Site icon Vistara News

LGBTQ ಸಮುದಾಯದ ಖಾಸಗಿತನ ಗೌರವಿಸಿ: ಮೋಹನ್‌ ಭಾಗವತ್‌

Mohan Bhagwat

Destructive forces attack on cultural Marxists: RSS Chief Mohan Bhagwat

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು, LGBTQ ಸಮುದಾಯಕ್ಕೆ ಅದರದೇ ಖಾಸಗಿತನವಿದ್ದು, ನಾವು ಅದನ್ನು ಗೌರವಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.

ಅವರ ಈ ಮಾತುಗಳು ಆರೆಸ್ಸೆಸ್‌ ಮುಖವಾಣಿ ʼಆರ್ಗನೈಸರ್‌ʼ ಹಾಗೂ ʼಪಾಂಚಜನ್ಯʼ ಪತ್ರಿಕೆಗಳಿಗೆ ಅವರು ನೀಡಿರುವ ಸಂದರ್ಶನದಲ್ಲಿ ಪ್ರಕಟವಾಗಿದೆ. LGBTQ ಎಂದರೆ ಸಲಿಂಗಕಾಮಿ, ಉಭಯಲಿಂಗಿ, ಲಿಂಗಪರಿವರ್ತಿತ ಸಮುದಾಯವಾಗಿದೆ.

ಇಂಥ ನಿರ್ದಿಷ್ಟ ಪ್ರವೃತ್ತಿಯ ಜನ ಮಾನವ ಜನಾಂಗ ಅಸ್ತಿತ್ವದಲ್ಲಿರುವ ಕಾಲದಿಂದಲೂ ಇದ್ದಾರೆ. ಇದು ಜೈವಿಕ ಗುಣಸ್ವಭಾವ ಹಾಗೂ ಬದುಕಿನ ರೀತಿಯಾಗಿದೆ. ಅವರು ಅವರದೇ ಆದ ಖಾಸಗಿತನವನ್ನು ಹೊಂದಿದ್ದಾರೆ. ತಾವು ಈ ಸಮಾಜದ ಭಾಗ ಎಂಬ ಭಾವ ಅವರಲ್ಲೂ ಉಳಿಯುವಂತೆ ನಾವು ನೋಡಿಕೊಳ್ಳಬೇಕು. ಇದು ಇಷ್ಟೇ ಸರಳ ವಿಚಾರ. ಈ ದೃಷ್ಟಿಕೋನವನ್ನು ನಾವು ಪೋಷಿಸಬೇಕು, ಯಾಕೆಂದರೆ ಬೇರೆ ಯಾವುದೇ ಪರಿಹಾರ ವಿಧಾನ ವ್ಯರ್ಥ ಎಂದು ಮೋಹನ್‌ ಭಾಗವತ್‌ ನುಡಿದಿದ್ದಾರೆ.

ಹಿಂದೂ ಸಮಾಜ ಸಾವಿರ ವರ್ಷಗಳಿಂದಲೂ ಯುದ್ಧದಲ್ಲಿ ತೊಡಗಿದೆ. ವಿದೇಶಿ ಆಕ್ರಮಣಗಳು, ವಿದೇಶಿ ಪ್ರಭಾವಗಳು, ವಿದೇಶಿ ಸಂಚುಗಳನ್ನು ನಾವು 1000 ವರ್ಷಗಳಿಂದಲೂ ಎದುರಿಸುತ್ತಿದ್ದೇವೆ. ಇದನ್ನು ಪ್ರತಿಭಟಿಸಿ ಮಾತನಾಡಿದ ಬಹಳ ಜನ ಇದ್ದಾರೆ. ಹೀಗಾಗಿ ಇಂದು ಹಿಂದೂ ಸಮಾಜ ಎಚ್ಚೆತ್ತುಕೊಂಡಿದೆ. ಯುದ್ಧದಲ್ಲಿ ತೊಡಗಬೇಕಾಗಿ ಬರುವವರು ಆಕ್ರಮಣಕಾರಿಯಾಗಿ ಮಾತಾಡುವುದು ಸ್ವಾಭಾವಿಕ ಎಂದು ಅವರು ಹೇಳಿದ್ದಾರೆ.

ಹಿಂದೂ ಎಂಬುದು ನಮ್ಮ ಗುರುತು. ಅದು ನಮ್ಮ ರಾಷ್ಟ್ರೀಯತೆ, ನಮ್ಮ ನಾಗರಿಕತೆಯ ಲಕ್ಷಣ. ಪ್ರತಿಯೊಬ್ಬರನ್ನೂ ನಮ್ಮವರೆಂದು ಪರಿಗಣಿಸುವ ಲಕ್ಷಣವದು. ಅದು ಎಲ್ಲರನ್ನೂ ಜತೆಗೆ ಕರೆದೊಯ್ಯುತ್ತದೆ. ನನ್ನದು ಮಾತ್ರ ನಿಜ ಮತ್ತು ನಿಮ್ಮದು ಸುಳ್ಳು ನಾವು ಎಂದಿಗೂ ಹೇಳುವುದಿಲ್ಲ. ನೀವು ನಿಮ್ಮ ನಂಬಿಕೆ ಹೊಂದಿರಿ, ನಾನು ನನ್ನದನ್ನು ಹೊಂದಿರುತ್ತೇನೆ. ಏಕೆ ಹೋರಾಡಬೇಕು? ನಾವು ಒಟ್ಟಾಗಿ ಸಾಗೋಣ ಎಂಬುದೇ ಹಿಂದುತ್ವ ಎಂದು ಭಾಗವತ್ ಹೇಳಿದರು.

