Site icon Vistara News

BBC Documentary: ‘ಸ್ವತಂತ್ರ ನೀತಿ ವಿರುದ್ಧ ಮಾಹಿತಿ ಸಮರ’, ಬಿಬಿಸಿ ಡಾಕ್ಯುಮೆಂಟರಿ ವಿರುದ್ಧ ರಷ್ಯಾ ಆಕ್ರೋಶ

BBC Documentary

#image_title

ಮಾಸ್ಕೊ: ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತು ಅವಹೇಳನಕಾರಿಯಾಗಿ ಚಿತ್ರಿಸಿರುವ ಬಿಬಿಸಿಯ ಇಂಡಿಯಾ: ದಿ ಮೋದಿ ಕ್ವಶ್ಚನ್‌ (India: The Modi Question) ಡಾಕ್ಯುಮೆಂಟರಿ (BBC Documentary) ಕುರಿತು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಸೇರಿ ಹಲವು ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ರಷ್ಯಾ ಕೂಡ ಸಾಕ್ಷ್ಯಚಿತ್ರದ ವಿರುದ್ಧ ಮಾತನಾಡಿದ್ದು, “ಸ್ವತಂತ್ರ ನೀತಿ ಹೊಂದಿರುವ ರಾಷ್ಟ್ರಗಳ ವಿರುದ್ಧ ಬಿಬಿಸಿ ಮಾಹಿತಿ ಸಮರ ಸಾರಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಬಿಬಿಸಿ ಡಾಕ್ಯುಮೆಂಟರಿ ವಿವಾದದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಜಖರೋವಾ ಪ್ರತಿಕ್ರಿಯಿಸಿದರು. “ಬಿಬಿಸಿ ಡಾಕ್ಯುಮೆಂಟರಿ ಕುರಿತು ಈಗಾಗಲೇ ಭಾರತ ಪ್ರತಿಕ್ರಿಯಿಸಿದೆ. ಇದು ಸ್ವತಂತ್ರ ನೀತಿ ಹೊಂದಿರುವ ರಾಷ್ಟ್ರಗಳ ವಿರುದ್ಧ ಬಿಬಿಸಿ ಮಾಹಿತಿ ಸಮರ ಸಾರುತ್ತಿರುವುದಕ್ಕೆ ಮತ್ತೊಂದು ನಿದರ್ಶನವಾಗಿದೆ. ರಷ್ಯಾ ವಿರುದ್ಧ ಮಾತ್ರವಲ್ಲ, ಸ್ವತಂತ್ರ ನೀತಿ ಹೊಂದಿರುವ, ಉತ್ತಮ ಆಡಳಿತ ನಡೆಸುತ್ತಿರುವ ದೇಶಗಳ ವಿರುದ್ಧ ಬಿಬಿಸಿ ಇಂತಹದ್ದೇ ಸಮರ ಸಾರುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: BBC Documentary: ಸಾಕ್ಷ್ಯಚಿತ್ರ ನಿಷೇಧ ಪ್ರಶ್ನಿಸಿ ಅರ್ಜಿ, ಇದರಿಂದ ಕೋರ್ಟ್‌ ಸಮಯ ವ್ಯರ್ಥ ಎಂದ ಕಿರಣ್‌ ರಿಜಿಜು

“ಬಿಬಿಸಿಯು ಒಂದು ಸ್ವತಂತ್ರ ಟಿವಿ ಹಾಗೂ ರೇಡಿಯೋ ಮಾಧ್ಯಮವಲ್ಲ. ಅದು ಬೇರೆಯವರ ಮೇಲೆ ಅವಲಂಬನೆಯಾಗಿದೆ. ಒಂದು ಗುಂಪಿನ ಹಿತಾಸಕ್ತಿಗಾಗಿ ಅದು ಕಾರ್ಯನಿರ್ವಹಿಸುತ್ತಿದೆ. ಪತ್ರಿಕೋದ್ಯಮದ ಆಶಯಗಳನ್ನು ಗಾಳಿಗೆ ತೂರಿ, ವೃತ್ತಿಪರತೆಯ ವಿರುದ್ಧ ಕೆಲಸ ಮಾಡುತ್ತಿದೆ. ಇದಕ್ಕಾಗಿ ಅದು ಕೆಲವೊಮ್ಮೆ ಬ್ರಿಟನ್‌ ಸರ್ಕಾರದ ವಿರುದ್ಧವೂ ಪಿತೂರಿ ಮಾಡುತ್ತದೆ” ಎಂದು ಕುಟುಕಿದ್ದಾರೆ.

“ಭಾರತದ ಕುರಿತು ನಾವು ಹೊಂದಿರುವ ಅಭಿಪ್ರಾಯವನ್ನು ಬದಲಾಯಿಸುವುದಿಲ್ಲ. ಮೋದಿ ಅವರ ವ್ಯಕ್ತಿತ್ವಕ್ಕೆ ಕುಂದುಂಟುಮಾಡುವ ಯತ್ನ ಸರಿಯಲ್ಲ” ಎಂದು ರಿಷಿ ಸುನಕ್‌ ಸಂಸತ್ತಿನಲ್ಲೇ ಹೇಳಿದ್ದಾರೆ. ಕೆಲ ಸಂಸದರೂ ಡಾಕ್ಯುಮೆಂಟರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಬ್ರಿಟನ್‌ನ ಬೀದಿ ಬೀದಿಗಳಲ್ಲಿ ಬಿಬಿಸಿ ವಿರುದ್ಧ ಅನಿವಾಸಿ ಭಾರತೀಯರು ಪ್ರತಿಭಟನೆ ನಡೆಸಿದ್ದಾರೆ.

Exit mobile version