ಮುಂಬೈ: ಶುಕ್ರವಾರ ರಾತ್ರಿ ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್ ವೇ (Mumbai-Nagpur Expressway or Samruddhi Mahamarg)ಯ ಕಡ್ವಾಂಚಿ (Kadwanchi) ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 6 ಮಂದಿ ಮೃತಪಟ್ಟು, 4 ಮಂದಿ ಗಾಯಗೊಂಡಿದ್ದಾರೆ. ಮುಂಬೈಯಿಂದ ಸುಮಾರು 400 ಕಿ.ಮೀ. ದೂರದಲ್ಲಿ, ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಈ ಅವಘಢ ಸಂಭವಿಸಿದೆ (Road Accident).
ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಇಂಧನ ತುಂಬಿಸಿಕೊಂಡ ಬಂದ ಸ್ವಿಫ್ಟ್ ಡಿಜೈರ್ ಕಾರು ರಾಂಗ್ ಸೈಡ್‌ನಿಂದ ಹೆದ್ದಾರಿಗೆ ಪ್ರವೇಶಿಸಿ ನಾಗ್ಪುರದಿಂದ ಮುಂಬೈಗೆ ಹೋಗುತ್ತಿದ್ದ ಎರ್ಟಿಗಾ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸ ಎಷ್ಟು ತೀವ್ರವಾಗಿತ್ತೆಂದರೆ ಎರ್ಟಿಗಾ ಕಾರು ಮತ್ತು ಅದರಲ್ಲಿದ್ದ ಪ್ರಯಾಣಿಕರು ಗಾಳಿಯಲ್ಲಿ ಹಾರಿ ರಸ್ತೆಗೆ ಎಸೆಯಲ್ಪಟ್ಟರೆ ಸ್ವಿಫ್ಟ್ ಡಿಜೈರ್ ಗುರುತೇ ಸಿಗದಂತೆ ನಜ್ಜುಗುಜ್ಜಾಗಿದೆ.
ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಕೂಡಲೇ ಸಮೃದ್ಧಿ ಹೆದ್ದಾರಿ ಪೊಲೀಸರು ಮತ್ತು ಜಲ್ನಾ ಪೊಲೀಸರು ಸ್ಥಳಕ್ಕೆ ಧಾವಿಸಿ ಕ್ರೇನ್ ಸಹಾಯದಿಂದ ಕಾರನ್ನು ಹಿಂತೆಗೆದಿದ್ದಾರೆ.
ಸಮೃದ್ಧಿ ಮಹಾಮಾರ್ಗ ಎಂದೂ ಕರೆಯಲ್ಪಡುವ ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್ ವೇ ಆರು ಪಥ ಮತ್ತು 701 ಕಿ.ಮೀ ಉದ್ದ ಹೊಂದಿದ್ದು, ಅತೀ ಹೆಚ್ಚು ವಾಹನ ಸಂಚರಿಸುವ ಹೆದ್ದಾರಿಗಳಲ್ಲಿ ಒಂದು ಎನಿಸಿಕೊಂಡಿದೆ. ಜತೆಗೆ ಇದು ಮುಂಬೈ ಮತ್ತು ರಾಜ್ಯದ ಮೂರನೇ ಅತಿದೊಡ್ಡ ನಗರ ನಾಗ್ಪುರವನ್ನು ಸಂಪರ್ಕಿಸುವ ದೇಶದ ಅತಿ ಉದ್ದದ ಗ್ರೀನ್ ಫೀಲ್ಡ್ ರಸ್ತೆ ಯೋಜನೆಗಳಲ್ಲಿ ಒಂದಾಗಿದೆ.
ಹಾವೇರಿಯಲ್ಲಿ ಭಯಾನಕ ಅಪಘಾತ: ಲಾರಿಗೆ ಟಿಟಿ ಡಿಕ್ಕಿ, 13 ಜನರ ಸಾವು
ಹಾವೇರಿ: ಹಾವೇರಿಯ ಬ್ಯಾಡಗಿಯಲ್ಲಿ (Haveri Accident) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident), ನಿಂತಿದ್ದ ಲಾರಿಗೆ ಟಿಟಿ ವಾಹನ ಹಿಂದಿನಿಂದ ಗುದ್ದಿದ ಪರಿಣಾಮ 13 ಜನರು ಮೃತಪಟ್ಟಿದ್ದಾರೆ. ಈ ದುರಂತ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ನಿಂತಿದ್ದ ಲಾರಿಗೆ ಗುದ್ದಿದ ಪರಿಣಾಮ ಟಿಟಿ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ವಾಹನದಲ್ಲಿ ಮೃತದೇಹಗಳು ಅಪ್ಪಚ್ಚಿಯಾಗಿವೆ. ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಹೊರ ತೆಗೆಯುತ್ತಿದ್ದಾರೆ. ಪೊಲೀಸರು ಮೃತರ ಹಿನ್ನಲೆ ಪತ್ತೆ ಹಚ್ಚುತ್ತಿದ್ದಾರೆ.
ಇದನ್ನೂ ಓದಿ: Haveri Accident: ಪೂಜೆ ಮಾಡಿಸಿಕೊಂಡು ಬಂದ ಹೊಸ ವಾಹನ 13 ಜನರ ಬಲಿ ಪಡೆಯಿತು!
ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು ಎಂದು ತಿಳಿದು ಬಂದಿದೆ. ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ಮಾಯಮ್ಮನ ದರ್ಶನ ಮಾಡಿಕೊಂದು ಸ್ವಗ್ರಾಮಕ್ಕೆ ವಾಪಾಸಾಗುವಾಗ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟ 13 ಮಂದಿಯಲ್ಲಿ ಒಂದು ಮಗು ಸಹ ಇದೆ. ಸ್ಥಳಕ್ಕೆ ಹಾವೇರಿ ಎಸ್‌ಪಿ ಅಂಶುಕುಮಾರ ಭೇಟಿ ನೀಡಿದ್ದಾರೆ. ಮೃತದೇಹಗಳನ್ನು ಟಿಟಿ ವಾಹನದಿಂದ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಹೊರತೆಗೆದಿದ್ದು, ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 13 ಜನರ ಸಾವಿನ ಸುದ್ದಿ ಕೇಳಿ ಎಮ್ಮೆಹಟ್ಟಿ ಗ್ರಾಮದ ಜನತೆ ಶಾಕ್ ಆಗಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.