Site icon Vistara News

ರಾಜಸ್ಥಾನದಲ್ಲಿ ಜುಲೈ 7ರಿಂದ 3 ದಿನ ಆರೆಸ್ಸೆಸ್‌ ಸಮಾವೇಶ, ಕನ್ಹಯ್ಯ ಲಾಲ್‌ ಹತ್ಯೆ ಬಗ್ಗೆ ಗಂಭೀರ ಚರ್ಚೆ ನಿರೀಕ್ಷೆ

Rajasthan Murder

ಜೈಪುರ: ರಾಜಸ್ಥಾನದ ಝಂಝುನು ಎಂಬಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ತ್ರಿದಿನ ಸಮಾವೇಶ ಜುಲೈ ೭ರಿಂದ ನಡೆಯಲಿದೆ. ಉದಯಪುರದಲ್ಲಿ ಜೂನ್‌ ೨೮ರಂದು ಕನ್ಹಯ್ಯ ಲಾಲ್‌ ಅವರನ್ನು ಇಬ್ಬರು ಮುಸ್ಲಿಂ ವ್ಯಕ್ತಿಗಳು ಧರ್ಮದ್ವೇಷದ ಕಾರಣಕ್ಕೆ ತಲೆ ಕಡಿದು ಕೊಲೆ ಮಾಡಿದ ಹಿನ್ನೆಲೆಯಲ್ಲಿ ಈ ಸಮಾವೇಶ ಮಹತ್ವವನ್ನು ಪಡೆದುಕೊಂಡಿದೆ.

ಮೊಹಮ್ಮದ್‌ ರಿಯಾಜ್‌ ಅಟ್ಟಾರಿ ಮತ್ತು ಗೌಸ್‌ ಮೊಹಮ್ಮದ್‌ ಎಂಬ ದುಷ್ಟರು ಜೂನ್‌ ೨೮ರಂದು ಬಟ್ಟೆ ಹೊಲಿಸಿಕೊಳ್ಳುವ ನೆಪದಲ್ಲಿ ಟೇಲರ್‌ ಶಾಪ್‌ಗೆ ಬಂದು ಕನ್ಹಯ್ಯ ಲಾಲ್‌ ಅವರ ಶಿರಚ್ಛೇದ ಮಾಡಿದ್ದರು. ಕನ್ಹಯ್ಯ ಲಾಲ್‌ ಅವರು ನೂಪುರ್‌ ಶರ್ಮ ಅವರ ವಿವಾದಿತ ಹೇಳಿಕೆಯನ್ನು ಬೆಂಬಲಿಸಿ ಹಾಕಿದ ಒಂದು ಪೋಸ್ಟ್‌ ಈ ಕೊಲೆಗೆ ಮೂಲ ಕಾರಣವಾಗಿತ್ತು ಎನ್ನಲಾಗಿದೆ.

ಆದರೆ, ರಾಜಸ್ಥಾನದ ಉದಯಪುರ ಭಾಗದಲ್ಲಿ ಮುಸ್ಲಿಂ ಮೂಲಭೂತವಾದಿ ಚಟುವಟಿಕೆಗಳು ವಿಪರೀತವಾಗಿ ಹೆಚ್ಚಿರುವುದನ್ನು ಬಿಜೆಪಿ ಮತ್ತು ಆರೆಸ್ಸೆಸ್‌ ಗಮನಿಸಿದೆ. ಹೀಗಾಗಿ ಈ ಭಾಗದಲ್ಲಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಆರೆಸ್ಸೆಸ್‌ ಸಮಾವೇಶವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.

ಸಮಾವೇಶಕ್ಕೆ ಸರಸಂಘ ಚಾಲಕ ಮೋಹನ್‌ ಭಾಗವತ್‌, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲಾ ೪೫ ವಲಯಗಳ ಪ್ರಚಾರಕರು ಭಾಗವಹಿಸಲಿದ್ದಾರೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ವಿಶ್ವ ಹಿಂದೂ ಪರಿಷತ್‌ ನಾಯಕರು ಈ ಸಭೆಯಲ್ಲಿ ಭಾಗವಹಿಸುವರು.
ಈ ಸಮಾವೇಶದಲ್ಲಿ ಕನ್ಹಯ್ಯ ಲಾಲ್‌ ಹತ್ಯೆ ಮಾತ್ರವಲ್ಲದೆ, ಮುಂದಿನ ವರ್ಷ ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಚುನಾವಣೆಯ ವಿಚಾರ ಇಲ್ಲಿ ಚರ್ಚೆಯಾಗುವುದಿಲ್ಲ. ಇದು ವಾರ್ಷಿಕವಾಗಿ ನಡೆಯುವ ಸಮಾವೇಶ ಅಷ್ಟೆ ಎಂದು ಆರೆಸ್ಸೆಸ್‌ ಹೇಳುತ್ತಿದೆ. ಆದರೆ, ಇಲ್ಲಿ ನಡೆಯುವ ಜಾಗೃತಿ ಕಾರ್ಯಕ್ರಮದ ಒಟ್ಟಾರೆ ಫಲ ಚುನಾವಣೆಗೆ ಸಂಬಂಧಿತವಾಗಿರುತ್ತದೆ ಎಂದು ಹೇಳಲಾಗಿದೆ.

ಕನ್ಹಯ್ಯಲಾಲ್‌ ಹಂತಕರಲ್ಲಿ ಒಬ್ಬನಾಗಿರುವ ಮೊಹಮ್ಮದ್‌ ರಿಯಾಜ್‌ ಅಟ್ಟಾರಿ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಆಗಿರುವ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಸದಸ್ಯನಾಗಿ ಸದಸ್ಯತ್ವ ಪಡೆದಿರುವುದು, ಹಿರಿಯ ನಾಯಕರ ಜತೆ ಫೋಟೊ ತೆಗೆಸಿಕೊಂಡಿರುವುದು ಕೂಡಾ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕೂಡಾ ಆರೆಸ್ಸೆಸ್‌ ಕಿವಿ ಮಾತು ಹೇಳುವ ಸಾಧ್ಯತೆಗಳಿವೆ.

ಇದನ್ನೂ ಓದಿ| Rajasthan murder: ರಾಜಸ್ಥಾನದಲ್ಲಿ ದಾವತ್‌ ಸ್ಲೀಪರ್‌ ಸೆಲ್ ಸ್ಥಾಪಿಸಲು ಯತ್ನಿಸಿದ್ದ ಕನ್ಹಯ್ಯಲಾಲ್‌ ಹಂತಕರು

Exit mobile version