Site icon Vistara News

Sabarimala: ಶಬರಿಮಲೆಯಲ್ಲಿ ಭಕ್ತರಿಗೆ ಮುಳುವಾಗುತ್ತಿರುವ ಶಿಲಾಕಂಬ!

shabarimale crowd

shabarimale crowd

ತಿರುವನಂತಪುರಂ: ಮೂಲ ಸೌಕರ್ಯ ಇಲ್ಲದೆ ಭಕ್ತರ ಪರದಾಟ, ಮಕ್ಕಳ ಕಣ್ಣೀರು, ನಡೆದಷ್ಟು ಮುಗಿಯದ ಸರದಿ, ಗಂಟೆಗಟ್ಟಲೆ ಕಾದರೂ ಕರಗದ ಜನ ಸಂದಣಿ…ಇದು ಸದ್ಯ ಶಬರಿಮಲೆಯಲ್ಲಿ (Sabarimala)ಕಂಡು ಬರುವ ಚಿತ್ರಣ. ಹರಿಹರಪುತ್ರ ಅಯ್ಯಪ್ಪ ದೇವರ ನೆಲೆಯಾದ ಶಬರಿಮಲೆಯಲ್ಲಿ ಮೂಲಸೌಕರ್ಯಗಳ ಅವ್ಯವಸ್ಥೆಯಿಂದಾಗಿ ಸಾವಿರಾರು ಭಕ್ತರು ಪರದಾಡುತ್ತಿದ್ದಾರೆ. ಹಿಂದೆಂದೂ ಇಲ್ಲದಷ್ಟು ಜನಸಂದಣಿ ಈ ವರ್ಷ ಕಂಡುಬಂದಿದ್ದು, ನೂಕುನುಗ್ಗಲಿನಲ್ಲಿ ದರ್ಶನವೇ ಸಾಧ್ಯವಾಗದೆ ಸಾವಿರಾರು ಭಕ್ತರು ನಿರಾಸೆಯಿಂದ ಮರಳಿರುವ ಪ್ರಸಂಗವೂ ನಡೆದಿದೆ. ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಹೇಳಿದ್ದರೂ ಸ್ಥಳೀಯ ವರದಿಗಳು ಬೇರೆಯದೇ ಚಿತ್ರಣ ನೀಡುತ್ತಿವೆ. ಭಕ್ತರು ದೇವಾಲಯವನ್ನು ತಲುಪಲು ಕನಿಷ್ಠ 18 ಗಂಟೆಗಳ ಕಾಲ ಕಾಯಬೇಕಾಗುತ್ತದೆ ಮತ್ತು ಅಲ್ಲಿಯವರೆಗೆ ಅವರು ಹತ್ತಿರದ ಅರಣ್ಯ ಪ್ರದೇಶಗಳಲ್ಲಿ ಉಳಿದುಕೊಂಡು ನದಿಯಲ್ಲಿ ಸ್ನಾನ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮಾಧ್ಯಮ ವರದಿಯಲ್ಲೇನಿದೆ?

