Site icon Vistara News

ISIS Terror | ರಷ್ಯಾದಲ್ಲಿ ಸಿಕ್ಕಿಬಿದ್ದ ಉಗ್ರ: ಪ್ರವಾದಿ ಅವಹೇಳನಕ್ಕೆ ಪ್ರತೀಕಾರ ತೀರಿಸಲು ಮುಂದಾಗಿದ್ದನೇ?

ISIS

ನವ ದೆಹಲಿ: ರಷ್ಯಾದ ಫೆಡರಲ್‌ ಸೆಕ್ಯುರಿಟಿ ಸರ್ವಿಸ್‌ನಿಂದ ಬಂಧಿತನಾಗಿರುವ ಐಸಿಸ್‌ ಉಗ್ರ ಭಾರತದಲ್ಲಿ ಉಗ್ರ ಕೃತ್ಯ ನಡೆಸಲು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದ ಎನ್ನುವ ಮಾಹಿತಿಯನ್ನು ಸ್ವತಃ ರಷ್ಯಾ ಪೊಲೀಸರೇ ನೀಡಿದ್ದಾರೆ. ಈ ಉಗ್ರ ಭಾರತದ ಆಡಳಿತಾರೂಢ ಪಕ್ಷವೊಂದರ ನಾಯಕನ ಹತ್ಯೆಗೆ ಸ್ಕೆಚ್‌ ಹಾಕಿ ಅದನ್ನು ಅನುಷ್ಠಾನಕ್ಕೆ ತರುವುದಕ್ಕೆ ಹೊರಟಿದ್ದ ಎನ್ನುವ ಸುಳಿವನ್ನೂ ಅವರೇ ನೀಡಿದ್ದಾರೆ.

ಹಾಗಿದ್ದರೆ, ಈ ಆತ್ಮಾಹುತಿ ದಾಳಿಯ ಮೂಲ ಉದ್ದೇಶವೇನು? ಯಾಕಾಗಿ ಅವನನ್ನು ಐಸಿಸ್‌ ಭಾರತಕ್ಕೆ ಕಳುಹಿಸಿದೆ ಎಂಬ ಅಂಶಗಳ ಬಗ್ಗೆ ಕೆದಕಿದರೆ ಸಿಗುವ ಉತ್ತರ ಪ್ರವಾದಿ ಮಹಮ್ಮದ್‌ ಅವಹೇಳನ ಪ್ರಕರಣ.

ಬಿಜೆಪಿ ವಕ್ತಾರೆಯಾಗಿದ್ದ ನೂಪುರ್‌ ಶರ್ಮ ಅವರು ಟೀವಿ ಚಾನೆಲ್‌ ಒಂದರ ಸಂದರ್ಶನದ ವೇಳೆ ಆಡಿದ ಪ್ರವಾದಿ ಮೊಹಮ್ಮದ್‌ ಕುರಿತ ಅವಹೇಳನಕಾರಿ ಮಾತು ದೇಶದಲ್ಲಿ ಹಲವಾರು ಕೊಲೆ ಮತ್ತು ಹಲ್ಲೆಗಳಿಗೆ ಕಾರಣವಾಗಿದೆ. ನೂಪುರ್‌ ಶರ್ಮ ಅವರಿಗೇ ಕೊಲೆ ಬೆದರಿಕೆ ಬಂದಿದ್ದಲ್ಲದೆ, ನೂಪುರ್‌ ಶರ್ಮ ಅವರನ್ನು ಈ ವಿಚಾರದಲ್ಲಿ ಬೆಂಬಲಿಸಿದ್ದಾರೆ ಎಂಬ ಕಾರಣಕ್ಕಾಗಿ ಹಲವರು ದುಷ್ಟ ಶಕ್ತಿಗಳ ಕೈಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ನೂಪುರ್‌ ಶರ್ಮ ಅವರ ಮಾತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಕಾರಣವಾಗಿತ್ತು. ಈ ನಡುವೆ, ಐಸಿಸ್‌ ಆತ್ಮಾಹುತಿ ದಾಳಿಗೆ ಉಗ್ರನನ್ನು ಭಾರತಕ್ಕೆ ಕಳುಹಿಸಲು ಯತ್ನಿಸಿದ್ದರ ಹಿಂದೆ ಕೂಡಾ ಪ್ರವಾದಿ ಅವಹೇಳನದ ಸೇಡು ಇದೆ ಎನ್ನುವ ಸಂಗತಿ ಬಯಲಾಗಿದೆ.

