Site icon Vistara News

Russia-Ukrainian War: ಟಾಯ್ಲೆಟ್ ಬೌಲ್ ಸೇರಿ ಗೃಹೋಪಯೋಗಿ ವಸ್ತುಗಳನ್ನು ಕದಿಯುತ್ತಿರುವ ರಷ್ಯನ್ ಸೈನಿಕರು!

Russian Soldiers Stealing Household Items at Russia-Ukrainian War

ನವದೆಹಲಿ: ಭಾರತದ ಪ್ರವಾಸದಲ್ಲಿರುವ ಉಕ್ರೇನ್‌ನ ಮೊದಲ ಉಪ ವಿದೇಶಾಂಗ ಸಚಿವೆ ಎಮಿನ್ ಝಪರೋವಾ (Emine Dzhaparova) ಅವರು ಯುದ್ಧದ ಭೀಕರತೆಗಳನ್ನು ಬಿಚ್ಚಿಡುತ್ತಿದ್ದಾರೆ. ರಷ್ಯಾ ನಡೆಸುತ್ತಿರುವ ದಬ್ಬಾಳಿಕೆಯನ್ನು ತೆರೆದಿಟ್ಟಿದ್ದಾರೆ. ಉಕ್ರೇನ್ ಜನರ ಮೇಲೆ ದೌರ್ಜನ್ಯ ನಡೆಸುತ್ತಿರುವ ರಷ್ಯನ್ ಸೈನಿಕರು ಎಲ್ಲ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳನ್ನು ಎಸಗಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ರಷ್ಯನ್ ಸೈನಿಕರು ಟಾಯ್ಲೆಟ್ ಬೌಲ್ ಸಹಿತ ಉಕ್ರೇನ್ನಿಯನ್ನರ ಗೃಹೋಪಯೋಗಿ ವಸ್ತುಗಳನ್ನು ಕದಿಯುತ್ತಿದ್ದಾರೆಂದು ದೂರಿದರು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಶಾಂತಿ ಸ್ಥಾಪನೆಗೆ ನೆರವು ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ(Russia-Ukrainian War).

ರಷ್ಯಾದ ಸೈನಿಕರ ಸಂಭಾಷಣೆಗಳನ್ನು ವಿಶ್ಲೇಷಿಸಿದರೆ ಅವರು ಉಕ್ರೇನ್ ಜನರ ಗೃಹೋಪಯೋಗಿ ವಸ್ತುಗಳನ್ನು ತೆಗೆದುಕೊಂಡುವ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಈ ತಿಕ್ಕುಲತನ ಎಲ್ಲಿಯವರೆಗೆ ಇದೆ ಎಂದರೆ, ಟಾಯ್ಲೆಟ್ ಬೌಲ್‌ಗಳನ್ನು ಬಿಡಲು ಸಿದ್ಧರಿಲ್ಲ ಎಂದು ಎಂದು ಎಮಿನ್ ಅವರು ಹೇಳಿದ್ದಾರೆ.

ನಾವು ರಷ್ಯನ್ ಸೈನಿಕರ ನಿಗೂಢ ಸಂಭಾಷಣೆಗಳನ್ನು ಪಡೆದುಕೊಂಡಾಗ, ಅವರು ತಮ್ಮ ಹೆಂಡತಿ ಮತ್ತು ತಾಯಿ ಜತೆ ಮಾತನಾಡುವಾಗ ಉಕ್ರೇನ್ ಜನರ ಗೃಹೋಪಯೋಗಿ ವಸ್ತುಗಳನ್ನು ಕದಿಯುವ ಬಗ್ಗೆ ಹೇಳುತ್ತಿದ್ದರು. ಅವರು ಕೆಲವೊಮ್ಮೆ ಟಾಯ್ಲೆಟ್ ಬೌಲ್‌ಗಳನ್ನೂ ಕದ್ದಿದ್ದಾರೆ ಎಂದು ಹೇಳಿದರು. ಕಳೆದ ವರ್ಷ ಫೆಬ್ರವರಿ 24 ರಂದು ಪೂರ್ವ ಯುರೋಪಿಯನ್ ದೇಶದ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಪ್ರಾರಂಭಿಸಿದ ನಂತರ ಉಕ್ರೇನ್‌ನಿಂದ ಎಮಿನ್ ಝಾಪರೋವಾ ಅವರ ಭಾರತ ಭೇಟಿ ಇದೇ ಮೊದಲನೆಯದ್ದಾಗಿದೆ.

