ಜೈಪುರ: ರಾಜಸ್ಥಾನದಲ್ಲಿ ಇದುವರೆಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಕಾಂಗ್ರೆಸ್ ಪಕ್ಷದ್ದೇ ನಾಯಕ ಸಚಿನ್ ಪೈಲಟ್ (Gehlot VS Pilot) ನಡುವಿನ ಸಮರ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಅಶೋಕ್ ಗೆಹ್ಲೋಟ್ ಅವರು ಪೈಲಟ್ ವಿರುದ್ಧ ಬಹಿರಂಗವಾಗಿಯೇ, ಅದರಲ್ಲೂ ಕಟು ಪದಗಳಿಂದ ಟೀಕಿಸುವ ಮೂಲಕ ಪಕ್ಷದ ಆಂತರಿಕ ಬಿಕ್ಕಟ್ಟಿನ ತೀವ್ರತೆಯನ್ನು ಜಗಜ್ಜಾಹೀರುಗೊಳಿಸಿದ್ದಾರೆ.
ಮಾಧ್ಯಮ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಗೆಹ್ಲೋಟ್, “ಸಚಿನ್ ಪೈಲಟ್ ಒಬ್ಬ ದ್ರೋಹಿಯಾಗಿದ್ದಾರೆ. ಅವರ ಪರವಾಗಿ 10 ಶಾಸಕರೂ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಎಂದಿಗೂ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ. ಅಷ್ಟಕ್ಕೂ, ವಿಶ್ವಾಸಘಾತುಕ ವ್ಯಕ್ತಿಯನ್ನು ಯಾರೂ ಮುಖ್ಯಮಂತ್ರಿಯನ್ನಾಗಿ ಸ್ವೀಕರಿಸುವುದಿಲ್ಲ” ಎಂದು ಹೇಳಿದ್ದಾರೆ.
ಸಚಿನ್ ‘ಬಂಡಾಯ’ಕ್ಕೆ ಅಮಿತ್ ಶಾ ‘ಪೈಲಟ್’
“2020ರಲ್ಲಿ ಸಚಿನ್ ಪೈಲಟ್ ಬಂಡಾಯವೇಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈವಾಡವಿದೆ” ಎಂದೂ ಗೆಹ್ಲೋಟ್ ಆರೋಪ ಮಾಡಿದ್ದಾರೆ. “ಸಚಿನ್ ಪೈಲಟ್ ಅವರು ಶಾಸಕರನ್ನು ಹೈಜಾಕ್ ಮಾಡಿ, ಪ್ರತ್ಯೇಕ ಸ್ಥಳದಲ್ಲಿ ಇರಿಸಿದ್ದರ ಹಿಂದೆ ಶಾ ಕುತಂತ್ರವಿದೆ. ಬಿಜೆಪಿ ಕಚೇರಿಯಿಂದಲೇ ಬಂಡಾಯ ಶಾಸಕರಿಗೆ 5-10 ಕೋಟಿ ರೂ. ನೀಡಲಾಗಿದೆ. ಇದಕ್ಕೆ ನನ್ನ ಬಳಿ ಸಾಕ್ಷ್ಯ ಇದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Gehlot VS Pilot | ಕಾಂಗ್ರೆಸ್ ತೊರೆದು ಬಿಜೆಪಿ ಸೇರುವರೇ ಅಶೋಕ್ ಗೆಹ್ಲೋಟ್? ಸಚಿನ್ ಪೈಲಟ್ ಹೇಳಿದ್ದೇನು?