Site icon Vistara News

Rupee Falls: ಡಾಲರ್‌ ಎದುರು ಸಾರ್ವಕಾಲಿಕವಾಗಿ ಕುಸಿದ ರೂಪಾಯಿ; ಶೀಘ್ರವೇ ಬೆಲೆ ಏರಿಕೆ?

Rupee Falls

Rupee Falls 9 paise to all-time low of 83.33

ನವದೆಹಲಿ: ದೇಶದಲ್ಲಿ ಕೊರೊನಾ ಬಿಕ್ಕಟ್ಟಿನ ಬಳಿಕ ಆರ್ಥಿಕ ಸ್ಥಿತಿ ತಹಬಂದಿಗೆ ಬರುತ್ತಿರುವ, ಭಾರತದ ಜಿಡಿಪಿ ಏರಿಕೆ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಆಶಾಭಾವ ಪ್ರದರ್ಶಿಸಿದ ಬೆನ್ನಲ್ಲೇ ರೂಪಾಯಿ ಮೌಲ್ಯವು ದಿನೇದಿನೆ ಕುಸಿಯುತ್ತಿರುವುದು ಆತಂಕ ಹೆಚ್ಚಿಸಿದೆ. ಅದರಲ್ಲೂ, ಬುಧವಾರ (ನವೆಂಬರ್‌ 1) ಡಾಲರ್‌ ಎದುರು ರೂಪಾಯಿ ಮೌಲ್ಯವು 9 ಪೈಸೆ (Rupee Falls) ಕುಸಿದಿದೆ. ಇದರೊಂದಿಗೆ ಅಮೆರಿಕದ ಡಾಲರ್‌ (American Dollar) ಎದುರು ಭಾರತದ ರೂಪಾಯಿ ಮೌಲ್ಯವು 83.33 ರೂ. ಆಗಿದ್ದು, ಇದು ಸಾರ್ವಕಾಲಿಕ ಕುಸಿತ ಎಂದು ತಿಳಿದುಬಂದಿದೆ.

ಮಧ್ಯಪ್ರಾಚ್ಯ ದೇಶಗಳಲ್ಲಿ ಅನಿಶ್ಚಿತತೆ, ದೇಶೀಯ ಷೇರುಗಳಲ್ಲಿ ಋಣಾತ್ಮಕ ಚಲನೆ, ಕಚ್ಚಾ ತೈಲದ ಬೆಲೆಯೇರಿಕೆ ಸೇರಿ ಹಲವು ಕಾರಣಗಳಿಂದಾಗಿ ಹೂಡಿಕೆದಾರರು ವಿಚಲಿತರಾಗುತ್ತಿದ್ದಾರೆ. ಇದರಿಂದಾಗಿ ರೂಪಾಯಿ ಮೌಲ್ಯವು ಕುಸಿತ ಕಂಡಿದೆ ಎಂದು ವಿದೇಶಿ ವಿನಿಮಯ ತಜ್ಞರು ತಿಳಿಸಿದ್ದಾರೆ. ರೂಪಾಯಿ ಮೌಲ್ಯವು ಮಂಗಳವಾರ (ಅಕ್ಟೋಬರ್‌ 31) 83.24 ರೂ. ಆಗಿತ್ತು. ಕಳೆದ ಕೆಲ ತಿಂಗಳಿಂದ ರೂಪಾಯಿ ಮೌಲ್ಯವು ನಿಯಮಿತವಾಗಿ ಕುಸಿಯುತ್ತಿರುವುದು ಆತಂಕ ಹೆಚ್ಚಿಸಿದೆ.

ರೂಪಾಯಿ ಮೌಲ್ಯ ಕುಸಿತದ ಪರಿಣಾಮಗಳೇನು?

ಡಾಲರ್‌ ಎದುರು ರೂಪಾಯಿಯ ಕುಸಿತದಿಂದ ಜನರಿಗೆ ಭಾರಿ ತೊಂದರೆಯಾಗುತ್ತದೆ. ಆಮದು ವೆಚ್ಚ ದುಬಾರಿಯಾಗುತ್ತದೆ. ಮುಖ್ಯವಾಗಿ ಕಚ್ಚಾ ತೈಲ, ಬಂಗಾರ, ಎಲೆಕ್ಟ್ರಾನಿಕ್ಸ್‌ ಉಪಕರಣಗಳು, ಇತರ ಉತ್ಪನ್ನಗಳ ಆಮದು ದುಬಾರಿಯಾಗುತ್ತದೆ. ಬೆಲೆ ಏರಿಕೆ ಅಥವಾ ಹಣದುಬ್ಬರ ಉಂಟಾಗುತ್ತದೆ. ಈಗಾಗಲೇ ಆರ್‌ಬಿಐನ ಸುರಕ್ಷತಾ ಮಟ್ಟವನ್ನು ಹಣದುಬ್ಬರ ಮೀರಿದೆ. ರೂಪಾಯಿ ಕುಸಿತದ ಪರಿಣಾಮ ಆಮದು ವೆಚ್ಚ ಹೆಚ್ಚುವುದರಿಂದ ಡೀಸೆಲ್‌, ಪೆಟ್ರೋಲ್‌, ಎಲ್‌ಪಿಜಿ ದರದಲ್ಲಿ ಮತ್ತಷ್ಟು ಹೆಚ್ಚಳವಾದರೆ ಅಚ್ಚರಿ ಇಲ್ಲ. ಇದು ಜನರ ದೈನಂದಿನ ವೆಚ್ಚಗಳನ್ನು ಏರಿಸುತ್ತದೆ. ಸಾರಿಗೆ ವೆಚ್ಚ ಕೂಡ ಏರುತ್ತದೆ.

ಇದನ್ನೂ ಓದಿ: ಸ್ವಾತಂತ್ರ್ಯ ದೊರೆತ ಸಮಯದಲ್ಲಿ 1 ರೂಪಾಯಿ ಮೌಲ್ಯವು 1 ಡಾಲರ್‌ಗೆ ಸಮನಾಗಿತ್ತೇ? ವರದಿಗಳು ಏನು ಹೇಳುತ್ತವೆ?

ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಸಾಫ್ಟ್‌ವೇರ್‌ ಕಂಪನಿಗಳಿಗೆ ಆದಾಯ ಹೆಚ್ಚುತ್ತದೆ. ಅವುಗಳು ಡಾಲರ್‌ನಲ್ಲಿ ಗಳಿಸುವ ಆದಾಯವನ್ನು ರೂಪಾಯಿಗೆ ಪರಿವರ್ತಿಸಿದಾಗ ಮೊತ್ತ ಹೆಚ್ಚುತ್ತದೆ. ಸೌರಶಕ್ತಿ ಮತ್ತು ಪವನ ಶಕ್ತಿಯನ್ನು ಆಧರಿಸಿದ ಉದ್ಯಮಗಳು ತಮ್ಮ ಯಂತ್ರೋಪಕರಣಗಳಿಗೆ ಆಮದನ್ನೇ ಹೆಚ್ಚು ಅವಲಂಬಿಸಿವೆ. ಹೀಗಾಗಿ ಅವುಗಳಿಗೆ ವೆಚ್ಚ ಏರಿಕೆಯಾಗಲಿದೆ. ಅಷ್ಟೇ ಅಲ್ಲ, ರೂಪಾಯಿ ಮೌಲ್ಯ ಕುಸಿತದಿಂದಾಗಿ ವಿದೇಶಗಳಲ್ಲಿ ಶಿಕ್ಷಣ ಮತ್ತು ವಿದೇಶ ಪ್ರವಾಸದ ವೆಚ್ಚ ಹೆಚ್ಚುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version