ನವದೆಹಲಿ: ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಇತರರನ್ನು ನಿರ್ದಿಷ್ಟ ಧರ್ಮಕ್ಕೆ ಮತಾಂತರ ಮಾಡುವ ಮೂಲಭೂತ ಹಕ್ಕನ್ನು ಒಳಗೊಂಡಿಲ್ಲ. ಮತಾಂತರವು ಗಂಭೀರ ಪರಿಣಾಮಗಳನ್ನು ಒಳಗೊಂಡಿರುವ ಸಮಸ್ಯೆಯಾಗಿದೆ. ಮತಾಂತರ ತಡೆಗೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ. ದೇಶದಲ್ಲಿ ನಡೆಯುತ್ತಿರುವ ಒತ್ತಾಯದ ಮತಾಂತರ ಕುರಿತು ಸಲ್ಲಿಕೆಯಾಗಿರುವ ಸಾರ್ಜವನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಗೆ ಕೇಂದ್ರ ಸರ್ಕಾರವು ತನ್ನ ಪ್ರತಿಕ್ರಿಯೆಯನ್ನು ಅಫಿಡವಿಟ್ ಮೂಲಕ ತಿಳಿಸಿದೆ.
ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಖಂಡಿತವಾಗಿಯೂ ವ್ಯಕ್ತಿಯೊಬ್ಬನನ್ನು ಮೋಸ, ಕಪಟತನ, ಒತ್ತಾಯ, ಆಮಿಷಗಳು ಅಥವಾ ಇಂಥ ಸಾಧನಗಳ ಮೂಲಕ ಮತಾಂತರ ಮಾಡುವ ಹಕ್ಕನ್ನು ನೀಡಿಲ್ಲ. ಮತಾಂತರವನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ದೇಶದಲ್ಲಿ ಒಂಭತ್ತು ರಾಜ್ಯಗಳು ಈಗಾಗಲೇ ಕಾನೂನುಗಳನ್ನು ಜಾರಿಗೆ ತಂದಿವೆ. ಒಡಿಶಾ, ಮಧ್ಯಪ್ರದೇಶ, ಗುಜರಾತ್, ಛತ್ತೀಸ್‌ಗಢ, ಜಾರ್ಖಂಡ್, ಉತ್ತರಾಖಂಡ, ಉತ್ತರ ಪ್ರದೇಶ, ಕರ್ನಾಟಕ ಮತ್ತು ಹರ್ಯಾಣ ರಾಜ್ಯಗಳು ಮತಾಂತರ ತಡೆಯಲು ಕಾನೂನು ಹೊಂದಿವೆ ಎಂದು ಕೇಂದ್ರವು ಹೇಳಿದೆ.
ಸಮಾಜದ ಕೆಲವು ವರ್ಗದ ಮಹಿಳೆಯರು ಮತ್ತು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಮತಾಂತರವಾಗುವುದನ್ನು ತಡೆಯಲು ಇಂಥ ಕಾನೂನುಗಳು ಅಗತ್ಯವಾಗಿವೆ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತ್ತು ಮುಖ್ಯವಾಗಿ, ದೇಶದ ಎಲ್ಲಾ ನಾಗರಿಕರ ಪ್ರಜ್ಞೆಯ ಹಕ್ಕು ಅತ್ಯಂತವಾಗಿ ಪಾಲಿಸಬೇಕಾದ ಮತ್ತು ಮೌಲ್ಯಯುತವಾದ ಹಕ್ಕಾಗಿದ್ದು, ಇದನ್ನು ಕಾರ್ಯಾಂಗ ಮತ್ತು ಶಾಸಕಾಂಗವು ರಕ್ಷಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಜ್ಯಗಳ ತಿಳಿವಳಿಕೆಗಳೊಂದಿಗೆ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿತು.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಬಲವಂತದ ಮತಾಂತರದಿಂದ ದೇಶದ ಭದ್ರತೆಗೆ ಅಪಾಯ