Site icon Vistara News

Mohan Bhagwat: ಆರ್‌ಎಸ್‌ಎಸ್‌ ಮೀಸಲಾತಿ ಪರ; ಮೋಹನ್‌ ಭಾಗವತ್‌ ದಿಢೀರನೆ ಹೀಗೆ ಹೇಳಿದ್ದೇಕೆ?

Mohan Bhagwat

'RSS backs reservations': Mohan Bhagwat amid BJP vs Congress poll battle over quota row

ಹೈದರಾಬಾದ್: ಕರ್ನಾಟಕದಲ್ಲಿ ಇತರೆ ಹಿಂದುಳಿದ ವರ್ಗಗಳ (OBC) ಮೀಸಲಾತಿಯನ್ನು ರಾಜ್ಯ ಸರ್ಕಾರವು ಮುಸ್ಲಿಮರಿಗೆ ನೀಡಿರುವುದು ದೇಶ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದು ಲೋಕಸಭೆ ಚುನಾವಣೆಯ (Lok Sabha Election 2024) ಪ್ರಮುಖ ಚರ್ಚೆಯ ವಿಷಯವಾಗಿದೆ. ಮೀಸಲಾತಿ ಕುರಿತು ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ಮಧ್ಯೆ ತೀವ್ರ ವಾಗ್ವಾದ ನಡೆಯುತ್ತಿದೆ. ಇದರ ಬೆನ್ನಲ್ಲೇ, “ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ಮೀಸಲಾತಿಯನ್ನು (Reservation) ಬೆಂಬಲಿಸುತ್ತದೆ” ಎಂಬುದಾಗಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಆರ್‌ಎಸ್‌ಎಸ್‌ ಮೀಸಲಾತಿಯನ್ನು ವಿರೋಧಿಸುತ್ತದೆ ಎಂದು ಹೇಳಿರುವ ವಿಡಿಯೊ ಹರಿದಾಡುತ್ತಿದೆ. ಆದರೆ, ಸಂಘ ಪರಿವಾರವು ಮೊದಲಿನಿಂದಲೂ ಮೀಸಲಾತಿಯನ್ನು ಬೆಂಬಲಿಸುತ್ತಲೇ ಬಂದಿದೆ. ಮುಂದಿನ ದಿನಗಳಲ್ಲೂ ಆರ್‌ಎಸ್‌ಎಸ್‌ ಮೀಸಲಾತಿಯನ್ನು ಬೆಂಬಲಿಸುತ್ತದೆ. ಸಮುದಾಯಗಳಿಗೆ ಎಲ್ಲಿಯವರೆಗೆ ಮೀಸಲಾತಿಯ ಅವಶ್ಯಕತೆ ಇದೆಯೋ, ಅಲ್ಲಿಯವರೆಗೆ ಮೀಸಲಾತಿಯನ್ನು ಮುಂದುವರಿಸಬೇಕು” ಎಂದು ಹೇಳಿದ್ದಾರೆ.

“ಆರ್‌ಎಸ್‌ಎಸ್‌ ಕುರಿತು ಜನರಿಗೆ ತಪ್ಪು ಕಲ್ಪನೆಗಳಿವೆ. ಆರ್‌ಎಸ್‌ಎಸ್‌ ಮೀಸಲಾತಿಯನ್ನು ವಿರೋಧಿಸುತ್ತದೆ. ಆದರೆ, ಹೊರಗಡೆ ಆ ಕುರಿತು ಹೇಳುವುದಿಲ್ಲ ಅಷ್ಟೆ ಎಂಬಂತೆ ಬಿಂಬಿಸಲಾಗುತ್ತಿದೆ. ಸಾಂವಿಧಾನಿಕವಾಗಿ ನೀಡಲಾಗಿರುವ ಮೀಸಲಾತಿಯನ್ನು ನಾವು ಬೆಂಬಲಿಸುತ್ತೇವೆ. ಇದರಿಂದ ಸಮುದಾಯಗಳಿಗೆ ಅಗತ್ಯ ಸೌಕರ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ, ಯಾರೂ ಆರ್‌ಎಸ್‌ಎಸ್‌ ಕುರಿತು ತಪ್ಪು ಮಾಹಿತಿಯನ್ನು ಹರಡಬಾರದು” ಎಂಬುದಾಗಿ ಮೋಹನ್‌ ಭಾಗವತ್‌ ಮನವಿ ಮಾಡಿದರು.

ಕೆಲ ದಿನಗಳ ಹಿಂದಷ್ಟೇ ರಾಹುಲ್‌ ಗಾಂಧಿ ಅವರು ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. “ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ದೇಶದ ವೈವಿಧ್ಯತೆಯನ್ನು ಹಾಳು ಮಾಡುತ್ತವೆ. ಸಂವಿಧಾನವನ್ನು ಬದಲಾಯಿಸುವುದು ಬಿಜೆಪಿಯ ಕುತಂತ್ರವಾಗಿದೆ. ಜನ ಧರ್ಮ, ಸಮುದಾಯಗಳ ಆಚರಣೆಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವ ಮೂಲಕ ಸಮಾಜದಲ್ಲಿ ಸಂಘರ್ಷ ಉಂಟುಮಾಡಿದೆ” ಎಂದು ವಯನಾಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: Lok Sabha Election 2024 ಮುಸ್ಲಿಮರಿಗೆ ಒಬಿಸಿ ಮೀಸಲಾತಿ ಸತ್ಯ; ನಮ್ಮ ಬಳಿ ದಾಖಲೆ ಇದೆ ಎಂದ ಪ್ರಲ್ಹಾದ್‌ ಜೋಶಿ

Exit mobile version