ರಷ್ಯನ್ ಸೈನಿಕರಿಂದ ಅತ್ಯಾಚಾರ

ಯಾರಾದರೂ ನಿಮ್ಮ ಮೇಲೆ ಅತ್ಯಾಚಾರ ಮಾಡಲು ಬಂದರೆ, ನೀವು ಮಾತನಾಡಲು ಯಾವ ಭಾಷೆ ಹುಡುಕಬಹುದು? 11 ವರ್ಷದ ಹುಡುಗ ತನ್ನ ತಾಯಿಯ ಮುಂದೆ ಅತ್ಯಾಚಾರಕ್ಕೊಳಗಾಗಿದ್ದಾನೆ. ಅವನು ತನ್ನ ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾನೆ. ಫೆಬ್ರವರಿ 24ರಿಂದ ಉಕ್ರೇನ್‌ನಲ್ಲಿ ಎಲ್ಲವೂ ಬದಲಾವಣೆಯಾಗಿದೆ ಎಂದು ಅವರು ಹೇಳಿದರು. ಇದೇ ರೀತಿಯ ಆರೋಪವನ್ನು 2022ರಲ್ಲಿ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಪ್ರಮಿರಲಾ ಪ್ಯಾಟನ್ ಅವರು ಮಾಡಿದ್ದರು. ಸಂಘರ್ಷಪೀಡಿತ ಉಕ್ರೇನ್‌ನಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿದೆ. ರಷ್ಯನ್ ಸೈನಿಕರು, ತಮ್ಮ ಸೇನಾ ತಂತ್ರದ ಭಾಗವಾಗಿ ಉಕ್ರೇನ್‌ನಲ್ಲಿ ಅತ್ಯಾಚಾರ ಮಾಡುತ್ತಿದ್ದಾರೆ. ಲೈಂಗಿಕ ಹಿಂಸಾಚಾರ ಮಾಡುತ್ತಿದ್ದಾರೆಂದು ದೂರಿದ್ದರು.

ನಾವು ಭಾರತವನ್ನು ವಿಶ್ವಗುರು ಎಂದು ಕರೆಯುತ್ತೇವೆ; ಉಕ್ರೇನ್‌ ಸಚಿವೆ

ಹಿಂದುಸ್ತಾನ್‌ ಟೈಮ್ಸ್‌ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ಎಮಿನೆ ಝರಪೋವಾ ಅವರು ಈ ಕುರಿತು ಪ್ರಸ್ತಾಪಿಸಿದ್ದಾರೆ. “ಉಕ್ರೇನ್‌ ಮೇಲೆ ರಷ್ಯಾ ಮಾಡುತ್ತಿರುವ ಆಕ್ರಮಣದ ತೀವ್ರತೆಯನ್ನು ತಣಿಸುವಲ್ಲಿ, ಜಾಗತಿಕವಾಗಿ ಉಕ್ರೇನ್‌ ಪರ ಅಭಿಪ್ರಾಯ ರೂಪಿಸುವಲ್ಲಿ, ಯುದ್ಧ ನಿಲ್ಲಿಸುವ ದಿಸೆಯಲ್ಲಿ ಭಾರತದ ಪಾತ್ರ ಹಿರಿದಾಗಿದೆ. ಅದರಲ್ಲೂ, ಭಾರತವು ಮೌಲ್ಯಗಳ ಆಧಾರದ ಮೇಲೆ ನಿಂತಿರುವ ರಾಷ್ಟ್ರವಾಗಿದೆ. ನಾಗರಿಕತೆಯ ಧ್ವನಿಯಾಗಿ ಭಾರತ ಇದೆ. ಹಾಗಾಗಿ, ನಾವು ಭಾರತವನ್ನು ವಿಶ್ವಗುರು ಎಂಬುದಾಗಿ ಕರೆಯುತ್ತೇವೆ” ಎಂದು ಹೇಳಿದರು.

