Site icon Vistara News

ಸಂಗಾತಿಗಾಗಿ 2000 ಕಿ.ಮೀ ಸಂಚರಿಸಿದ ರಾಯಲ್ ಬೆಂಗಾಲ್ ಟೈಗರ್! ಈ ಹುಲಿ ಹೋಗಿದ್ದೆಲ್ಲಿಗೆ?

Royal Bengal Tiger travels 2000 km for mate and new home

ಭುವನೇಶ್ವರ, ಒಡಿಶಾ: ಸ್ಥಿರ ವಾಸಸ್ಥಾನ (suitable territory) ಮತ್ತು ಸೂಕ್ತ ಸಂಗಾತಿಗಾಗಿ (potential mate) ಪ್ರಾಣಿಗಳು ಎಂಥದ್ದೇ ಸಾಹಸಕ್ಕೂ ಮುಂದಾಗುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ. ರಾಯಲ್ ಬೆಂಗಾಲ್ ಹುಲಿಯೊಂದು (Royal Bengal Tiger) ತನಗೆ ಸರಿಹೊಂದು ವಾಸಸ್ಥಾನ ಮತ್ತು ಸಂಗಾತಿಗೆ ಸುಮಾರು 2 ಸಾವಿರ ಕಿ.ಮೀ ಸಂಚರಿಸಿದೆ. ಹೌದು, ಮಹಾರಾಷ್ಟ್ರದ (Maharashtra) ತಡೋಬಾದಿಂದ ಗಂಡು ರಾಯಲ್ ಬೆಂಗಾಲ್ ಹುಲಿಯು ಕಳೆದ ಐದು ತಿಂಗಳುಗಳಲ್ಲಿ, ನಾಲ್ಕು ರಾಜ್ಯಗಳನ್ನು ಹಾಯ್ದು ಒಡಿಶಾ (Odisha) ಕಾಡಿಗೆ ಬಂದಿಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2023ರ ಜೂನ್ ತಿಂಗಳಲ್ಲಿ ರಾಜ್ಯದ ಅರಣ್ಯದಲ್ಲಿ ಹುಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರೂ, ಅದು ಎಲ್ಲಿಂದ ಬಂತು ಎಂದು ಖಚಿತವಾಗಿರಲಿಲ್ಲ ಎಂದು ಒಡಿಶಾ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. “ಅಂದಿನಿಂದ ಇದು ಒಡಿಶಾದ ರಾಯಗಡ ವಿಭಾಗ ಮತ್ತು ಆಂಧ್ರಪ್ರದೇಶದ ಮನ್ಯಂ ವಿಭಾಗದ ನಡುವೆ ಪರ್ಯಾಯವಾಗಿ ಸಂಚರಿಸುತ್ತಿತ್ತು. ಸೆಪ್ಟೆಂಬರ್‌ನಲ್ಲಿ ಗಜಪತಿ ಜಿಲ್ಲೆಯ ಪರ್ಲಾಖೆಮುಂಡಿ ಅರಣ್ಯ ವಿಭಾಗಕ್ಕೆ ಪ್ರವೇಶಿಸಿತು. ಈ ವೇಳೆ ಗ್ರಾಮಸ್ಥರು ಹುಲಿಯನ್ನು ನೋಡಿದ ಬಗ್ಗೆ ಮಾತನಾಡಲು ಪ್ರಾರಂಭಿಸಿದರು” ಎಂದು ಪರ್ಲಾಖೆಮುಂಡಿಯ ವಿಭಾಗೀಯ ಅರಣ್ಯಾಧಿಕಾರಿ ಆನಂದ್ ಎಸ್ ತಿಳಿಸಿದ್ದಾರೆ.

ಅಕ್ಟೋಬರ್ ತಿಂಗಳಲ್ಲಿ ಹುಲಿ ಹಸುವೊಂದನ್ನು ಎಳೆದುಕೊಂಡ ಪ್ರಕರಣ ವರದಿಯಾಗಿತ್ತು. ವಿಶೇಷ ಎಂದರೆ, ಕಳೆದ 30 ವರ್ಷದಲ್ಲಿ ಗಜಪತಿಯಲ್ಲಿ ಯಾವುದೇ ಹುಲಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ, ಹಸುವನ್ನು ಎಳೆದೊಯ್ದಿರುವುದು ಹುಲಿಯೇ ಅಥವಾ ಚಿರತೆಯೇ ಎಂಬ ಬಗ್ಗೆ ಅನುಮಾನಗಳಿದ್ದವು. ಆದರೆ, ಅರಣ್ಯಗಳಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳಿಂದಾಗಿ ಹುಲಿಯೇ ಎಂಬುದು ಖಚಿತವಾಯಿತು ಮತ್ತು ಒಟ್ಟು ಮೂರು ಬಾರಿ ಅದು ಕ್ಯಾಮೆರಾದಲ್ಲಿ ಸೆರೆ ಆಗಿತ್ತು ಎನ್ನುತ್ತಾರೆ ಅಧಿಕಾರಿಗಳು.

ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಚಿತ್ರವನ್ನು ಡೆಹ್ರಾಡೂನ್‌ನಲ್ಲಿರುವ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಡಬ್ಲ್ಯುಐಐ) ಗೆ ಮ್ಯಾಪಿಂಗ್‌ಗಾಗಿ ಕಳುಹಿಸಲಾಗಿತ್ತು. ವಿಶೇಷ ಎಂದರೆ, ಕ್ಯಾಮೆರಾದಲ್ಲಿ ಸೆರೆಯಾದ ಹುಲಿಯ ಚಿತ್ರವು ಮಹಾರಾಷ್ಟ್ರದ ಬ್ರಹ್ಮಪುರಿ ಅರಣ್ಯ ವಿಭಾಗದಲ್ಲಿ ಹಿಂದೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಹುಲಿಯೊಂದೆ ತಾಳೆಯಾಯಿತು. ಆಗ, ಎಲ್ಲವೂ ತಿಳಿಯಾಯಿತು. ಮಹಾರಾಷ್ಟ್ರದಿಂದ ಸುಮಾರು 2000 ಕಿ.ಮೀ ಕ್ರಮಿಸಿದ ಈ ಹುಲಿ ಒಡಿಶಾ ಅರಣ್ಯಕ್ಕೆ ಬಂದಿದೆ. ಬಹುಶಃ ತನಗಾಗಿಯೇ ಸೂಕ್ತವಾದ ವಾಸಸ್ಥಾನ ಮತ್ತು ಸಂಗಾತಿಗಾಗಿ ವಲಸೆ ಬಂದಿರಬಹುದು ಎಂದು ತಜ್ಞರು ಹೇಳುತ್ತಾರೆ.

ಒಡಿಶಾವನ್ನು ತಲುಪವ ಮೊದಲು ಈ ಬೆಂಗಾಲ್ ಟೈಗರ್ ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳನ್ನು ದಾಟಿ ಬಂದಿದೆ. ಕಳೆದ ಒಂದು ತಿಂಗಳಲ್ಲಿ ಈ ಹುಲಿ ಸುಮಾರು 500 ಕಿ.ಮೀ. ಸಂಚರಿಸಿದೆ. ಈ ಹುಲಿ ಪರ್ಲಖೆಮುಂಡಿಯಿಂದ ಶ್ರೀಕಾಕುಲಂಗೆ, ನಂತರ ಇಚ್ಛಾಪುರಕ್ಕೆ ಮತ್ತು ಅಂತಿಮವಾಗಿ ಪರ್ಲಾಖೆಮುಂಡಿಗೆ ಹಿಂತಿರುಗಿದೆ. ಬಹುಶಃ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಾರಾಷ್ಟ್ರದಿಂದ ಒಡಿಶಾಗೆ ಹುಲಿಯೊಂದು ವಲಸೆ ಬಂದಿದೆ ಎನ್ನುತ್ತಾರೆ ಅಧಿಕಾರಿಗಳು.

2019 ರಲ್ಲಿ ಮಹಾರಾಷ್ಟ್ರದ ವನ್ಯಜೀವಿ ಅಧಿಕಾರಿಗಳು ಮಹಾರಾಷ್ಟ್ರದ ತಿಪೇಶ್ವರ ವನ್ಯಜೀವಿ ಅಭಯಾರಣ್ಯದಿಂದ TWLS-T1-C1 ಎಂಬ ಹುಲಿಯನ್ನು ಅದರ ಪ್ರಸರಣವನ್ನು ಪತ್ತೆಹಚ್ಚಲು ರೇಡಿಯೊ ಕಾಲರ್ ಬಳಸಿದ್ದರು. ಮುಂದಿನ 13 ತಿಂಗಳುಗಳಲ್ಲಿ ಈ ಹುಲಿ 3,017 ಕಿ.ಮೀ ಸಂಚರಿಸಿತ್ತು. ಸೂಕ್ತ ವಾಸಸ್ಥಾನ ಮತ್ತು ಸಂಗಾತಿಯ ಹುಡುಕಾಟದಲ್ಲಿ ದೇಶದ ಯಾವುದೇ ಹುಲಿ ಕ್ರಮಿಸಿರುವ ಅತಿ ದೂರದ ಪಯಣ ಇದಾಗಿದೆ.

ಈ ಸುದ್ದಿಯನ್ನೂ ಓದಿ: Tiger Attack: ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಗೆ ಮತ್ತೊಬ್ಬರ ಬಲಿ

Exit mobile version