Site icon Vistara News

Rs 2000 Notes: 2 ಸಾವಿರ ರೂ. ನೋಟು ವಾಪಸ್‌ಗೆ ನಾಳೆ ಕೊನೇ ದಿನ; ನೋಟು ‘ಹುತಾತ್ಮ’ ಆಗುವ ಮೊದಲು ಬದಲಿಸಿ!

Rs 2000 Notes

Rs 2,000 Notes: Exchange Deadline is tomorrow, Exchange Right Now

ನವದೆಹಲಿ: ಭಾನುವಾರದಿಂದ (ಅಕ್ಟೋಬರ್‌ 8) 2 ಸಾವಿರ ರೂಪಾಯಿ (Rs 2000 Notes) ಮೌಲ್ಯದ ನೋಟುಗಳು ಅಮಾನ್ಯಗೊಳ್ಳಲಿವೆ. ಜನರ ಬಳಿ ಇರುವ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲು, ಖಾತೆಗೆ ಜಮೆ ಮಾಡಿಸಿಕೊಳ್ಳಲು ಅಕ್ಟೋಬರ್‌ 7 ಕೊನೆಯ ದಿನವಾಗಿದೆ. ಹಾಗಾಗಿ, ಶನಿವಾರ ನೋಟು ಬದಲಿಸಿಕೊಳ್ಳದಿದ್ದರೆ ಭಾನುವಾರದಿಂದ ಅದು ರದ್ದಿ ಪೇಪರ್‌ ಎನಿಸಲಿದೆ.

ಮೇ 19ರಂದು ಆರ್‌ಬಿಐ ಹೊರಡಿಸಿದ ಆದೇಶದ ಪ್ರಕಾರ ನೋಟುಗಳನ್ನು ಹಿಂತಿರುಗಿಸಲು ಸೆಪ್ಟೆಂಬರ್‌ 30 ಕೊನೆಯ ದಿನವಾಗಿತ್ತು. ಅದರಂತೆ, ಜನರು ಕೂಡ ಬ್ಯಾಂಕ್‌ಗಳಿಗೆ ತೆರಳಿ ನೋಟು ವಾಪಸ್‌ ನೀಡಿದ್ದರು. ಬ್ಯಾಂಕ್ ಖಾತೆಗಳಿಗೆ ಠೇವಣಿ ಮಾಡಿಸಿಕೊಂಡಿದ್ದರು. ಆದರೆ, ಎಲ್ಲ ನೋಟುಗಳು ಹಿಂತಿರುಗದ ಕಾರಣ ಅಕ್ಟೋಬರ್‌ 7ರವರೆಗೆ ಗಡುವು ವಿಸ್ತರಣೆ ಮಾಡಲಾಗಿತ್ತು.

ವಾಪಸಾಗದ 12 ಸಾವಿರ ಕೋಟಿ ರೂ.

2 ಸಾವಿರ ರೂ. ಮೌಲ್ಯದ ಎಲ್ಲ ನೋಟುಗಳು ವಾಪಸಾಗದ ಕಾರಣ ಗಡುವು ವಿಸ್ತರಣೆ ಮಾಡಿದರೂ, ಇನ್ನೂ 12 ಸಾವಿರ ಕೋಟಿ ರೂ. ಮೌಲ್ಯದ ನೋಟುಗಳು ವಾಪಸ್‌ ಆಗಿಲ್ಲ ಎಂದು ಆರ್‌ಬಿಐ ತಿಳಿಸಿದೆ. 2 ಸಾವಿರ ರೂ. ಮುಖಬೆಲೆಯ 3.56 ಲಕ್ಷ ಕೋಟಿ ರೂ.ನಲ್ಲಿ ಶೇ.96ರಷ್ಟು ಅಂದರೆ ಇದುವರೆಗೆ 3.44 ಲಕ್ಷ ಕೋಟಿ ರೂ. ವಾಪಸಾಗಿದೆ. ಇನ್ನೂ 12 ಸಾವಿರ ಕೋಟಿ ರೂ. ಮೌಲ್ಯದ ನೋಟುಗಳು ವಾಪಸ್‌ ಆಗಿಲ್ಲ ಎಂದು ತಿಳಿಸಿದೆ. ಅಕ್ಟೋಬರ್‌ 7ರ ನಂತರ 2 ಸಾವಿರ ರೂ. ಮೌಲ್ಯದ ನೋಟುಗಳನ್ನು ಇಟ್ಟುಕೊಳ್ಳುವುದು ಕಾನೂನುಬಾಹಿರ ಎನಿಸದಿದ್ದರೂ ಅವು ಚಲಾವಣೆಯಲ್ಲಿ ಇರುವುದಿಲ್ಲ.

ಇದನ್ನೂ ಓದಿ: Currency Notes : ಈ ಮಾರ್ಕ್‌ ಇರುವ ಕರೆನ್ಸಿ ನೋಟುಗಳು ನಕಲಿ ಅಲ್ಲ: ಆರ್‌ಬಿಐ

ಆರ್‌ಬಿಐ ಕಾಯ್ದೆಯ ಸೆಕ್ಷನ್‌ 24 (1)ರ ಪ್ರಕಾರ ದೇಶದಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಈ ಕುರಿತು ಕೇಂದ್ರ ಸರ್ಕಾರವು ಕಳೆದ ಮೇ 19ರಂದು ಆದೇಶ ಹೊರಡಿಸಿದೆ. 2018-19ನೇ ಸಾಲಿನಲ್ಲಿಯೇ 2 ಸಾವಿರ ರೂ. ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ. ಇದುವರೆಗೆ ಬ್ಯಾಂಕುಗಳಿಗೆ ಗ್ರಾಹಕರು ನೀಡಿದ ನೋಟುಗಳನ್ನು ಸಂಗ್ರಹಿಸಲಾಗುತ್ತಿತ್ತು. ಇನ್ನು ಮುಂದೆ ಚಲಾವಣೆಯೂ ರದ್ದಾಗಲಿದೆ. ಕ್ಲೀನ್‌ ನೋಟ್‌ ಪಾಲಿಸಿ (Clean Note Policy) ಅನ್ವಯ, ಅಂದರೆ, ಜನರಿಗೆ ಗುಣಮಟ್ಟದ ನೋಟುಗಳನ್ನು ನೀಡುವ ದೃಷ್ಟಿಯಿಂದ 2 ಸಾವಿರ ರೂ. ನೋಟುಗಳನ್ನು ಹಿಂತೆಗೆಯಲು ತೀರ್ಮಾನಿಸಲಾಗಿದೆ.

Exit mobile version