ಮುಂಬೈ: ಜೈಪುರದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ಸೋಮವಾರ ಬೆಳಗಿನ ಜಾವ 5 ಗಂಟೆಗೆ ರೈಲ್ವೆ ರಕ್ಷಣಾ ಪಡೆಯ (RPF) ಪೇದೆಯು ತನ್ನ ಹಿರಿಯ ಅಧಿಕಾರಿ, ಎಎಸ್‌ಐ ಟೀಕಾ ಶರ್ಮಾ (Tika Sharma) ಎಂಬುವರು ಸೇರಿ ನಾಲ್ವರ ಮೇಲೆ ಗುಂಡಿನ ದಾಳಿ (RPF FIring) ನಡೆಸಿರುವುದಕ್ಕೆ ಹೊಸ ತಿರುವು ಸಿಕ್ಕಿದೆ. ಇತ್ತೀಚೆಗೆ ಆರ್‌ಪಿಎಫ್ ಪೇದೆಯನ್ನು ಗುಜರಾತ್‌ನಿಂದ ಮುಂಬೈಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಕುಪಿತಗೊಂಡು ಎಎಸ್‌ಐ ಮೇಲೆ ಮೊದಲು ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ ಪೇದೆ ಚೇತನ್ ಸಿಂಗ್‌ನನ್ನು ಗುಜರಾತ್‌ನಿಂದ ಮುಂಬೈಗೆ ವರ್ಗಾವಣೆ ಮಾಡಲಾಗಿತ್ತು. ಕೌಟುಂಬಿಕ ಸಮಸ್ಯೆಗಳೂ ಇದ್ದ ಕಾರಣ ಚೇತನ್ ಸಿಂಗ್, ಗುಜರಾತ್‌ನಿಂದ ಮುಂಬೈಗೆ ತೆರಳಲು ಇಷ್ಟವಿರಲಿಲ್ಲ. ಇದರಿಂದ ಆತನ ಮಾನಸಿಕವಾಗಿ ನೊಂದಿದ್ದ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಹಿರಿಯ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದ. ಆದರೂ, ಆತ ಗುಜರಾತ್‌ಗೆ ತೆರಳಲೇಬೇಕಿತ್ತು. ಇದು ಆತನ ಮಾನಸಿಕ ಸ್ಥಿಮಿತವನ್ನು ಕದಡಿತ್ತು ಎಂದು ಮೂಲಗಳು ತಿಳಿಸಿವೆ.
ಹಾಗಾಗಿ, ಸೋಮವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಜೈಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಚೇತನ್ ಸಿಂಗ್ ಹಾಗೂ ಟೀಕಾ ಶರ್ಮಾ ಮಧ್ಯೆ ವಾಗ್ವಾದ ಶುರುವಾಗಿದೆ. ಇಬ್ಬರ ನಡುವಿನ ವಾಗ್ವಾದವು ಅತಿರೇಕ ತಲುಪಿದಾಗ, ಚೇತನ್ ಸಿಂಗ್ ಗನ್ ತೆಗೆದು ಎಎಸ್‌ಐಗೆ ಗುಂಡು ಹಾರಿಸಿದ್ದಾನೆ. ಕೋಪದಿಂದ ಕುದಿಯುತ್ತಿದ್ದ ಆತ ಪ್ರಯಾಣಿಕರ ಮೇಲೂ ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ. 30 ವರ್ಷದ ಚೇತನ್ ಸಿಂಗ್, ಉತ್ತರ ಪ್ರದೇಶದವನಾಗಿದ್ದು, ಮೊದಲಿನಿಂದಲೂ ಸಣ್ಣ ಸಣ್ಣ ವಿಷಯಗಳಿಗೂ ಜಗಳವಾಡುವ, ಕೋಪ ಮಾಡಿಕೊಳ್ಳುವ ಸ್ವಭಾವದವನಾಗಿದ್ದ ಎಂದು ತಿಳಿದುಬಂದಿದೆ.
ರಜೆಯಿಂದ ಮರಳಿದ್ದ ಚೇತನ್ ಸಿಂಗ್
“ಕೆಲ ದಿನಗಳ ಹಿಂದೆ ರಜೆ ತೆಗೆದುಕೊಂಡಿದ್ದ ಚೇತನ್ ಸಿಂಗ್, ಆಗಷ್ಟೇ ಕೆಲಸಕ್ಕೆ ಹಾಜರಾಗಿದ್ದರು” ಎಂದು ಪಶ್ಚಿಮ ರೈಲ್ವೆ ಐಜಿ ಪಿ.ಸಿ. ಸಿನ್ಹಾ ತಿಳಿಸಿದ್ದಾರೆ. “ಪ್ರಾಥಮಿಕ ತನಿಖೆ ಬಳಿಕ ಅವರು ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದರು. ರಜೆ ಮುಗಿಸಿ ಬಂದಾಗಲೂ ಅವರು ಮಾನಸಿಕವಾಗಿ ಉಲ್ಲಸಿತರಾಗಿರಲಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: RPF Firing: ಚಲಿಸುತ್ತಿದ್ದ ರೈಲಿನಲ್ಲಿ ಗುಂಡಿನ ದಾಳಿ ನಡೆಸಿದ ಪೇದೆ; ಎಎಸ್‌ಐ ಸೇರಿ ನಾಲ್ವರ ಸಾವು
ವಾಪಿ ರೈಲು ನಿಲ್ದಾಣ ಹಾಗೂ ಬೋರಿವಲಿ ರೈಲು ನಿಲ್ದಾಣದ ಮಧ್ಯೆ ರೈಲು ಸಂಚರಿಸುತ್ತಿದ್ದಾಗ ಘಟನೆ ನಡೆದಿದೆ. ಚೇತನ ಸಿಂಗ್ ಸುಮಾರು 12 ಸುತ್ತು ಗುಂಡು ಹಾರಿಸಿದ್ದಾನೆ. ಆದಾಗ್ಯೂ, ಪೇದೆಯ ವರ್ಗಾವಣೆಗೆ ಎಎಸ್‌ಐ ಕಾರಣವೇ ಎಂಬ ಕುರಿತು ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ. ಗುಂಡಿನ ದಾಳಿ ಬಳಿಕ ಪರಾರಿಯಾಗಿದ್ದ ಚೇತನ್ ಸಿಂಗ್‌ನನ್ನು ಬಂಧಿಸಲಾಗಿದೆ. ಎಎಸ್‌ಐ ಸೇರಿ ನಾಲ್ವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.