ನವದೆಹಲಿ: ಫೆಬ್ರವರಿ 27ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ (Rajya Sabha Election) ಭಾರತೀಯ ಜನತಾ ಪಾರ್ಟಿಯು (BJP Party) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ (Karnataka) ಹೊಸ ಮುಖಕ್ಕೆ ಆದ್ಯತೆ ನೀಡಿದಂತೆ, ಹೊರ ರಾಜ್ಯಗಳಲ್ಲೂ ಅದೇ ಪ್ರಯೋಗವನ್ನು ಮಾಡಿ, ಅಚ್ಚರಿ ಮೂಡಿಸಿದೆ. ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರ ಮಾಡಿರುವ ಆರ್‌ಪಿಎನ್ ಸಿಂಗ್ (RPN Singh) ಅವರನ್ನು ಉತ್ತರ ಪ್ರದೇಶದಿಂದ ಕಣಕ್ಕಿಳಿಸಲಾಗುತ್ತಿದೆ. ಒಟ್ಟು ಉತ್ತರ ಪ್ರದೇಶದಿಂದ 10 ಅಭ್ಯರ್ಥಿಗಳನ್ನು ರಾಜ್ಯ ಸಭೆಗೆ ಕಳುಹಿಸಲು ಅವಕಾಶವಿದ್ದು, ಈ ಪೈಕಿ 7 ಸ್ಥಾನಗಳನ್ನು ಬಿಜೆಪಿ ಪಡೆಯುವ ಸಾಧ್ಯತೆ ಇದೆ.
ಉತ್ತರ ಪ್ರದೇಶದಿಂದ ಆರ್‌ಪಿಎನ್ ಸಿಂಗ್ ಮಾತ್ರವಲ್ಲದೇ, ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ, ಚೌಧರಿ ತೇಜ್ವೀರ್ ಸಿಂಗ್, ಸಾಧನಾ ಸಿಂಗ್, ಅಮರ್ ಪಾಲ್ ಮೌರ್ಯ, ಸಂಗೀತಾ ಬಲ್ವಂತ್ ಮ್ತತು ನವೀನ್ ಜೈನ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗುತ್ತಿದೆ. ಅಭ್ಯರ್ಥಿಗಳ ಆಯ್ಕೆ ವೇಳೆ ಜಾತಿ ಸಮೀಕರಣವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಕುರ್ಮಿ, ಬ್ರಾಹ್ಮಣ, ನಿಶಾದ್, ಜೈನ್, ರಜಪೂತ್, ಮೌರ್ಯ ಮತ್ತು ಜಾಟ್ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ.
भाजपा की केंद्रीय चुनाव समिति ने विभिन्न राज्यों में होने वाले आगामी राज्यसभा के द्विवार्षिक चुनाव हेतु निम्नलिखित नामों पर अपनी स्वीकृति प्रदान की। pic.twitter.com/9MBlj1KxA2
— BJP (@BJP4India) February 11, 2024
ಕೇಂದ್ರ ಸಚಿವರಿಗೆ ಇಲ್ಲ ಟಿಕೆಟ್
ವಿಶೇಷ ಎಂದರೆ, ರಾಜ್ಯಸಭೆಯಿಂದ ನಿವೃತ್ತರಾಗಲಿರುವ ಯಾವುದೇ ಕೇಂದ್ರ ಸಚಿವರಿಗೆ ಬಿಜೆಪಿ ರಾಜ್ಯಸಭೆಗೆ ಮರಳಿ ಆಯ್ಕೆ ಮಾಡುತ್ತಿಲ್ಲ. ಕೇಂದ್ರ ಸಚಿವರಾಗಿ ಕೆಲಸ ಮಾಡಿರುವ ಅವರು ಮುಂಬರುವ ಲೋಕಸಭೆಯಲ್ಲಿ ಸ್ಪರ್ಧಿಸಿ ಗೆಲ್ಲುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಆರು ಸ್ಥಾನಗಳನ್ನು ಹೊಂದಿರುವ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಜೊತೆ ಮತ್ತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ, ಧರ್ಮಶೀಲಾ ಗುಪ್ತಾ ಮತ್ತು ಭೀಮ್ ಸಿಂಗ್ ಹೆಸರನ್ನು ನೀಡಿದೆ. ಈ ಪಟ್ಟಿಯಲ್ಲಿ ಸುಶೀಲ್ ಕುಮಾರ್ ಮೋದಿ ಅವರ ಹೆಸರು ಕಾಣೆಯಾಗಿದೆ. ನಾಮನಿರ್ದೇಶನಗೊಂಡ ಇಬ್ಬರು ಬಿಹಾರ ನಾಯಕರನ್ನು ಮೋದಿ ಅಭಿನಂದಿಸಿದ್ದಾರೆ. ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ಗೆ ಆಘಾತಕಾರಿ ಸೋಲು ನೀಡಿದ್ದು, ಅದು ರಾಜಾ ದೇವೇಂದ್ರ ಪ್ರತಾಪ್ ಸಿಂಗ್ ಅವರಿಗೆ ಮಣೆ ಹಾಕಿದೆ.