ಇದನ್ನು ಕೂಡಾ ಹೇಳಿರುವುದು ರಷ್ಯಾದ ಫೆಡರಲ್‌ ಸೆಕ್ಯುರಿಟಿ ಸರ್ವಿಸ್‌. ಇದರ ಸಿಎಸ್‌ಒ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ, ಪ್ರವಾದಿ ಮಹಮ್ಮದ್‌ ಅವರಿಗೆ ಮಾಡಿರುವ ಅಪಮಾನಕ್ಕೆ ಪ್ರತೀಕಾರವಾಗಿ ದಾಳಿ ನಡೆಸಲು ಸ್ಕೆಚ್‌ ಹಾಕಲಾಗಿದೆ ಎಂದು ತಿಳಿಸಲಾಗಿದೆ.

ಟರ್ಕಿಯಲ್ಲಿ ನಡೆದಿತ್ತು ನೇಮಕಾತಿ
ಬಂಧಿತನಾಗಿರು ಉಗ್ರ ಮೂಲತಃ ಮಧ್ಯ ಏಷ್ಯಾದವನು. ಅವನು ಕಳೆದ ಏಪ್ರಿಲ್‌ನಿಂದ ಜೂನ್‌ ನಡುವೆ ಟರ್ಕಿಯಲ್ಲಿ ನಡೆದ ನೇಮಕಾತಿ ವೇಳೆ ಬಾಂಬರ್‌ ಆಗಲು ಆಯ್ಕೆಯಾಗಿತ್ತು. ಆರಂಭದಲ್ಲಿ ಐಸಿಸ್‌ ನೇಮಕಾತಿ ವಿಭಾಗದವರು ಟೆಲಿಗ್ರಾಂ ಮೂಲಕ ಈ ವ್ಯಕ್ತಿಯನ್ನು ಸಂಪರ್ಕಿಸಿದ್ದರು. ನಂತರ ಇಸ್ತಾಂಬುಲ್‌ನಲ್ಲಿ ವೈಯಕ್ತಿಕ ಸಂದರ್ಶನ ನಡೆದಿತ್ತು.

ಬಂಧಿತನಾಗಿರುವ ಉಗ್ರ ಅಲ್ಲಿಂದ ರಷ್ಯಾಕ್ಕೆ ಬಂದಿದ್ದ. ಅಲ್ಲಿಂದ ಅವನು ಭಾರತಕ್ಕೆ ಹಾರಲು ಎಲ್ಲ ರೀತಿಯ ಸಿದ್ಧತೆಯನ್ನು ನಡೆಸುತ್ತಿದ್ದ. ಅದರ ಮಧ್ಯೆ ಸಿಕ್ಕಿಬಿದ್ದಿದ್ದಾನೆ. ಭಾರತಕ್ಕೆ ಬಂದು ಏನು ಮಾಡಬೇಕು, ಎಲ್ಲಿ ಹೋಗಬೇಕು, ಆಕ್ಷನ್‌ ಪ್ಲ್ಯಾನ್‌ ಏನು ಎನ್ನುವುದನ್ನು ಬಂದ ಮೇಲೆಯೇ ತಿಳಿಸುವುದಾಗಿ ಹೇಳಲಾಗಿತ್ತು. ಆತ್ಮಹತ್ಯಾ ಬಾಂಬರ್‌ ಆಗಿ ಕೆಲಸ ಮಾಡಲು ಆತನನ್ನು ಮಾನಸಿಕವಾಗಿ ಸಜ್ಜು ಮಾಡಲಾಗಿತ್ತು. ಜತೆಗೆ ಸಣ್ಣ ಮಟ್ಟದ ತರಬೇತಿ ನೀಡಲಾಗಿತ್ತು. ಆದರೆ, ಭಾರತಕ್ಕೆ ಬಂದ ಮೇಲೆ ಅವನಿಗೆ ದಾಳಿಗೆ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ನೀಡುವ ಬಗ್ಗೆ ಭರವಸೆ ನೀಡಲಾಗಿತ್ತು.

Exit mobile version