Site icon Vistara News

S Jaishankar: ಅಧಿಕಪ್ರಸಂಗಿ ಚೀನಾಗೆ ಭಾರತದ ತಪರಾಕಿ

US sanction

S Jaishankar

ನವದೆಹಲಿ: ಅರುಣಾಚಲ ಪ್ರದೇಶ (Arunachal Pradesh) ವಿಚಾರದಲ್ಲಿ ಪದೇ ಪದೆ ತಗಾದೆ ತೆಗೆಯುವ ಚೀನಾಗೆ (China) ವಿದೇಶಾಂಗ ಸಚಿವ (External Affairs Minister) ಎಸ್.ಜೈಶಂಕರ್ (S Jaishankar) ಖಡಕ್‌ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ʼʼನಿಮ್ಮ ಮನೆಗೆ ನಾವು ಬೇರೆ ಹೆಸರಿಟ್ಟ ಮಾತ್ರಕ್ಕೆ ಅದು ನಮ್ಮದಾಗುತ್ತಾ?ʼʼ ಎಂದು ಪ್ರಶ್ನಿಸಿದ್ದಾರೆ. ಆ ಮೂಲಕ ಚೀನಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅರುಣಾಚಲ ಪ್ರದೇಶಕ್ಕೆ ಬೇರೆ ಹೆಸರು ಇಟ್ಟು ಹಕ್ಕು ಸಾಧಿಸಲು ಮುಂದಾಗಿರುವ ಚೀನಾದ ಅಧಿಕ ಪ್ರಸಂಗಕ್ಕೆ ಸರಿಯಾಗಿ ಎದಿರೇಟು ನೀಡಿದ್ದಾರೆ.

ಗುಜರಾತ್‌ನ ಸೂರತ್‌ನಲ್ಲಿ ಮಾತನಾಡಿದ ಅವರು, “ನಾವು ನಿಮ್ಮ ಮನೆಯ ಹೆಸರನ್ನು ಬದಲಾಯಿಸಿದರೆ, ಅದು ನಮ್ಮದಾಗುತ್ತಾ? ಅರುಣಾಚಲ ಪ್ರದೇಶವು ಭಾರತದ ರಾಜ್ಯ. ಮುಂದೆಯೂ ಹೌದು. ಹೆಸರು ಬದಲಾಯಿಸುವುದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ಸೇನೆಯನ್ನು ಅಲ್ಲಿ (ವಾಸ್ತವಿಕ ನಿಯಂತ್ರಣ ರೇಖೆ) ನಿಯೋಜಿಸಲಾಗಿದೆʼʼ ಎಂದು ಅವರು ಹೇಳಿದ್ದಾರೆ.

ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳ 30 ಹೊಸ ಹೆಸರುಗಳ ನಾಲ್ಕನೇ ಪಟ್ಟಿಯನ್ನು ಚೀನಾ ಭಾನುವಾರ (ಮಾರ್ಚ್‌ 31) ಬಿಡುಗಡೆ ಮಾಡಿ ತನ್ನದೆಂದು ಹೇಳಿಕೊಂಡಿತ್ತು. ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡುವುದನ್ನು ಭಾರತ ಬಲವಾಗಿ ವಿರೋಧಿಸಿದೆ ಮತ್ತು ರಾಜ್ಯವು ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಪ್ರತಿಪಾದಿಸಿದೆ.