ರಾಷ್ಟ್ರೀಯ ತಮಿಳು ದಿನಪತ್ರಿಕೆ ವರದಿಯ ಪ್ರಕಾರ, ಕಳೆದ ಕೆಲವು ವಾರಗಳಿಂದ ಭಕ್ತರು ಕಾಡಿನಲ್ಲಿ ನೆಲೆಸಿದ್ದು, ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ಯಾವಾಗ ಹೊರಡುತ್ತದೆ ಎಂದು ತಿಳಿಯದೆ ಗಂಟೆಗಟ್ಟಲೆ ಕಾಯುತ್ತಿದ್ದಾರಂತೆ. ಇನ್ನು ಪಂಪಾ ನದಿಯಲ್ಲಿ ಸ್ನಾನ ಮಾಡಲು ಕೂಡ ಹಲವು ಗಂಟೆಗಳ ಕಾಲ ಸರದಿಯಲ್ಲಿ ನಿಲ್ಲಬೇಕಾಗುತ್ತದೆ ಎಂದು ವರದಿ ಹೇಳಿದೆ. ಈ ಪ್ರದೇಶದಲ್ಲಿ ಜನರಿಗೆ ಯಾವುದೇ ಡೇರೆ ಅಥವಾ ಮೂಲ ಸೌಕರ್ಯಗಳಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬೆಟ್ಟವನ್ನು ಹತ್ತಿದ ಭಕ್ತರನ್ನು ಮರಕುಟಮ್ ಕ್ಯೂ ಕಾಂಪ್ಲೆಕ್ಸ್ (Marakutam Q Complex) ಹೆಸರಿನಲ್ಲಿ ನಿರ್ಮಿಸಲಾದ ಶೆಡ್‌ನಲ್ಲಿ ಕಾಯುವಂತೆ ಮಾಡಲಾಗುತ್ತದೆ. ಇಲ್ಲಿ ಭಕ್ತರು ಕನಿಷ್ಠ ನಾಲ್ಕು ಗಂಟೆಗಳ ಕಾಲ ಕಾಯಬೇಕು. ಒಟ್ಟಾರೆಯಾಗಿ ಭಕ್ತರನ್ನು 12-18 ಗಂಟೆಗಳ ಕಾಲ ಶೆಡ್‌ಗಳಲ್ಲಿ ಕಾಯಿಸಿದ ನಂತರ ಅಯ್ಯಪ್ಪನ ಭೇಟಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇಷ್ಟಲ್ಲ ಕಷ್ಟಪಡುವ ಭಕ್ತರು 18 ಮೆಟ್ಟಿಲುಗಳನ್ನು ಹತ್ತಿ ಶ್ರೀಕೋವಿಲ್ ಫ್ಲೈಓವರ್ ತಲುಪಿ ಸರತಿ ಸಾಲಿನಲ್ಲಿ ನಿಂತರೂ, ಅಯ್ಯಪ್ಪನ ದರ್ಶನ ಕೂಡ ಸಮರ್ಪಕವಾಗಿರುವುದಿಲ್ಲ. ಕೆಲವೇ ಕ್ಷಣಗಳಲ್ಲಿ ಪೊಲೀಸರು ಮುಂದಕ್ಕೆ ತಳ್ಳುತ್ತಾರೆ ಎಂದು ವರದಿ ತಿಳಿಸಿದೆ.

ಸಿಎಂ ಹೇಳಿದ್ದೇನು?

ಈ ಮಧ್ಯೆ ಪಿಣರಾಯಿ ವಿಜಯನ್‌ ಮಾತನಾಡಿ, ಭಕ್ತರ ದಟ್ಟಣೆಯನ್ನು ಪರಿಗಣಿಸಿ ದೇವರ ದರ್ಶನದ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ. ಶಬರಿಮಲೆಯಲ್ಲಿ ಯಾವುದೇ ಅನಿಯಂತ್ರಿತ ಪರಿಸ್ಥಿತಿ ಇಲ್ಲ, ಎಲ್ಲ ಸರ್ಕಾರಿ ಸಂಸ್ಥೆಗಳು ದೇವಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಮಧ್ಯಪ್ರವೇಶಿಸುತ್ತಿವೆ ಎಂದು ತಿಳಿಸಿದ್ದಾರೆ.

ಮೃತಪಟ್ಟ ಭಕ್ತರು

ಪುಲ್ಲುಮೇಡು ಅರಣ್ಯ ಮಾರ್ಗದಲ್ಲಿ ಬುಧವಾರ (ಡಿಸೆಂಬರ್‌ 13) ಶಬರಿಮಲೆ ಭಕ್ತರೊಬ್ಬರು ಮೃತಪಟ್ಟಿದ್ದಾರೆ. ಸಾಂಪ್ರದಾಯಿಕ ಅರಣ್ಯ ಮಾರ್ಗದ ಮೂಲಕ ದೇವಾಲಯಕ್ಕೆ ಹೋಗುವಾಗ ಅವರು ಕುಸಿದು ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶಬರಿಮಲೆಯಲ್ಲಿ ಡಿಸೆಂಬರ್‌ 9ರಂದು 12 ವರ್ಷದ ಬಾಲಕಿ ಸಾವನ್ನಪ್ಪಿದ ನಂತರ ಈ ಘಟನೆ ನಡೆದಿದೆ.