ಹರಿಯಾಣದಲ್ಲಿ ಪಕ್ಷವು ತನ್ನ ಮಾಜಿ ರಾಜ್ಯ ಮುಖ್ಯಸ್ಥ ಸುಭಾಷ್ ಬರಾಲಾ ಅವರನ್ನು ಕಣಕ್ಕಿಳಿಸುತ್ತದೆ; ಕರ್ನಾಟಕದಲ್ಲಿ ಅದು ನಾರಾಯಣ ಕೃಷ್ಣಾಸ ಭಾಂಡಗೆ ಟಿಕೆಟ್ ನೀಡಿದೆ. ಉತ್ತರಾಖಂಡದಲ್ಲಿ ಬಿಜೆಪಿ ಮಹೇಂದ್ರ ಭಟ್ ಅವರನ್ನು ಕಣಕ್ಕಿಳಿಸಿದರೆ, ಪಶ್ಚಿಮ ಬಂಗಾಳದಲ್ಲಿ ಪಕ್ಷವು ಸಮಿಕ್ ಭಟ್ಟಾಚಾರ್ಯ ಅವರಿಗೆ ಟಿಕೆಟ್ ನೀಡಿದೆ.
ಮೇ ಮೊದಲ ವಾರದಲ್ಲಿ 58 ಸದಸ್ಯರು ನಿವೃತ್ತಿ
ಎಂಟು ಕೇಂದ್ರ ಸಚಿವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಸೇರಿದಂತೆ 58 ರಾಜ್ಯಸಭಾ ಸದಸ್ಯರು ಮೇ ಮೊದಲ ವಾರದ ವೇಳೆಗೆ ನಿವೃತ್ತರಾಗಲಿದ್ದಾರೆ. ಬಿಜೆಪಿಯಿಂದ 28, ಕಾಂಗ್ರೆಸ್‌ನಿಂದ 11, ತೃಣಮೂಲ ಕಾಂಗ್ರೆಸ್‌ನಿಂದ ನಾಲ್ವರು, ಭಾರತ್ ರಾಷ್ಟ್ರ ಸಮಿತಿಯಿಂದ ನಾಲ್ವರು, ಬಿಜು ಜನತಾ ದಳ, ರಾಷ್ಟ್ರೀಯ ಜನತಾ ದಳ ಮತ್ತು ಜನತಾ ದಳ (ಯುನೈಟೆಡ್)ದಿಂದ ತಲಾ ಇಬ್ಬರು ಮತ್ತು ವೈಎಸ್‌ಆರ್‌ಸಿಪಿ, ಎನ್‌ಸಿಪಿ, ತೆಲುಗು ದೇಶಂ ಪಕ್ಷ, ಮತ್ತು ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್, ಶಿವಸೇನೆಯಿಂದ ತಲಾ ಒಬ್ಬರು ನಿವೃತ್ತರಾಗುವವರಲ್ಲಿ ಸೇರಿದ್ದಾರೆ.
ಈ ಸುದ್ದಿಯನ್ನೂ ಓದಿ: Rajya Sabha Ticket: ನಾರಾಯಣಸಾ ಭಾಂಡಗೆ ಬಿಜೆಪಿ ರಾಜ್ಯಸಭಾ ಅಭ್ಯರ್ಥಿ; ಸೋಮಣ್ಣ ಲಾಬಿಗೆ ಮಣಿಯದ ಹೈಕಮಾಂಡ್!