮೇದುವಾರಿಕೆಯನ್ನು ವಿರೋಧಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಅವರ ಹೆಸರು, ರೆಡ್ಡಿ ಅವರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನ ಇತ್ಯಾದಿಗಳನ್ನು ಇವರು ಕಾರಣಗಳಾಗಿ ಮುಂದೊಡ್ಡಿದ್ದಾರೆ.

2021ರಲ್ಲಿ ತೆಲಂಗಾಣ ಕಾಂಗ್ರೆಸ್‌ನ ಉಸ್ತುವಾರಿ ವಹಿಸಿದಾಗಲೂ ರೆಡ್ಡಿ ಸವಾಲನ್ನು ಎದುರಿಸಿದ್ದರು. ಮಾಜಿ ಟಿಡಿಪಿ ನಾಯಕರಾದ ರೆಡ್ಡಿ, ಕಾಂಗ್ರೆಸ್‌ ನಾಯಕ ಹುದ್ದೆಯನ್ನು ಪಡೆಯಲು ಕೋಟಿಗಟ್ಟಲೆ ಹಣ ಚೆಲ್ಲಿದ್ದಾರೆ ಎಂದು ಆರೋಪಿಸಲಾಗಿದೆ. 2014ರಲ್ಲಿ ರಾಜ್ಯ ರಚನೆಯಾದಾಗಿನಿಂದಲೂ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿಗೆ ಕಾಂಗ್ರೆಸ್ ಅಷ್ಟೇನೂ ಸವಾಲಾಗಿರಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ರೇವಂತ್‌ ರೆಡ್ಡಿ ಆಕ್ರಮಣಕಾರಿ ರೀತಿಯಲ್ಲಿ ಕೆ. ಚಂದ್ರಶೇಖರ ರಾವ್ (K. Chandrashekhar Rao) ನೇತೃತ್ವದ ಪಕ್ಷದ ವಿರುದ್ಧ ಪ್ರಚಾರ ನಡೆಸಿದ್ದರು.

ಚುನಾವಣೆ ಸಮೀಪಿಸುತ್ತಿದ್ದಂತೆ ರೆಡ್ಡಿ ಅವರು ಮಾಡಿದ ಅಭ್ಯರ್ಥಿಗಳ ಆಯ್ಕೆಯು ರಾಜ್ಯ ಕಾಂಗ್ರೆಸ್‌ನಲ್ಲಿ ಇನ್ನಷ್ಟು ಪ್ರತಿಭಟನೆ ಹುಟ್ಟುಹಾಕಿತ್ತು. ಟಿಕೆಟ್‌ಗಳನ್ನು ಮಾರಾಟ ಮಾಡಿದ ಆರೋಪವೂ ಅವರ ಮೇಲಿದೆ. ಶಾಸಕರ ಬೆಂಬಲವಿಲ್ಲದಿದ್ದರೆ ತನಗೆ ಉನ್ನತ ಹುದ್ದೆ ಸಿಗುವುದಿಲ್ಲ ಎಂದು ಚೆನ್ನಾಗಿ ತಿಳಿದಿದ್ದರೂ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರು ತಮ್ಮದೇ ರಿಸ್ಕ್‌ ತೆಗೆದುಕೊಂಡಿದ್ದರು. ಅವರ ಬೆಂಬಲಿಗರ ಪ್ರಕಾರ, ಕಾಂಗ್ರೆಸ್‌ನ 64 ಶಾಸಕರಲ್ಲಿ 42 ಶಾಸಕರು ರೆಡ್ಡಿ ಅವರ ನಿಷ್ಠಾವಂತರು. ಹೀಗಾಗಿ, ಈಗಾಗಲೇ ಉತ್ತರ ಭಾರತದಲ್ಲಿ ಚುನಾವಣಾ ಹಿನ್ನಡೆಯಿಂದ ತತ್ತರಿಸಿರುವ ಕಾಂಗ್ರೆಸ್ ಹೈಕಮಾಂಡ್, ತಾನು ಇದೀಗ ಗೆದ್ದಿರುವ ಏಕೈಕ ರಾಜ್ಯದಲ್ಲಿ ಮತ್ತೆ ಬಂಡಾಯದ ರಿಸ್ಕ್‌ ಮೈಮೇಲೆ ಎಳೆದುಕೊಳ್ಳಲು ಮುಂದಾಗಿಲ್ಲ.

ಇದನ್ನೂ ಓದಿ: Telangana Elections 2023 : ರೇವಂತ್‌ ರೆಡ್ಡಿ: ಅಂದು ಎಬಿವಿಪಿ ನಾಯಕ, ಇಂದು ಕಾಂಗ್ರೆಸ್‌ ಸಿಎಂ ಪಟ್ಟದತ್ತ

Exit mobile version