ಇದನ್ನೂ ಓದಿ: Sabarimala: ಅಯ್ಯಯ್ಯಪ್ಪಾ ಅವ್ಯವಸ್ಥೆ! ಶಬರಿಮಲೆಯಲ್ಲಿ 10 ಕಿಮೀ ಕ್ಯೂ, ನೂಕುನುಗ್ಗಲು, ಪ್ರತಿಭಟನೆ

ಶಿಲಾ ಕಂಬಗಳಿಂದ ಸಮಸ್ಯೆ

ದೇಗುಲದ ಹದಿನೆಂಟು ಮೆಟ್ಟಿಲಿನ ಬಳಿ ಸ್ಥಾಪಿಸಲಾದ ನೂತನ ಶಿಲಾ ಕಂಬಗಳಿಂದ ಸಮಸ್ಯೆಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈಡ್ರಾಲಿಕ್‌ ಚಾವಣಿ ನಿರ್ಮಾಣದ ಭಾಗವಾಗಿ ಈ ಕಂಬಗಳನ್ನು ರಚಿಸಲಾಗಿದೆ. ಸಮಸ್ಯೆಯನ್ನು ದೇವಸ್ವಂ ಬೋರ್ಡ್‌ ಗಮನಕ್ಕೆ ತರಲಾಗಿದೆ ಎಂದು ಪತ್ತನಂತಿಟ್ಟ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಹದಿನೆಂಟು ಮೆಟ್ಟಿಲಿನ ಮೂಲಕ ಭಕ್ತರನ್ನು ಕಳುಹಿಸುವಲ್ಲಿ ಪೊಲೀಸರು ಎಡವಿದ್ದಾರೆ ಎನ್ನುವ ದೇವಸ್ವಂ ಬೋರ್ಡ್‌ ಆರೋಪದ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ನೀಡಲಾಗಿದೆ. ಈ ಹಿಂದೆ ಮುಖ್ಯಮಂತ್ರಿ ಅವರೊಂದಿಗೆ ನಡೆದ ಸಮಾಲೋಚನೆ ವೇಳೆ ಹದಿನೆಂಟು ಮೆಟ್ಟಿಲಿನ ಮೂಲಕ 1 ನಿಮಿಷದಲ್ಲಿ ಕನಿಷ್ಠ 75 ಭಕ್ತರನ್ನು ಕಳುಹಿಸಬೇಕು ಎಂದು ದೇವಸ್ವಂ ಬೋರ್ಡ್‌ ಹೇಳಿತ್ತು. ಇದು ಸಾಧ್ಯವಿಲ್ಲ ಎಂದು ಆಗಲೇ ಎಡಿಜಿಪಿ ತಿಳಿಸಿದ್ದರು. ಇದರ ಬೆನ್ನಲ್ಲೇ ಸುಗಮ ಸಂಚಾರಕ್ಕೆ ತಡೆಯುಂಟು ಮಾಡುವ ಕಲ್ಲಿನ ಕಂಬಗಳನ್ನು ಸ್ಥಳಾಂತರಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಅಲ್ಲದೆ ಈ ಕಂಬದ ವಿರುದ್ಧ ಹೈಕೋರ್ಟ್‌ನಲ್ಲಿ ದೂರು ದಾಖಲಾಗಿದೆ. ಈ ಮಧ್ಯೆ ಶಬರಿಮಲೆಯಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಲು ಇಂದು (ಡಿಸೆಂಬರ್‌ 14) ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್‌ ಭೇಟಿ ನೀಡಿ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.

Exit mobile version