ಮುಂಬೈ: ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಭದ್ರತಾ ಸಿಬ್ಬಂದಿ(VVIP Security guard) ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ(Self Harming) ಮಾಡಿಕೊಂಡಿದ್ದಾರೆ. ರಾಜ್ಯ ಮೀಸಲು ಪೊಲೀಸ್ ಪಡೆಯ ಜವಾನ್ ಪ್ರಕಾಶ್ ಕಾಪ್ಡೆ (39) ಮೃತ ದುರ್ದೈವಿ. ಸಚಿನ್ ಅವರ ವಿವಿಐಪಿ ಭದ್ರತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಪ್ಡೆ, ಇತ್ತೀಚೆಗಷ್ಟೇ ಕರ್ತವ್ಯಕ್ಕೆ ರಜೆ ಪಡೆದು ಊರಿಗೆ ತೆರಳಿದ್ದರು. ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿರುವ ತಮ್ಮ ಮನೆಯಲ್ಲಿ ಬುಧವಾರ ಬೆಳಗ್ಗಿನ ಜಾವ 1:30ಕ್ಕೆ ತನ್ನ ಸರ್ವೀಸ್ ಗನ್ ನಿಂದ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಪ್ರಕಾಶ್ ಅದಾಗಲೇ ಮೃತಪಟ್ಟಿದ್ದರು. ಪ್ರಕಾಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆದರೆ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ತಿಳಿಯಲು ಪ್ರಕಾಶ್ ಅವರ ಪೋಷಕರು, ಪತ್ನಿ, ಮಕ್ಕಳು, ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿವಿಐಪಿ ಭದ್ರತಾ ಸಿಬ್ಬಂದಿಯ ಆತ್ಮಹತ್ಯೆಯ ಬಗ್ಗೆಯೂ ಎಸ್‌ಆರ್‌ಪಿಎಫ್ ತನಿಖೆ ನಡೆಸುತ್ತಿದೆ.
ಪ್ರಕಾಶ್ ಕಾಪ್ಡೆ ಪತ್ನಿ, ಇಬ್ಬರು ಪುಟ್ಟ ಮಕ್ಕಳು, ಪೋಷಕರು, ಸಹೋದರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕಾಶ್ ಕಾಪ್ಡೆ ಮೃತದೇಹ, ರಿವಾಲ್ವರ್ , ಮೊಬೈಲ್ ಫೋನ್ ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಘಟನೆಗೆ ಕಾರಣಗಳು ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಜಾಮ್ನೆರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ಕಿರಣ್ ಶಿಂಧೆ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪಡೆದಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ, ಭಾರತ ಸರ್ಕಾರವು ಭಾರತ ರತ್ನ ಗೌರವ ನೀಡಿದೆ. ಪ್ರಸ್ತುತ ಅವರು ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಹಾಗೂ ಶತಕ ಸಿಡಿಸಿರುವ ದಾಖಲೆ ಈಗಲೂ ತೆಂಡೂಲ್ಕರ್ ಹೆಸರಲ್ಲಿದೆ.