Site icon Vistara News

Rushikonda Palace: 500 ಕೋಟಿಯ ಋಷಿಕೊಂಡ ಅರಮನೆ; 12 ಬೆಡ್‌ರೂಮ್‌, ವಾಶ್‌ರೂಮ್‌ ಒಂದು ಮನೆಯಷ್ಟು!

Rushikonda Palace Issue

ಆಂಧ್ರಪ್ರದೇಶದ ಋಷಿಕೊಂಡ ಬೆಟ್ಟದ ಬಳಿ (andrapradesh) ಈ ಹಿಂದೆ ಮುಖ್ಯಮಂತ್ರಿಯಾಗಿದ್ದ (former CM) ಜಗನ್ ಮೋಹನ್ ರೆಡ್ಡಿ (Y.S. Jagan Mohan Reddy) 500 ಕೋಟಿ ರೂ. ವೆಚ್ಚದಲ್ಲಿ ʼರಾಜಾ ಮಹಲ್‌ʼ ಹೆಸರಿನಲ್ಲಿ ಅರಮನೆಯನ್ನು (Rushikonda Palace) ನಿರ್ಮಿಸಿದ್ದರು. ಈಗ ಜಗನ್‌ ಸರ್ಕಾರ ಅಧಿಕಾರ ಕಳೆದುಕೊಂಡು ಟಿಡಿಪಿಯ ಎನ್‌ ಚಂದ್ರಬಾಬು ನಾಯ್ಡು ಅವರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದೀಗ ಈ ಅರಮನೆ ಭಾರೀ ಟೀಕೆ ಮತ್ತು ವಿವಾದಕ್ಕೆ ಗುರಿಯಾಗಿದೆ.

ಭಾರಿ ಭ್ರಷ್ಟಾಚಾರದ ಮೂಲಕ ರಾಜ್ಯ ಸರ್ಕಾರದ ಹಣವನ್ನು ಈ ಹಿಂದಿನ ಮುಖ್ಯಮಂತ್ರಿ ಜಗನ್‌ ರೆಡ್ಡಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ತೆಲುಗು ದೇಶಂ ಪಕ್ಷ (TDP), ವಿಶಾಖಪಟ್ಟಣಂನ (Vishakhapatnam) ಋಷಿಕೊಂಡದ ಮೇಲೆ ನಿರ್ಮಿಸಲಾದ ಕಟ್ಟಡಗಳ ಡ್ರೋನ್ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಈ ಮೂಲಕ ಇದನ್ನು ಸಾರ್ವಜನಿಕರ ಗಮನಕ್ಕೆ ತಂದಿದೆ.

ಹಿಂದಿನ ವೈಎಸ್‌ಆರ್‌ಸಿ ಆಡಳಿತದಲ್ಲಿ ಋಷಿಕೊಂಡ ಮೇಲೆ ನಿರ್ಮಿಸಲಾದ ಕಟ್ಟಡಗಳಿಗೆ ಭೀಮಿಲಿ ಶಾಸಕ ಗಂಟಾ ಶ್ರೀನಿವಾಸ ರಾವ್ ಭೇಟಿ ನೀಡಿದಾಗ ಋಷಿಕೊಂಡ ಅರಮನೆ ವಿವಾದ ಭುಗಿಲೆದ್ದಿತು. ಟಿಡಿಪಿ ನಾಯಕರು ಈ ಯೋಜನೆಯ ಸ್ವರೂಪ ಮತ್ತು ಪ್ರಕೃತಿಯ ಮೇಲೆ ಇದರ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿರುವ ಟಿಡಿಪಿ ನಾಯಕರು, ‘ಋಷಿಕೊಂಡ ಅರಮನೆ’ ಎಂದು ಕರೆಯಲ್ಪಡುವ ಈ ಅರಮನೆಯನ್ನು ಅಕ್ರಮವಾಗಿ ಮತ್ತು ರಹಸ್ಯವಾಗಿ ನಿರ್ಮಿಸಲಾಗಿದೆ ಎಂದು ದೂರಿದ್ದಾರೆ. ಭೀಮಿಲಿ ಶಾಸಕ ಗಂಟಾ ಶ್ರೀನಿವಾಸ ರಾವ್ ಅವರು ಹಿಂದಿನ ವೈಎಸ್‌ಆರ್ ಕಾಂಗ್ರೆಸ್ (ವೈಎಸ್‌ಆರ್‌ಸಿ) ಆಡಳಿತದಿಂದ ಋಷಿಕೊಂಡದ ಮೇಲೆ ನಿರ್ಮಿಸಲಾದ ಕಟ್ಟಡಗಳಿಗೆ ಭೇಟಿ ನೀಡಿದ ಈ ವಿಷಯ ಹೆಚ್ಚು ಚರ್ಚೆಗೆ ಕಾರಣವಾಯಿತು. ಈ ಕಟ್ಟಡಗಳನ್ನು ‘ರಾಜ ಮಹಲ್’ ಎಂದು ಬಣ್ಣಿಸಿರುವ ಟಿಡಿಪಿ ನಾಯಕ ನಾರಾ ಲೋಕೇಶ್, ಸಾರ್ವಜನಿಕ ನಿಧಿಯ ದುರುಪಯೋಗದ ಬಗ್ಗೆ ದನಿ ಎತ್ತಿದ್ದಾರೆ.

