Site icon Vistara News

Rishi Sunak: ಜಿ20 ಸಭೆ ಮಧ್ಯೆಯೇ ಅಕ್ಷರಧಾಮ ದೇಗುಲಕ್ಕೆ ರಿಷಿ ಸುನಕ್‌, ಅಕ್ಷತಾ ಮೂರ್ತಿ ಭೇಟಿ, ಪ್ರಾರ್ಥನೆ

Rishi Sunak And Akshata Murty

Rishi Sunak, Wife Akshata Murty Visit Akshardham Temple Amid G20 Summit 2023

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ ಮಧ್ಯೆಯೇ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ (Rishi Sunak) ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ (Akshata Murty) ಅವರು ದೆಹಲಿಯಲ್ಲಿರುವ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಭಾನುವಾರ (ಸೆಪ್ಟೆಂಬರ್‌ 10) ಎರಡನೇ ದಿನದ ಚಟುವಟಿಕೆಗಳು ಆರಂಭವಾಗುವ ಮುನ್ನವೇ ಬಿಡುವು ಪಡೆದ ದಂಪತಿಯು ದೇವಾಲಯಕ್ಕೆ ಭೇಟಿ ನೀಡಿದರು.

ರಿಷಿ ಸುನಕ್‌ ಅವರು ಭಾರತದ ಮೂಲದವರಾಗಿದ್ದು, ಹಿಂದು ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಇನ್ನು ಅಕ್ಷತಾ ಮೂರ್ತಿ ಅವರು ಇನ್ಫೋಸಿಸ್‌ನ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರ ಪುತ್ರಿಯಾಗಿದ್ದಾರೆ. ಇಬ್ಬರೂ ಹಿಂದು ಧರ್ಮದಲ್ಲಿ ಅಚಲ ನಂಬಿಕೆ ಇಟ್ಟಿದ್ದು, ದೈವಭಕ್ತರಾಗಿದ್ದಾರೆ. ಹಾಗಾಗಿ, ಅವರು ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ದಂಪತಿಯ ಭೇಟಿ ಹಿನ್ನೆಲೆಯಲ್ಲಿ ಅಕ್ಷರಧಾಮ ದೇವಾಲಯದ ಸುತ್ತ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಭಾರತಕ್ಕೆ ಆಗಮಿಸಿದ ಕೂಡಲೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಿಷಿ ಸುನಕ್‌, “ನಾನು ಹಿಂದು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ನಾನು ಹುಟ್ಟಿನಿಂದಲೂ ಹಿಂದು ಸಂಪ್ರದಾಯ, ಆಚಾರ-ವಿಚಾರಗಳನ್ನು ಪಾಲಿಸಿಕೊಂಡು ಬಂದಿದ್ದೇನೆ” ಎಂದು ಹೇಳಿದ್ದರು.

ಇದನ್ನೂ ಓದಿ: Rishi Sunak: ಜೈ ಸಿಯಾ ರಾಮ್‌ ಎಂದು ಭಾಷಣ ಆರಂಭಿಸಿದ ರಿಷಿ ಸುನಕ್;‌ ವಿಡಿಯೊ ವೈರಲ್, ಏನಿದರ ಅರ್ಥ?

ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್‌ ಸೇರಿ ಹಲವು ರಾಷ್ಟ್ರಗಳ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಬ್ರಿಟನ್‌ ಪ್ರಧಾನಿ ರಿಷಿ ಸುನಕ್, ಜಪಾನ್‌ ಪ್ರಧಾನಿ ಫುಮಿಯೋ ಕಿಶಿದಾ ಸೇರಿ ಐದು ರಾಷ್ಟ್ರಗಳ ನಾಯಕರ ಜತೆ ಮೋದಿ ಮಹತ್ವದ ವಿಷಯಗಳನ್ನು ಚರ್ಚಿಸಿದ್ದರು. ಉಭಯ ದೇಶಗಳ ಸಂಬಂಧ ವೃದ್ಧಿ, ವ್ಯಾಪಾರ-ಒಪ್ಪಂದ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು. ಅದರಲ್ಲೂ, ಭಾರತ ಹಾಗೂ ಬ್ರಿಟನ್‌ ಸಂಬಂಧ ವೃದ್ಧಿ ಕುರಿತು ಮೋದಿ ಹಾಗೂ ರಿಷಿ ಹೆಚ್ಚಿನ ಅದ್ಯತೆ ನೀಡಿದ್ದರು.

Exit mobile version