ಕೀವ್‌ಗೆ ಭೇಟಿ ನೀಡುವಂತೆ ಮೋದಿಗೆ ಆಹ್ವಾನ

“ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಬೇಕು ಎಂಬ ದಿಸೆಯಲ್ಲಿ ಭಾರತದ ಪ್ರಯತ್ನ ಅಪಾರವಾಗಿದೆ. ಹಾಗೆಯೇ, ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಕ್ರೇನ್‌ ರಾಜಧಾನಿ ಕೀವ್‌ಗೆ ಭೇಟಿ ನೀಡುವಂತೆ ಆಹ್ವಾನಿಸುತ್ತೇವೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರನ್ನೂ ನಾವು ಆಹ್ವಾನಿಸುತ್ತೇವೆ. ಆ ಮೂಲಕ ನಮ್ಮ ದೇಶಕ್ಕೆ ಬೆಂಬಲ ನೀಡುವಂತೆ ಬಯಸುತ್ತೇವೆ. ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ಅವರ ಜತೆ ಮಾತುಕತೆ ನಡೆಸುವಂತೆ ಕೋರುತ್ತೇವೆ” ಎಂದು ತಿಳಿಸಿದರು.

ಇದನ್ನೂ ಓದಿ: Supreme Court : ಯುದ್ಧಪೀಡಿತ ಉಕ್ರೇನ್​ನಿಂದ ವಾಪಸಾದ ವಿದ್ಯಾರ್ಥಿಗಳಿಗೆ ಇಲ್ಲಿದೆ ಶುಭ ಸುದ್ದಿ

ಚೀನಾಕ್ಕಿಂತ ಭಾರತದ ಪಾತ್ರ ಹಿರಿದು

ರಷ್ಯಾ ಆಕ್ರಮಣ ನಿಲ್ಲಲು ಚೀನಾಕ್ಕಿಂತ ಭಾರತದ ಪಾತ್ರ ಹಿರಿದಾಗಿದೆ ಎಂದು ಎಮಿನೆ ಝಪರೋವಾ ಹೇಳಿದರು. “ಜಾಗತಿಕ ವೇದಿಕೆಗಳಲ್ಲಿ ಭಾರತವು ಶಾಂತಿ ಸ್ಥಾಪನೆ ಕುರಿತು ಮಾತನಾಡಿದೆ. ರಷ್ಯಾಗೂ ಇದೇ ಸಂದೇಶವನ್ನು ರವಾನಿಸಿರುವ ಕಾರಣ ನಮಗೆ ಭಾರತದ ಮುಂದಾಳತ್ವದಲ್ಲಿ ನಂಬಿಕೆ ಇದೆ. ಮಾತುಕತೆ ಮೂಲಕ ಯಾವುದೇ ಸಮಸ್ಯೆ ಬಗೆಹರಿಸಿಕೊಳ್ಳಬಹುದು, ರಾಜತಾಂತ್ರಿಕ ಮಾರ್ಗಗಳ ಮೂಲಕ ಶಾಂತಿ ಸ್ಥಾಪನೆ ಮಾಡಿಕೊಳ್ಳಬಹುದು ಎಂಬ ಭಾರತದ ವಿಚಾರ ಉತ್ತಮವಾಗಿದೆ. ನಾವೂ ಇದನ್ನೇ ನಂಬುತ್ತೇವೆ. ಆದರೆ, ಶಾಂತಿ ಸ್ಥಾಪನೆ ಕುರಿತು ಚೀನಾ ನೀಡಿರುವ ಯೋಜನೆಯು ಸಕಾರಾತ್ಮಕವಾಗಿಲ್ಲ” ಎಂದರು. ಶಾಂಘೈ ಸಹಕಾರ ಸಂಘಟನೆ ಸೇರಿ ಜಗತ್ತಿನ ಹಲವು ವೇದಿಕೆಗಳಲ್ಲಿ ನರೇಂದ್ರ ಮೋದಿ ಅವರು ಶಾಂತಿ ಸ್ಥಾಪನೆ ಕುರಿತು ಪ್ರಸ್ತಾಪಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೇ, “ಯುದ್ಧಕ್ಕೆ ಇದು ಕಾಲವಲ್ಲ” ಎಂಬ ಸಂದೇಶ ರವಾನಿಸಿದ್ದಾರೆ.

Exit mobile version