ಋಷಿಕೊಂಡ ನಿರ್ಮಾಣ

ಸಚಿವ ನಾರಾ ಲೋಕೇಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ತಮ್ಮ ಕಳವಳವನ್ನು ವ್ಯಕ್ತಪಡಿಸಿ, “ಬಡವರು ತಮ್ಮ ಮಕ್ಕಳ ತಲೆಯ ಮೇಲೆ ಸೂರು ನಿರ್ಮಿಸಲು ಹೆಣಗಾಡುತ್ತಿದ್ದರೆ, ಅವರ ಹಣದಲ್ಲಿ ಜಗನ್‌ ಅರಮನೆಯನ್ನು ನಿರ್ಮಿಸಿದ್ದಾರೆ. ಈ ಬಗ್ಗೆ ತನಿಖೆ ಮಾಡಲಾಗುವುದುʼʼ ಎಂದಿದ್ದಾರೆ. 9.88 ಎಕರೆ ಜಮೀನಿನಲ್ಲಿ ಕಟ್ಟಡವು 5 ಎಕರೆಯಲ್ಲಿ ಇರಬೇಕು, ಉಳಿದ ಪ್ರದೇಶವು ಭೂದೃಶ್ಯ ಮತ್ತು ಪಾರ್ಕಿಂಗ್ ಪ್ರದೇಶವಾಗಿರಬೇಕು ಎಂದು ಹೇಳಲಾಗಿತ್ತು. ಆದರೆ ಬೆಟ್ಟವನ್ನು 15 ಎಕರೆ ಹೆಚ್ಚುವರಿಯಾಗಿ ಅಗೆದಿರುವುದು ದೊಡ್ಡ ಉಲ್ಲಂಘನೆಯಾಗಿದೆ ಎಂದವರು ತಿಳಿಸಿದ್ದಾರೆ.


ಇದನ್ನೂ ಓದಿ: UGC-NET: ಯುದ್ಧವನ್ನೇ ನಿಲ್ಲಿಸುವ ಸಾಮರ್ಥ್ಯವಿರುವ ಮೋದಿ ಪ್ರಶ್ನೆ ಪತ್ರಿಕೆ ಸೋರಿಕೆ ಯಾಕೆ ತಡೆಯುತ್ತಿಲ್ಲ? ರಾಹುಲ್‌ ಗಾಂಧಿ ವ್ಯಂಗ್ಯ

ಜಗನ್‌ ಪಕ್ಷದ ಪ್ರತಿಪಾದನೆ ಏನು?

ವಿಶಾಖಪಟ್ಟಣಂನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶವನ್ನು ಈ ಪುನರಾಭಿವೃದ್ಧಿ ಯೋಜನೆ ಹೊಂದಿದೆ ಎಂದು ಜಗನ್ ನೇತೃತ್ವದ ಪಕ್ಷವು ಪ್ರತಿಪಾದಿಸಿದೆ. ಈ ಆಸ್ತಿ ಸರ್ಕಾರಿ ಸ್ವಾಮ್ಯದಲ್ಲಿದೆ, ಖಾಸಗಿಯಲ್ಲ ಎಂದು ಹೇಳಿರುವ ಪಕ್ಷದ ಪ್ರಮುಖರು, ರಾಷ್ಟ್ರಪತಿ ಅಥವಾ ಪ್ರಧಾನಮಂತ್ರಿ ವಿಶಾಖಪಟ್ಟಣಕ್ಕೆ ಭೇಟಿ ನೀಡಿದಾಗ ಇದನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಈ ನಡುವೆಯೇ ಯೋಜನೆಯು ಕರಾವಳಿ ನಿಯಂತ್ರಣ ವಲಯದ (CRZ) ನಿಯಮಗಳನ್ನು ಉಲ್ಲಂಘಿಸಿದ ಕಾರಣದಿಂದ ಪರಿಸರವಾದಿಗಳಿಂದಲೂ ವ್ಯಾಪಕ ವಿರೋಧವನ್ನು ಎದುರಿಸುತ್ತಿದೆ.