ಇದನ್ನೂ ಓದಿ | Same-Sex Marriage | ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಏಕಿಲ್ಲ? ಕೇಂದ್ರಕ್ಕೆ ಸುಪ್ರೀಂ ನೋಟಿಸ್

ಸರಳ ಸತ್ಯವೆಂದರೆ ಇದು ಹಿಂದೂಸ್ಥಾನವಾಗಿ ಉಳಿಯಬೇಕು. ಇಂದು ಭಾರತದಲ್ಲಿ ವಾಸಿಸುವ ಮುಸ್ಲಿಮರಿಗೆ ಯಾವುದೇ ಹಾನಿ ಇಲ್ಲ. ಇಸ್ಲಾಂ ಭಯ ಪಡಬೇಕಾಗಿಲ್ಲ. ಆದರೆ ಅದೇ ಸಮಯದಲ್ಲಿ, ಮುಸ್ಲಿಮರು ತಮ್ಮ ಅಬ್ಬರದ ಮಾತುಗಳನ್ನು ತ್ಯಜಿಸಬೇಕು. ʼತಾವು ಉತ್ಕೃಷ್ಟ ಜನಾಂಗ, ನಾವು ಈ ಭೂಮಿಯನ್ನು ಆಳಿದ್ದೇವೆ, ಮತ್ತೆ ಆಳುತ್ತೇವೆ, ನಮ್ಮ ಮಾರ್ಗ ಮಾತ್ರ ಸರಿ, ಉಳಿದವರೆಲ್ಲರೂ ತಪ್ಪು, ನಾವು ಹಾಗೇ ಮುಂದುವರಿಯುತ್ತೇವೆ, ನಾವು ಒಟ್ಟಿಗೆ ಬದುಕಲು ಸಾಧ್ಯವಿಲ್ಲʼ- ಈ ಭಾವನೆಯನ್ನು ಬಿಟ್ಟುಬಿಡಿ. ವಾಸ್ತವವಾಗಿ ಇಲ್ಲಿ ವಾಸಿಸುವ ಎಲ್ಲರೂ- ಹಿಂದೂ ಅಥವಾ ಕಮ್ಯುನಿಸ್ಟರು- ಈ ತರ್ಕವನ್ನು ಬಿಟ್ಟುಬಿಡಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದರು.

ಸಂಘವು ಪ್ರಜ್ಞಾಪೂರ್ವಕವಾಗಿ ದಿನನಿತ್ಯದ ರಾಜಕೀಯದಿಂದ ದೂರ ಉಳಿದಿದೆ. ಆದರೆ ಯಾವಾಗಲೂ ನಮ್ಮ ರಾಷ್ಟ್ರೀಯ ನೀತಿಗಳು, ರಾಷ್ಟ್ರೀಯ ಹಿತಾಸಕ್ತಿ ಮತ್ತು ಹಿಂದೂ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ಮೊದಲು ನಮ್ಮ ಸ್ವಯಂಸೇವಕರು ರಾಜಕೀಯ ಅಧಿಕಾರದ ಸ್ಥಾನಗಳಲ್ಲಿ ಇರಲಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಇದೊಂದೇ ಸೇರ್ಪಡೆ. ಆದರೆ ರಾಜಕೀಯ ಪಕ್ಷದ ಮೂಲಕ ಕೆಲವು ರಾಜಕೀಯ ಸ್ಥಾನಗಳನ್ನು ತಲುಪಿದವರು ಸ್ವಯಂ ಸೇವಕರು ಎಂಬುದನ್ನು ಜನರು ಮರೆತುಬಿಡುತ್ತಾರೆ. ಸಂಘವು ಸಂಘಟನೆಯನ್ನು ಮುಂದುವರಿಸಿದೆ. ಸಮಾಜಕ್ಕಾಗಿ ಸಂಘಟನೆಯಿದೆ. ಆದರೆ ಸ್ವಯಂಸೇವಕರು ರಾಜಕೀಯದಲ್ಲಿ ಏನು ಮಾಡಿದರೂ, ಸಂಘವು ಅದಕ್ಕೆ ಜವಾಬ್ದಾರ. ಸ್ವಯಂಸೇವಕರಿಗೆ ತರಬೇತಿ ನೀಡುವ ಸಂಘದಲ್ಲಿ ಖಂಡಿತವಾಗಿಯೂ ಕೆಲವು ಹೊಣೆಗಾರಿಕೆ ಇರುತ್ತದೆ. ಆದ್ದರಿಂದ, ನಾವು ನಮ್ಮ ಸಂಬಂಧ ಹೇಗಿರಬೇಕು, ಯಾವ ವಿಷಯಗಳನ್ನು ನಾವು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಶ್ರದ್ಧೆಯಿಂದ ಅನುಸರಿಸಬೇಕು ಎಂಬುದನ್ನು ಬುದ್ಧಿಪೂರ್ವಕವಾಗಿ ವಿವೇಚಿಸುತ್ತೇವೆ ಎಂದರು.

ಇದನ್ನೂ ಓದಿ | ತಾವು ಸಲಿಂಗಕಾಮಿ ಎಂದು ಘೋಷಿಸಿದ ರಷ್ಯಾದ Tennis​ ತಾರೆ ಡಾರಿಯಾ ಕಸಟಕಿನಾ

Exit mobile version