Site icon Vistara News

ಆರ್‌ಎಸ್‌ಎಸ್‌ಗೆ ಮುಜುಗರ ತಂದದ್ದೇ ನಿತಿನ್‌ ಗಡ್ಕರಿ ಪದಚ್ಯುತಿಗೆ ಕಾರಣವೇ?

gadkari

ನವ ದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಪಕ್ಷದ ಸಂಸದೀಯ ಮಂಡಳಿ ಹಾಗೂ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯಿಂದ ಕೈಬಿಡಲಾಗಿದೆ. ಗಡ್ಕರಿ ಹೇಳಿಕೆಗಳಿಂದ ಮುಜುಗರ ಅನುಭವಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಸಮಾಧಾನದ ಪರಿಣಾಮ ಈ ಬೆಳವಣಿಗೆ ಎಂದು ತರ್ಕಿಸಲಾಗಿದೆ.

ಸಾರಿಗೆ ಇಲಾಖೆಯಲ್ಲಿ ಸಾಕಷ್ಟು ಗಣನೀಯ ಕಾರ್ಯಗಳನ್ನು ಮಾಡಿರುವ ಗಡ್ಕರಿ ಅವರು ಇದನ್ನೂ ಮೀರಿ ಇತ್ತೀಚೆಗೆ ತಮ್ಮ ಹೇಳಿಕೆಗಳಿಂದ ಗಮನ ಸೆಳೆಯುತ್ತಿದ್ದಾರೆ. ಅವರ ಹೆಚ್ಚಿನ ಹೇಳಿಕೆಗಳು ಬಿಜೆಪಿಯ ವಿರೋಧಿಗಳಿಗೆ ಆಹಾರ ಒದಗಿಸಿಕೊಡುತ್ತಿವೆ. ಬಿಜೆಪಿ ಮೂಲಗಳ ಪ್ರಕಾರ, ಪಕ್ಷಕ್ಕೆ ಮುಜುಗರ ಉಂಟು ಮಾಡುವಂತಿದ್ದ ಹೇಳಿಕೆಗಳಿಂದ ದೂರ ಉಳಿಯುವಂತೆ ಆರ್‌ಎಸ್‌ಎಸ್‌ ನಾಯಕತ್ವ ಅವರಿಗೆ ಸೂಚಿಸಿತ್ತು. ಆದರೆ ಗಡ್ಕರಿ ಅದನ್ನು ಮಾನ್ಯ ಮಾಡಿರಲಿಲ್ಲ. ಹೀಗಾಗಿ ಸೂಕ್ತ ಎಚ್ಚರಿಕೆಯ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸಂಪುಟಕ್ಕೆ ಆರ್‌ಎಸ್‌ಎಸ್‌ ಸೂಚಿಸಿತ್ತು ಎನ್ನಲಾಗಿದೆ.

ಗಡ್ಕರಿ ಅವರು ನಾಗ್ಪುರ ಮೂಲದವರು. ಆರ್‌ಎಸ್‌ಎಸ್‌ ಮೂಲದಿಂದಲೇ ಬಂದವರು. ಹೀಗಾಗಿ, ಚುನಾವಣಾ ಸಮಿತಿಯಿಂದ ಅವರನ್ನು ಕೈಬಿಟ್ಟ ಕ್ರಮ ಕೇಂದ್ರ ಸರ್ಕಾರ ಮತ್ತು ಆರ್‌ಎಸ್‌ಎಸ್‌ ನಾಯಕತ್ವದ ನಡುವೆ ಮುನಿಸಿಗೆ ಕಾರಣವಾಗಿದೆ ಎಂದು ಈ ಮೊದಲು ಅಂದಾಜಿಸಲಾಗಿತ್ತು. ಆದರೆ, ಗಡ್ಕರಿ ಮೇಲೆ ಕ್ರಮ ತೆಗೆದುಕೊಳ್ಳಲು ಸ್ವತಃ ಆರೆಸ್ಸೆಸ್ಸೇ ಸೂಚಿಸಿದೆ ಎಂಬುದು ಮಾತ್ರ ಅಚ್ಚರಿದಾಯಕ ಬೆಳವಣಿಗೆ.

ಪಕ್ಷಕ್ಕೆ ಮುಜುಗರ ಉಂಟುಮಾಡುವ, ಕೇಂದ್ರ ಸರ್ಕಾರದ ಸಾಧನೆಗಳಿಗೆ ವ್ಯತಿರಿಕ್ತವಾಗಿರುವ, ವಿರೋಧಿಗಳಿಗೆ ಟೀಕೆಗೆ ಆಹಾರ ಒದಗಿಸಿಕೊಡುವಂಥ ಹೇಳಿಕೆಗಳನ್ನು ಇತ್ತೀಚೆಗೆ ಗಡ್ಕರಿ ಅವರು ಹೆಚ್ಚು ಹೆಚ್ಚಾಗಿ ನೀಡುತ್ತ ಬಂದಿದ್ದರು. ಇದರಿಂದ ಸಿಗುತ್ತಿರುವ ಜನಪ್ರಿಯತೆಗೆ ಅವರು ಹೆಚ್ಚು ಹಾತೊರೆಯುತ್ತಿದ್ದಾರೆ ಎಂಬಂತೆ ಕಂಡುಬಂದಿದ್ದು, ಪಕ್ಷದ ಹಾಗೂ ಸಂಘದ ನಾಯಕತ್ವದ ಕಡೆಗೆ “ಡೋಂಟ್‌ ಕೇರ್‌ʼ ಸ್ವಭಾವ ಬೆಳೆಸಿಕೊಂಡಿದ್ದರು. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸಂಘ ನಿರ್ಧರಿಸಿದೆ.