ಇದು ಚೀನಾ ಬಿಡುಗಡೆ ಮಾಡಿರುವ ನಾಲ್ಕನೇ ಪಟ್ಟಿ. ಕಳೆದ ಮೂರು ಪಟ್ಟಿಗಳಲ್ಲಿ ಭಾರತದ ವಿವಿಧ ಗ್ರಾಮಗಳನ್ನು ತನ್ನದೆಂದು ಹೆಸರಿಸಿ ಬಿಡುಗಡೆ ಮಾಡಿತ್ತು. 2017ರಲ್ಲಿ ಚೀನಾ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಭಾರತದ 6 ಹಳ್ಳಿಗಳನ್ನು ತನ್ನದೆಂದು ಹೇಳಿತ್ತು. 2021ರಲ್ಲಿ ಬಿಡುಗಡೆಯಾದ 2ನೇ ಪಟ್ಟಿಯಲ್ಲಿ 15 ಪ್ರದೇಶಗಳನ್ನು ಡ್ರ್ಯಾಗನ್‌ ರಾಷ್ಟ್ರ ತನ್ನದು ಎಂದು ಹೇಳಿಕೊಂಡಿತ್ತು. ಇನ್ನು ಕಳೆದ ವರ್ಷ ಮತ್ತೆ ಮೂರನೇ ಪಟ್ಟಿ ಹೊರ ತಂದು ಅರುಣಾಚಲ ಪ್ರದೇಶದ 11 ವಲಯಗಳನ್ನು ತನ್ನದೆಂದು ಹೆಸರಿಸಿ ಭಾರತವನ್ನು ಕೆಣಕಿತ್ತು.

ಕಳೆದ ತಿಂಗಳು ಜೈಶಂಕರ್ ಅವರು ಅರುಣಾಚಲ ಪ್ರದೇಶದ ಮೇಲೆ ಚೀನಾದ ಹಕ್ಕನ್ನು ‘ಹಾಸ್ಯಾಸ್ಪದ’ ಎಂದು ಕರೆದಿದ್ದರು ಮತ್ತು ಇದು ಭಾರತದ ನೈಸರ್ಗಿಕ ಭಾಗ ಎಂದು ಪ್ರತಿಪಾದಿಸಿದ್ದರು. ಇತ್ತೀಚೆಗೆ ಅಮೆರಿಕ ಕೂಡ, ಅರುಣಾಚಲ ಪ್ರದೇಶವನ್ನು ಭಾರತೀಯ ಭೂ ಪ್ರದೇಶವೆಂದು ಗುರುತಿಸಿದೆ. ಅಲ್ಲದೆ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಮಿಲಿಟರಿ, ನಾಗರಿಕರ ಒಳನುಸುಳುವಿಕೆ ಅಥವಾ ಅತಿಕ್ರಮಣಗಳ ಮೂಲಕ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಯಾವುದೇ ಏಕಪಕ್ಷೀಯ ಪ್ರಯತ್ನಗಳನ್ನು ಬಲವಾಗಿ ವಿರೋಧಿಸುವುದಾಗಿ ತಿಳಿಸಿತ್ತು.

ಇದನ್ನೂ ಓದಿ: Arunachal Pradesh: ಅರುಣಾಚಲ ಪ್ರದೇಶ ಭಾರತದ್ದು ಎಂದ ಅಮೆರಿಕ; ಚೀನಾಗೆ ಮುಖಭಂಗ

ಅಮೆರಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಖ್ಯ ಉಪ ವಕ್ತಾರ ವೇದಾಂತ್‌ ಪಟೇಲ್‌ ಅವರು ಅರುಣಾಚಲ ಪ್ರದೇಶದ ಕುರಿತು ಮಾತನಾಡಿದ್ದರು. “ಅರುಣಾಚಲ ಪ್ರದೇಶವು ಭಾರತದ್ದು ಎಂದು ಅಮೆರಿಕ ಗುರುತಿಸುತ್ತದೆ. ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಬಳಿ ಚೀನಾ ಯಾವುದೇ ರೀತಿಯ ಅತಿಕ್ರಮಣ, ನಮ್ಮ ಭೂಪ್ರದೇಶ ಎಂಬುದಾಗಿ ಹೇಳುವುದು, ಹೆಚ್ಚುವರಿ ಸೈನಿಕರನ್ನು ನಿಯೋಜಿಸುವುದು ಸೇರಿ ಹಲವು ಚಟುವಟಿಕೆಗಳನ್ನು ಅಮೆರಿಕ ವಿರೋಧಿಸುತ್ತದೆ” ಎಂದು ಹೇಳಿದ್ದರು. ಈ ಮೂಲಕ ಚೀನಾಗೆ ಭಾರೀ ಮುಖಭಂಗವಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version