ಹೇಗಿದೆ ಈ ಅರಮನೆ?

9.88 ಎಕರೆ ಸಮುದ್ರಾಭಿಮುಖ ಸೈಟ್‌ನಲ್ಲಿ ಹರಡಿರುವ ಋಷಿಕೊಂಡ ಅರಮನೆಯು ಒಟ್ಟು 1,41,433 ಚದರ ಮೀಟರ್‌ಗಳ ನಿರ್ಮಾಣ ಪ್ರದೇಶದೊಂದಿಗೆ 12 ಬೆಡ್‌ ರೂಮ್‌ಗಳನ್ನು ಹೊಂದಿದೆ. ಮೂರು ಮಹಲುಗಳನ್ನು ರಚಿಸಲು ರಮಣೀಯವಾದ ಋಶಿಕೊಂಡ ಬೆಟ್ಟಗಳನ್ನು ಧ್ವಂಸಪಡಿಸಲಾಗಿದೆ. ಕೆಲವು ವಾಶ್‌ರೂಮ್‌ಗಳಂತೂ 480 ಚದರ ಅಡಿ ದೊಡ್ಡದಾಗಿದೆ. ಮೀಟಿಂಗ್ ಹಾಲ್‌ಗಳು 7,266 ಚದರ ಮೀಟರ್‌ ವ್ಯಾಪಿಸಿದೆ!

ಆಮದು ಮಾಡಿದ ದುಬಾರಿ ಮಾರ್ಬಲ್‌ಗಳನ್ನು ಬಳಸಿದ್ದು, ವಿಶಾಲವಾದ ಕಾರಿಡಾರ್‌ಗಳನ್ನು ಒಳಗೊಂಡಿದೆ. ವಾಲ್-ಟು-ವಾಲ್ ಸ್ಕ್ರೀನ್ ಹೊಂದಿರುವ ಹೋಮ್ ಥಿಯೇಟರ್ ಬ್ಲಾಕ್‌ ಇದರ ಮತ್ತೊಂದು ಪ್ರಮುಖ ಅಂಶವಾಗಿದೆ. ಸರ್ಕಾರವು ಲ್ಯಾಂಡ್‌ಸ್ಕೇಪಿಂಗ್‌ನಲ್ಲಿ 50 ಕೋಟಿ ರೂ. ಮತ್ತು ಒಳಾಂಗಣ ಅಲಂಕಾರಕ್ಕಾಗಿ 33 ಕೋಟಿ ರೂ. ವೆಚ್ಚ ಮಾಡಿದೆ ಎನ್ನಲಾಗಿದೆ. ರೆಸ್ಟ್ ರೂಮ್ಗ‌ಳನ್ನು ಒಳಗೊಂಡಂತೆ ಸಂಪೂರ್ಣ ಸಂಕೀರ್ಣದ ಉದ್ದಕ್ಕೂ ಸೆಂಟ್ರಲ್‌ ಹವಾನಿಯಂತ್ರಣವಿದೆ. ಸಮುದ್ರದ ನೋಟವನ್ನು ಹೊಂದಿರುವ ಡೈನಿಂಗ್ ಹಾಲ್, ಪ್ರತಿ ಮಲಗುವ ಕೋಣೆಯಲ್ಲಿ 12 ಹಾಸಿಗೆಗಳಿವೆ. ಸ್ಪಾ ಸೇವೆಗಳೊಂದಿಗೆ ಸ್ನಾನಗೃಹಗಳು ವಿಶೇಷ ವೈಶಿಷ್ಟ್ಯಗಳಿಂದ ಕೂಡಿದೆ.

Exit mobile version