ಈ ಕ್ರಮ ಕಠಿಣವಾದುದು ಎಂದು ಭಾವಿಸಲಾಗಿದೆ. ಆದರೆ ಬಿಜೆಪಿ ಹೈಕಮಾಂಡ್‌ ಮತ್ತು ಆರೆಸ್ಸೆಸ್‌ ಪ್ರಮುಖರ ಅಸಮಾಧಾನಗಳನ್ನು ಅರ್ಥ ಮಾಡಿಕೊಳ್ಳದೆ ಗಡ್ಕರಿ ಇನ್ನಷ್ಟು ಮುಂದುವರಿದರೆ, ಮತ್ತಷ್ಟು ಕಠಿಣ ಕ್ರಮಗಳು ಅವರಿಗೆ ಎದುರಾಗಲಿವೆ ಎಂದು ಹೇಳಲಾಗಿದೆ. ಸಾರ್ವಜನಿಕವಾಗಿ ಮಾತ್ರವಲ್ಲ, ಖಾಸಗಿಯಾಗಿ ಅವರು ನೀಡುತ್ತಿರುವ ಹೇಳಿಕೆಗಳು ಕೂಡ ಪಕ್ಷಕ್ಕೆ ಮುಜುಗರಕಾರಿಯಾಗಿದ್ದವು. ಆದರೆ, ಅವರನ್ನು ಸಾರಿಗೆ ಸಚಿವರ ಸ್ಥಾನದಿಂದ ತೆಗೆಯುವ ಯಾವುದೇ ಸಾಧ್ಯತೆಗಳು ಇಲ್ಲ. ಯಾಕೆಂದರೆ ಈ ಇಲಾಖೆಯಲ್ಲಿ ಅವರು ಪರಿಣಾಮಕಾರಿ ಕೆಲಸಗಳನ್ನು ಮಾಡಿ ತೋರಿಸಿದ್ದು, ದಾಖಲೆ ಪ್ರಮಾಣದ ಹೆದ್ದಾರಿ ಕಾಮಗಾರಿಗಳು ಇವರ ಅವಧಿಯಲ್ಲಿ ಆಗಿವೆ.

ಇತ್ತೀಚೆಗೆ, ತಾನು ರಾಜಕೀಯ ತೊರೆಯಲು ಚಿಂತಿಸಿರುವುದಾಗಿ ಹಾಗೂ ಇತ್ತೀಚಿನ ರಾಜಕಾರಣ ಸಂಪೂರ್ಣ ಅಧಿಕಾರ ಕೇಂದ್ರಿತವಾಗಿದೆ ಎಂದು ಗಡ್ಕರಿ ಹೇಳಿದ್ದರು. ಸೇವಾ ವಲಯದಲ್ಲಿ ಮುಂದುವರಿಯುವ ಚಿಂತನೆಯಿದೆಯೆಂದಿದ್ದರು. 2019ರಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್‌ಗಢಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಸೋತಾಗ ʼʼರಾಜಕಾರಣಿಗಳು ತಾವು ಜನತೆಗೆ ಮಾರುತ್ತಿರುವ ಕನಸುಗಳನ್ನು ಈಡೇರಿಸದೇ ಹೋದರೆ, ಜನ ಸಾರ್ವಜನಿಕವಾಗಿ ಅವರಿಗೆ ಬಾರಿಸುತ್ತಾರೆʼʼ ಎಂದು ಹೇಳಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದರು. ಬಿಜೆಪಿ ವಿರೋಧಿಗಳು ಇದನ್ನು ತಮ್ಮ ಲಾಭಕ್ಕೆ ಬಳಸಿಕೊಂಡಿದ್ದರು.

ಇದನ್ನೂ ಓದಿ | ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ, ಚುನಾವಣಾ ಸಮಿತಿಗಳಲ್ಲಿ ಸ್ಥಾನ ಕಳೆದುಕೊಂಡ ನಿತಿನ್​ ಗಡ್ಕರಿ !

ಕಳೆದ ವಾರ ನಾಗ್ಪುರದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಅವರು ʼʼದೊಡ್ಡ ದೊಡ್ಡ ದಾನಿಗಳು ರಾಜಕೀಯ ಪಕ್ಷಗಳಿಗೆ ಸಹಾಯ ಮಾಡುತ್ತಾರೆ. ಪಕ್ಷಗಳು ಕೇಳಿದ್ದನ್ನು ಕೊಡಲು ಅವರು ಸಿದ್ಧರಾಗಿರುತ್ತಾರೆ. ನಾನು ಪಕ್ಷದ ಅಧ್ಯಕ್ಷ ಅಲ್ಲದಿರುವುದರಿಂದ, ನನ್ನ ಬಳಿ ಇಂಥ ಡೀಲ್‌ಗಳಿಗೆ ಆಸ್ಪದವಿಲ್ಲʼʼ ಎಂದು ಹೇಳಿದ್ದರು. ಇದು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಮುಜುಗರ ಉಂಟುಮಾಡುವಂತಿತ್ತು. ನಂತರ, ʼʼಸರ್ಕಾರ ಸರಿಯಾದ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದೂ ಸಮಸ್ಯೆಗೆ ಕಾರಣವಾಗಿದೆʼʼ ಎಂದೂ ಹೇಳಿದ್ದರು.

ಇದೆಲ್ಲದರಿಂದಾಗಿ, ಗಡ್ಕರಿ ಅವರ ಜೊತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಜೋಡಿಗೆ ತೀರಾ ಆತ್ಮೀಯ ಬಾಂಧವ್ಯವೇನೂ ಇಲ್ಲ. ಮೋದಿ ಸರ್ಕಾರದ ಮೊದಲ ಆವೃತ್ತಿಯಲ್ಲಿ ಗಡ್ಕರಿ ಹೊಂದಿದ್ದ ನೌಕಾಸಾರಿಗೆ, ಜಲಸಂಪನ್ಮೂಲ ಹಾಗೂ ನದಿ ಅಭಿವೃದ್ಧಿ ಇಲಾಖೆಗಳನ್ನು ಅವರಿಂದ ಕಿತ್ತುಕೊಳ್ಳಲಾಗಿತ್ತು. ಅವರಿಗೆ ಸಣ್ಣ, ಕಿರು ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವಾಲಯ ನೀಡಲಾಗಿತ್ತು. ಕಳೆದ ವರ್ಷ ಅದನ್ನು ಅವರಿಂದ ನಾರಾಯಣ ರಾಣೆ ಅವರಿಗೆ ವರ್ಗಾಯಿಸಲಾಗಿದೆ.

ಹೊಸಬಾಳೆ, ಫಡ್ನವಿಸ್‌ ಪಾತ್ರ?

ಗಡ್ಕರಿ ಅವರನ್ನು ಸೈಡ್‌ಲೈನ್‌ ಮಾಡುತ್ತಿರುವುದರ ಹಿಂದೆ ರಾಷ್ಟ್ರ ರಾಜಕಾರಣದಲ್ಲಿ ದೇವೇಂದ್ರ ಫಡ್ನವಿಸ್‌ ಹಾಗೂ ಆರೆಸ್ಸೆಸ್‌ನಲ್ಲಿ ದತ್ತಾತ್ರೇಯ ಹೊಸಬಾಳೆ ಅವರ ಪ್ರವರ್ಧಮಾನ ಕೂಡ ಎರಡು ಕಾರಣಗಳು ಎಂದು ಹೇಳಲಾಗುತ್ತಿದೆ. ನಾಗ್ಪುರ ಮೂಲದ ಇನ್ನೊಬ್ಬ ಬಿಜೆಪಿ ರಾಜಕಾರಣಿ ದೇವೇಂದ್ರ ಫಡ್ನವಿಸ್‌ ಅವರು ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಿದ್ದು, ರಾಷ್ಟ್ರ ರಾಜಕಾರಣದಲ್ಲಿ ಇನ್ನಷ್ಟು ಮೇಲಕ್ಕೆ ಬರುವ ಸೂಚನೆ ತೋರುತ್ತಿದ್ದಾರೆ. ಹಾಗೆಯೇ ಸಂಘದ ಸರಕಾರ್ಯವಾಹ ಆಗಿರುವ ಕರ್ನಾಟಕದ ದತ್ತಾತ್ರೇಯ ಹೊಸಬಾಳೆ ಅವರ ಬದಲು ಆ ಸ್ಥಾನಕ್ಕೆ ಭಯ್ಯಾಜಿ (ಸುರೇಶ್)‌ ಜೋಶಿ ಅವರ ಆಗಮನವನ್ನು ಗಡ್ಕರಿ ಅಪೇಕ್ಷಿಸಿದ್ದರು ಎನ್ನಲಾಗಿದೆ. ಆರೆಸ್ಸೆಸ್‌ಗೆ ಸಂಬಂಧಿಸಿದಂತೆ ಪ್ರಮುಖ ನಿರ್ಣಯಗಳನ್ನು ಸರಕಾರ್ಯವಾಹ ತೆಗೆದುಕೊಳ್ಳುತ್ತಾರೆ.

ಇದನ್ನೂ ಓದಿ | ಬಿಜೆಪಿ ಅಧಿಕಾರಕ್ಕೇರಿದ್ದರ ಕ್ರೆಡಿಟ್‌ ವಾಜಪೇಯಿ, ಆಡ್ವಾಣಿ ಅವರಿಗೇ ಸಲ್ಲಬೇಕು ಎಂದ ನಿತಿನ್‌ ಗಡ್ಕರಿ

Exit mobile version